ಭೀಮಾ-ಕೋರೆಗಾಂವ್ ಪ್ರಕರಣ: ಪ್ರೊ.ಹ್ಯಾನಿಬಾಬು ಬಂಧನಕ್ಕೆ ಪಿಯುಸಿಎಲ್ ಟೀಕೆ

Update: 2020-08-03 14:07 GMT

ಹೊಸದಿಲ್ಲಿ, ಆ.3: ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ದಿಲ್ಲಿ ವಿವಿಯ ಪ್ರೊಫೆಸರ್ ಎಂ.ಟಿ.ಹ್ಯಾನಿಬಾಬು ಅವರನ್ನು ಬಂಧಿಸಿರುವುದನ್ನು ಟೀಕಿಸಿರುವ ದಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಇದು ದೇಶದಲ್ಲಿಯ ಬುದ್ಧಿಜೀವಿಗಳ ಅಪರಾಧೀಕರಣದ ಮತ್ತು ಅವರನ್ನು ಮೌನವಾಗಿಸುವ ಪ್ರಯತ್ನವಾಗಿದೆ ಎಂದು ಬಣ್ಣಿಸಿದೆ. ಹ್ಯಾನಿಬಾಬು ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಜು.28ರಂದು ಬಂಧಿಸಿದೆ.

ಸರಕಾರವು ಸಾಮಾಜಿಕ ಹೋರಾಟಗಾರರು ಮತ್ತು ವಿದ್ವಾಂಸರನ್ನು ದಂಡಿಸಲು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದೂ ಪಿಯುಸಿಎಲ್ ಆರೋಪಿಸಿದೆ.

ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ತಮ್ಮ ತನಿಖೆಯ ಅಂಗವಾಗಿ ಮಹಾರಾಷ್ಟ್ರ ಪೊಲೀಸರು 2019, ಸೆಪ್ಟೆಂಬರ್‌ನಲ್ಲಿ ಬಾಬು ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಹಲವಾರು ವಿದ್ಯುನ್ಮಾನ ಸಾಧನಗಳು ಮತ್ತು ಪುಸ್ತಕಗಳನ್ನು ವಶಪಡಿಸಿಕೊಂಡಿದ್ದರು.

2019ರಲ್ಲಿ ಯಾವುದೇ ಸರ್ಚ್ ವಾರಂಟ್ ಇಲ್ಲದೆ ಬಲವಂತದಿಂದ ಬಾಬು ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು ಎನ್ನುವುದು ಈ ಕಾನೂನು ಜಾರಿ ಸಂಸ್ಥೆಗಳಿಂದ ಬಾಬು ಅವರ ನಾಗರಿಕ ಮತ್ತು ಕಾನೂನಾತ್ಮಕ ಹಕ್ಕುಗಳ ಹಲವಾರು ಮೂಲಭೂತ ಉಲ್ಲಂಘನೆಗಳಲ್ಲಿ ಒಂದಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಪಿಯುಸಿಎಲ್, ‘ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಪಟ್ಟಿಯನ್ನು ಬಾಬು ಅವರಿಗೆ ನೀಡಲು ಪೊಲೀಸರು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಇದು ಬಾಬು ವಿರುದ್ಧ ಕಲ್ಪಿತ ಸಾಕ್ಷ್ಯವನ್ನು ಸೇರಿಸಲು ನಡೆಸಿರುವ ಸಂಚು ಎನ್ನುವುದು ಸ್ಪಷ್ಟವಾಗಿದೆ ಮತ್ತು ಇದು ಈಗ ತನಿಖಾ ಸಂಸ್ಥೆಗಳ ಮಾಮೂಲು ಪ್ರವೃತ್ತಿಯಾಗಿದೆ. ಬಾಬು ಅವರ ಬಂಧನದ ವಿರುದ್ಧ ಈಗ ನಾವು ಧ್ವನಿಯೆತ್ತದಿದ್ದರೆ ನಾವು ಭಾರತವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು’ ಎಂದು ಹೇಳಿದೆ.

ಬಾಬು ವಿರುದ್ಧ ಎನ್‌ಐಎ ಕಾರ್ಯಾಚರಣೆ ಸಂಪೂರ್ಣ ದ್ವೇಷದಿಂದ ಕೂಡಿದೆ ಎಂದು ಆರೋಪಿಸಿರುವ ಪಿಯುಸಿಎಲ್,ಬಾಬು ಮತ್ತು ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇತರ ಸಾಮಾಜಿಕ ಹೋರಾಟಗಾರರು ಮತ್ತು ಬುದ್ಧಿಜೀವಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಅವರ ವಿರುದ್ಧ ಬಾಕಿಯಿರುವ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಬಾಬು ಬಂಧನದ ವಿರುದ್ಧ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಕ್ಕೂಟಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿವೆ.

ದಿಲ್ಲಿ ವಿವಿಯ ಇಂಗ್ಲೀಷ್ ವಿಭಾಗದಲ್ಲಿ ಬೋಧಕರಾಗಿರುವ ಬಾಬು ಸಿಪಿಐ(ಮಾವೋವಾದಿ) ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ನಾಗಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಅವರನ್ನು ಬೆಂಬಲಿಸಲು ರಚನೆಯಾಗಿರುವ ಸಮಿತಿಯ ಸದಸ್ಯರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News