ರಾಜ್ಯ ಸರ್ಕಾರ ಕಾರ್ಪೋರೇಟ್ ಕಂಪನಿಗಳ ತಾಳಕ್ಕೆ ಕುಣಿಯುತ್ತಿದೆ: ಕುರುಬೂರು ಶಾಂತಕುಮಾರ್

Update: 2020-08-03 18:40 GMT

ಮೈಸೂರು,ಆ.3: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ “ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ” ಎಂಬ ಫಲಕವನ್ನು ಗ್ರಾಮಗಳ ಮುಂದೆ ಅಳವಡಿಸಿ ರೈತರಿಗೆ ಮೂಡಿಸುವ ಚಳುವಳಿಗೆ ಚಾಲನೆ ನೀಡಲಾಯಿತು.

ಮೈಸೂರು-ಬನ್ನೂರು ರಸ್ತೆಯ ದೇವೇಗೌಡ ಸರ್ಕಲ್ ಬಳಿ ಸೋಮವಾರ ಚಳುವಳಿ ಆರಂಭಿಸಿದ ರೈತ ಸಂಘಟನೆಗಳವರು “ನಮ್ಮೂರ ಭೂಮಿ ನಮಗಿರಬೇಕು, ರಕ್ತ ಕೊಟ್ಟೇವು ಭೂಮಿ ಕೊಡೆವು, ಭೂಗಳ್ಳರಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ಹಳ್ಳಿಗಳಿಗೆ  ಪ್ರವೇಶವಿಲ್ಲ” ಎಂಬ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ರೈತರು ನೂರಾರು ಪೋಸ್ಟ್ ಕಾರ್ಡ್‍ಗಳನ್ನು ಕೈಯಲ್ಲಿ ಬರೆದು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಚಳವಳಿ ಆರಂಭಿಸಿದರು.

ಇದೇ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕೊರೋನ ಸಂಕಷ್ಟದಲ್ಲಿ ರೈತರು ನಲುಗಿದ್ದರೂ ಸಹ ಯಾವುದೇ ತುರ್ತು ಸಂದರ್ಭವಲ್ಲದಿದ್ದರೂ ಸುಗ್ರೀವಾಜ್ಞೆ ತಂದ ರಾಜ್ಯ ಸರ್ಕಾರದ ನಿಲುವಿಗೆ ಸಹಿ ಮಾಡಿದ ರಾಜ್ಯಪಾಲರ ಬಗ್ಗೆ ಅನುಮಾನ ಮೂಡುತ್ತಿದೆ. ರಾಜ್ಯಪಾಲರು ರಾಜ್ಯದ ಜನರಿಗೆ ಈ ಅನಿವಾರ್ಯತೆ ಏನು ಎಂಬ ಬಗ್ಗೆ ಬಹಿರಂಗ ಮಾಹಿತಿ ನೀಡಬೇಕು, ಇಲ್ಲದಿದ್ದರೆ ತಿದ್ದುಪಡಿ ಕಾಯ್ದೆಗೆ ತಡೆಹಾಕಬೇಕು ಎಂದು ಆಗ್ರಹಿಸಿದರು.

ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಹಾಗೂ ರಿಯಲ್ ಎಸ್ಟೇಟ್ ಭೂಗಳ್ಳರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

1974 ರಿಂದಲೂ ರಾಜ್ಯದಲ್ಲಿ ಹದಿಮೂರು ಸಾವಿರ ಭೂ ಸುಧಾರಣಾ ಕಾಯ್ದೆಗೆ ವಿರುದ್ಧವಾದ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ, ಈ ಪ್ರಕರಣಗಳನ್ನು ರದ್ದುಮಾಡಿ ಭೂ ಮಾಫಿಯಾದವರಿಗೆ ಅನುಕೂಲ ಕಲ್ಪಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಯಾರ ಹಿತಕ್ಕಾಗಿ ಎಂದು ಪ್ರಶ್ನಿಸಿದರು.

ರಾಜ್ಯದ ಕೆಲ ಸಚಿವರುಗಳು ರೈತರ ಹಿತಕ್ಕಾಗಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತಿದ್ದಾರೆ. ಬಹಿರಂಗ ವೇದಿಕೆ ಮೂಲಕ ಸಮಾಜ ಚಿಂತಕರ ಮತ್ತು ರೈತ ಮುಖಂಡರುಗಳ ಜೊತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ ರೈತರ ವಿಚಾರದಲ್ಲಿ ನಾಟಕವಾಡದೆ ಕಾಯ್ದೆ ವಾಪಸ್ ಪಡೆಯಲು ಮುಂದಾಗಬೇಕು, ಇಲ್ಲದಿದ್ದರೆ ರಾಜ್ಯದ್ಯಂತ ಚಳವಳಿ ತೀವ್ರಗೊಳ್ಳಲಿದೆ. ಕೆಲವು ರೈತ ಸಂಘಟನೆಗಳು ರೈತರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡದೆ ಸ್ವಾರ್ಥ ಬಿಟ್ಟು ಈ ವೇದಿಕೆಯಲ್ಲಿ ಸೇರಿಕೊಂಡು ಹೋರಾಟ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯದಿದ್ದರೆ ಆ.8 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅರೆಬೆತ್ತಲೆ ಚಳುವಳಿ ನಡೆಸಲಾಗುವುದು. ಸರ್ಕಾರ ಇದ್ಯಾವುದಕ್ಕೂ ಮಣಿಯದಿದ್ದರೆ, ಆ.15 ರಂದು ಕಪ್ಪು ಪಟ್ಟಿ ಧರಿಸಿ ಕರಾಳ ಕಾಯ್ದೆ ವಿರೋಧಿಸಿ ಚಳುವಳಿ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಳುವಳಿಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ವಿ.ಸೋಮಶೇಖರ್, ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷ ಮಂಜು ಕಿರಣ್, ಗಳಗೆರೆಹುಂಡಿ ವೆಂಕಟೇಶ್, ಬರಡನಪುರ ನಾಗರಾಜ್, ರಾಜು, ರಾಮೇಗೌಡ, ಪ್ರಶಾಂತ್, ಜಯರಾಮ್, ಸುನಯ್ ಗೌಡ ಸೇರಿದಂತೆ ಹಲವು ರೈತ ಸಂಘಟೆಗಳವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News