ಕಷ್ಟ ಕಾಲದಲ್ಲಿ ಕಲಾವಿದರು ಮತ್ತು ಕಲೆಗಳ ರಕ್ಷಣೆ

Update: 2020-08-03 17:56 GMT

ಇಂತಹ ಸನ್ನಿವೇಶದಲ್ಲಿ ಮಿಲಿಯಗಟ್ಟಲೆ ಪ್ರದರ್ಶನ ಕಲಾವಿದರಿಗೆ, ಕುಶಲಕರ್ಮಿಗಳಿಗೆ ಬದುಕು ಸಾಗಿಸಲು ಬೇಕಾದ ಒಂದು ಸಾಂಸ್ಕೃತಿಕ ಅರ್ಥವ್ಯವಸ್ಥೆಯನ್ನು ಸೃಷ್ಟಿಸಬೇಕು. ಇದಕ್ಕೆ ಈಗಿನ ಸನ್ನಿವೇಶ ನಿಜವಾಗಿಯೂ ಒಂದು ಅತ್ಯುತ್ತಮ ಅವಕಾಶ. ಈ ಮೂಲಕ ಸೃಜನಾತ್ಮಕ ಕಲೆಗಳು ಭಾರತದ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ನಮ್ಮ ಸಾಮೂಹಿಕ ಅಸ್ಮಿತೆಗಳು, ಆಕಾಂಕ್ಷೆಗಳು, ದುರಂತಗಳು, ಸಂಭ್ರಮಗಳು ಹಾಗೂ ಸಾಮರ್ಥ್ಯದ ಅರ್ಥೈಸುವಿಕೆ ಮತ್ತು ಅಭಿವ್ಯಕ್ತಿ ನಮ್ಮ ದೇಶದ ಕಲೆಗಳ ಉಳಿವನ್ನು ಅವಲಂಬಿಸಿದೆ. ನಾವು ನಮ್ಮ ಕಲಾವಿದರನ್ನು ಕಳೆದುಕೊಂಡಲ್ಲಿ, ಒಂದು ಮಿಲಿಯ ದೇವಾಲಯಗಳು ಹಾಗೂ ಟ್ರಿಲಿಯಗಟ್ಟಲೆ ಮೌಲ್ಯದ ಆರ್ಥಿಕ ಅಭಿವೃದ್ಧಿ ಕೂಡ ನಮ್ಮನ್ನು ಮತ್ತೊಮ್ಮೆ ಪೂರ್ಣವಾಗಿಸಲಾರವು.


ಭಾರತದಲ್ಲಿರುವ ಕುಶಲ ಕಲೆಗಳ ಪ್ರದರ್ಶನ ಕಲೆಗಳ ವ್ಯಾಪ್ತಿ ವೈವಿಧ್ಯ ಮತ್ತು ಶ್ರೇಷ್ಠತೆ ದಂಗು ಬಡಿಸುತ್ತದೆ. ಆದರೆ ದಾಖಲೆಗಳಲ್ಲಿ, ಲಿಖಿತ ರೂಪದಲ್ಲಿ ನಮ್ಮ ದೇಶದಲ್ಲಿ ಸೃಜನಾತ್ಮಕ ಅರ್ಥವ್ಯವಸ್ಥೆ ಅಸ್ತಿತ್ವದಲ್ಲೇ ಇಲ್ಲ. ಈ ಕಲೆಗಳ ಗಾತ್ರದ ಬಗ್ಗೆಯಾಗಲಿ ಅಥವಾ ಸ್ವರೂಪದ ಬಗ್ಗೆಯಾಗಲಿ ಅಧಿಕಾರಯುತವಾದ ವ್ಯಾಖ್ಯಾನಗಳೂ ಇಲ್ಲ; ದತ್ತಾಂಶಗಳೂ ಇಲ್ಲ. ಸೃಜನಾತ್ಮಕ ಅರ್ಥವ್ಯವಸ್ಥೆ ಮತ್ತು ಇದನ್ನು ಅವಲಂಬಿಸಿರುವವರ ಮೇಲೆ ಆಗುವ ಪರಿಣಾಮಗಳನ್ನು ಲೆಕ್ಕಿಸದೆ ದೇಶದ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳನ್ನು ರೂಪಿಸಲಾಗುತ್ತಿದೆ.

ಬ್ರಿಟಿಷ್ ಕೌನ್ಸಿಲ್ ಸಿದ್ಧಪಡಿಸಿರುವ ‘ಟೇಕಿಂಗ್ ದಿ ಟೆಂಪರೇಚರ್’ ಎಂಬ ಇತ್ತೀಚಿನ ವರದಿಯೊಂದು ಕೊರೋನ ಸಾಂಕ್ರಾಮಿಕ ಮತ್ತು ಅದರ ನಂತರದ ಬೆಳವಣಿಗೆಗಳು ದೇಶದ ಸೃಜನಾತ್ಮಕ ಅರ್ಥವ್ಯವಸ್ಥೆಯ ಮೇಲೆ ಹೇಗೆ, ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ. ವರದಿಯ ಪ್ರಕಾರ, ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಸಣ್ಣ ಹಾಗೂ ಮಧ್ಯಮ ಗಾತ್ರದ ಮನೋರಂಜನಾ ರಂಗ ಸೃಜನಾತ್ಮಕ ರಂಗದ ಶೇ. 88ರಷ್ಟಿದೆ. ಇವುಗಳಲ್ಲಿ ಶೇ. 32ರಷ್ಟು ವ್ಯವಹಾರಗಳು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅವುಗಳ ವಾರ್ಷಿಕ ಆದಾಯದಲ್ಲಿ ಶೇ. 50ರಷ್ಟು ನಷ್ಟ ಅನುಭವಿಸಿದೆ. ಸಮಾರಂಭ ಹಾಗೂ ಮನೋರಂಜನಾ ಮ್ಯಾನೇಜ್‌ಮೆಂಟ್ ರಂಗದ ಶೇ. 53ರಷ್ಟು ರಂಗವು ನಿಗದಿಯಾದ ಶೇ. 90ರಷ್ಟು ಸಮಾರಂಭ/ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು ಮತ್ತು ನಾಲ್ಕು ಹಾಗೂ ಹತ್ತು ವರ್ಷಗಳ ಹಿಂದಿನ ಅವಧಿಗಳಲ್ಲಿ ಸ್ಥಾಪಿಸಲ್ಪಟ್ಟ ಮನೋರಂಜನಾ ಸಂಸ್ಥೆಗಳ ಶೇ. 61ರಷ್ಟು ಸಂಸ್ಥೆಗಳು ಸಂಘಟನೆಗಳು ಚಟುವಟಿಕೆಗಳನ್ನು ನಿಲ್ಲಿಸಿವೆ.

ಈ ಸಾಂಸ್ಕೃತಿಕ/ಮನೋರಂಜನಾ ರಂಗ ಯಾವಾಗಲೂ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇರುವ ರಂಗ. ಕಲೆಗಳಿಗೆ ಹಾಗೂ ಸಂಸ್ಕೃತಿಗೆ ಸರಕಾರ ನೀಡುವ ಬೆಂಬಲ ತೀರಾ ಕಡಿಮೆ. ಖಾಸಗಿ ರಂಗದಿಂದ ದೊರಕುವ ಬೆಂಬಲ ನಂಬಲರ್ಹವೇ ಅಲ್ಲ ಮತ್ತು ಅದು ಸಾಕಷ್ಟು ಸಿಗುವುದಿಲ್ಲ. ಹೀಗಾಗಿ ಕಲೆಗಳಲ್ಲಿ ಹೊಸ ಹೊಸ ಪ್ರಯೋಗಗಳು ಹಾಗೂ ನಾವೀನ್ಯತೆ ಕಷ್ಟವಾಗಿದೆ. ಪರಂಪರೆಯನ್ನು ಉಳಿಸಿಕೊಳ್ಳುವುದು ಕೂಡ ಸುಲಭವಲ್ಲ. ಅಲ್ಲದೆ, ಕಲಾವಿದರು ಹಾಗೂ ಕುಶಲಕರ್ಮಿಗಳ ಒಂದು ದೊಡ್ಡ ಭಾಗ ಖಾಸಗಿ (ಇನ್‌ಫಾರ್ಮಲ್) ಅರ್ಥ ವ್ಯವಸ್ಥೆಯ ಭಾಗವಾಗಿದ್ದಾರೆ. ಅವರಲ್ಲಿ ಕೆಲವರು ತಮ್ಮ ಆದಾಯ ಸರಿದೂಗಿಸಿಕೊಳ್ಳಲು ವರ್ಷದ ಕೆಲವು ತಿಂಗಳುಗಳಲ್ಲಿ ಬೇಸಾಯವನ್ನು ಅವಲಂಬಿಸಿಕೊಂಡಿದ್ದಾರೆ. ಗ್ರಾಮೀಣ ದಿನ ಕೂಲಿ/ವೇತನ ಈಗಾಗಲೇ ತೀವ್ರ ಕಡಿಮೆ ಇರುವುದರಿಂದ ಅವರು ಕನಿಷ್ಠ ಜೀವನೋಪಾಯಕ್ಕಾಗಿ ಹೋರಾಡುತ್ತಿದ್ದಾರೆ.

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಕಲೆಗಳು ಮತ್ತು ಕಲಾವಿದರ ಸಂಕಷ್ಟವನ್ನು ನೀಗಿಸಲು ತುಂಬಾ ನೆರವಾಗಬಲ್ಲ ಶಿಫಾರಸುಗಳ ಒಂದು ಯಾದಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ. 2017ರಿಂದ ಮಂಜೂರಾಗಿ ಬಿಡುಗಡೆಯಾಗದಿರುವ ಅನುದಾನಗಳನ್ನು ಬಿಡುಗಡೆ ಮಾಡುವುದು, ಸರಕಾರದಿಂದ ಪ್ರಾಯೋಜಿತವಾದ ಸಾಂಸ್ಕೃತಿಕ ಹಬ್ಬಗಳಿಗೆ, ಉತ್ಸವಗಳಿಗೆ ಈಗಾಗಲೇ ಮಂಜೂರಾಗಿರುವ ಬಜೆಟ್‌ಗಳನ್ನು ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು ಬಳಸುವುದು, ಕಲಾ ಸಂಸ್ಥೆಗಳಿಗೆ ಜಿಎಸ್‌ಟಿ ಪಾವತಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದು ಇತ್ಯಾದಿ ಹಲವು ಕ್ರಮಗಳನ್ನು ಅದರಲ್ಲಿ ಸೂಚಿಸಲಾಗಿದೆ.

2015ರಲ್ಲಿ ನಾನು ಜಾನಪದ ಸಂಗೀತಗಾರರ ಜೊತೆ ಕೈಗೊಳ್ಳುವ ಸ್ವಯಂ ಸೇವಾ ಕೆಲಸದ ಅಂಗವಾಗಿ ಕಲ್‌ಬೆಲಿಯಾ ಜನಪದ ಸಂಗೀತ ತಂಡವೊಂದರ ಜೊತೆ ಜೈಸಲ್ಮೇರ್‌ನ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದೆ. ಸ್ವಲ್ಪಮಟ್ಟಿನ ಸರಕಾರಿ ಕಲ್ಯಾಣ ಕಾರ್ಯಕ್ರಮದ ಸವಲತ್ತು ಪಡೆಯಲು ಅವರಿಗೆ ಪ್ರಮಾಣಪತ್ರಗಳ ಅವಶ್ಯಕತೆ ಇತ್ತು. ಆದರೆ ಅವರು ತಾವು ನಿಜವಾಗಿಯೂ ಕಲ್‌ಬೆಲಿಯಾ ಕಲಾವಿದರೆಂದು ರುಜುವಾತು ಪಡಿಸುವವರೆಗೆ ಅವರಿಗೆ ಆ ಪ್ರಮಾಣ ಪತ್ರಗಳನ್ನು ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದರು. ಮರುದಿನ ಅಧಿಕಾರಿಗಳ ಮುಂದೆ ಒಂದು ಪ್ರದರ್ಶನ ಏರ್ಪಡಿಸುವುದಕ್ಕೆ ಪುಂಗಿ ಹಾಗೂ ಹಾವುಗಳೊಂದಿಗೆ ಅಲ್ಲಿ ಹಾಜರಾದೆ. ಆದರೆ ಅಧಿಕಾರಿಗಳು ಒಪ್ಪಲಿಲ್ಲ: ‘‘ಇವರು ನಾಥ-ಜೋಗಿಗಳಲ್ಲವೆಂದು ಹೇಗೆ ಹೇಳುವುದು? ಅವರು ಕೂಡ ಹಾವಾಡಿಸುತ್ತಾರೆ. ಆದರೆ ಅವರು ಒಬಿಸಿಗಳು, ಎಸ್‌ಟಿಗಳಲ್ಲ’’ ಎಂಬುದು ಅವರ ವಾದವಾಗಿತ್ತು. ಆಗ ನನಗನ್ನಿಸಿತು: ಈ ಕಲಾವಿದರು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೋಗುವುದರಲ್ಲಿ ಏನು ತಪ್ಪಿದೆ? ಆದರೆ ಕೊರೋನ ಸಾಂಕ್ರಾಮಿಕದಿಂದಾಗಿ ನಗರಗಳು ಕೂಡ ಅವರಿಗೆ ಭರವಸೆಯ ತಾಣವಾಗಿ ಉಳಿದಿಲ್ಲ.

ಇಂತಹ ಸನ್ನಿವೇಶದಲ್ಲಿ ಮಿಲಿಯಗಟ್ಟಲೆ ಪ್ರದರ್ಶನ ಕಲಾವಿದರಿಗೆ, ಕುಶಲಕರ್ಮಿಗಳಿಗೆ ಬದುಕು ಸಾಗಿಸಲು ಬೇಕಾದ ಒಂದು ಸಾಂಸ್ಕೃತಿಕ ಅರ್ಥವ್ಯವಸ್ಥೆಯನ್ನು ಸೃಷ್ಟಿಸಬೇಕು. ಇದಕ್ಕೆ ಈಗಿನ ಸನ್ನಿವೇಶ ನಿಜವಾಗಿಯೂ ಒಂದು ಅತ್ಯುತ್ತಮ ಅವಕಾಶ. ಈ ಮೂಲಕ ಸೃಜನಾತ್ಮಕ ಕಲೆಗಳು ಭಾರತದ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ನಮ್ಮ ಸಾಮೂಹಿಕ ಅಸ್ಮಿತೆಗಳು, ಆಕಾಂಕ್ಷೆಗಳು, ದುರಂತಗಳು, ಸಂಭ್ರಮಗಳು ಹಾಗೂ ಸಾಮರ್ಥ್ಯದ ಅರ್ಥೈಸುವಿಕೆ ಮತ್ತು ಅಭಿವ್ಯಕ್ತಿ ನಮ್ಮ ದೇಶದ ಕಲೆಗಳ ಉಳಿವನ್ನು ಅವಲಂಬಿಸಿದೆ. ನಾವು ನಮ್ಮ ಕಲಾವಿದರನ್ನು ಕಳೆದುಕೊಂಡಲ್ಲಿ, ಒಂದು ಮಿಲಿಯ ದೇವಾಲಯಗಳು ಹಾಗೂ ಟ್ರಿಲಿಯಗಟ್ಟಲೆ ಮೌಲ್ಯದ ಆರ್ಥಿಕ ಅಭಿವೃದ್ಧಿ ಕೂಡ ನಮ್ಮನ್ನು ಮತ್ತೊಮ್ಮೆ ಪೂರ್ಣವಾಗಿಸಲಾರವು.

(ಲೇಖಕರು ಹವ್ಯಾಸಿ ಪತ್ರಕರ್ತರು ಹಾಗೂ ‘ಇಂಡಿಯನ್ ಪಾಲಿಸಿ ಕಲೆಕ್ಟಿವ್ ಆ್ಯಂಡ್ ಇಂಡಿಯನ್ ಹಿಸ್ಟರಿ ಕಲೆಕ್ಟಿವ್’ನ ಸಂಪಾದಕರು.)
 ಕೃಪೆ: thehindu

Writer - ಪ್ರಜ್ಞಾ ತಿವಾರಿ

contributor

Editor - ಪ್ರಜ್ಞಾ ತಿವಾರಿ

contributor

Similar News