ಮಲೆನಾಡಿನ ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವ ಸುರೇಶ್ ಕುಮಾರ್

Update: 2020-08-05 12:31 GMT

ಚಿಕ್ಕಮಗಳೂರು, ಆ.5: ಜಿಲ್ಲೆಯ ಕೊಪ್ಪ ತಾಲೂಕಿನ ಮೂಲಭೂತ ಸೌಲಭ್ಯ ವಂಚಿತ ಗ್ರಾಮಗಳು ಹಾಗೂ ನಕ್ಸಲ್ ಪೀಡಿತ ಪ್ರದೇಶವಾದ ಮೇಗುಂದ ಹೋಬಳಿಯ ಭೈರೇದೇವರು, ಕಿತ್ಲೆಗುಳಿ, ಮೆಣಸಿನಹಾಡ್ಯ ಗ್ರಾಮಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಭೈರೇದೇವರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿತ್ಲೆಗುಳಿ ಗ್ರಾಮದ ಅಂಗನವಾಡಿಯಲ್ಲಿ ಸುಮಾರು 60 ವಿದ್ಯಾರ್ಥಿಗಳ ಜೊತೆ ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿ, ಮಲೆನಾಡಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಸಂವಾದದಲ್ಲಿ ವಿದ್ಯಾರ್ಥಿಗಳು ಮಲೆನಾಡು ಭಾಗದಲ್ಲಿನ ನೆಟ್‍ವರ್ಕ್ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಅಲ್ಲದೇ ಟವರ್‍ಗಳನ್ನು ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟರು. ಮತ್ತೆ ಕೆಲವು ವಿದ್ಯಾರ್ಥಿಗಳು ರಸ್ತೆ ಸಮಸ್ಯೆ, ಬಸ್ ಸೌಕರ್ಯ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಮೆಣಸಿನಹಾಡ್ಯದ ವಿದ್ಯಾರ್ಥಿಯೊಬ್ಬರ ಮನೆಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.

ಸಂವಾದ ಹಾಗೂ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಸುರೇಶ್ ಕುಮಾರ್ ಹೊರಳೆ ಗ್ರಾಮದ ಆದರ್ಶ್ ಎಂಬ ಎಸೆಸೆಲ್ಸಿ ವಿದ್ಯಾರ್ಥಿ ಆಡಿಯೋ ಮೂಲಕ ಮಲೆನಾಡಿನಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡಿದ್ದರು. ಆ ಆಡಿಯೋವನ್ನು  ನಾನು ಕೇಳಿದ್ದೇನೆ. ಹಾಸ್ಟೆಲ್, ಶಾಲೆಗಳು ಮುಚ್ಚಿದ ಕಾರಣ ನಾವು ಸೇತುಬಂಧ ಎಂಬ ಕಾರ್ಯಕ್ರಮವನ್ನು ಮಾಡಿದ್ದೇವೆ. ಈ ಕಾರ್ಯಕ್ರಮವೂ ಸರಿಯಾಗಿ ನಮಗೆ ತಲುಪುತ್ತಿಲ್ಲ ಎಂಬುದಾಗಿಯೂ ವಿದ್ಯಾರ್ಥಿ ಆಡಿಯೋದಲ್ಲಿ ಅಳಲು ತೋಡೊಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಯ ಜೊತೆಗೆ ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಭೇಟಿ ಮಾಡಿ ಮಲೆನಾಡಿದ ಸಮಸ್ಯೆಗಳನ್ನು ಅರಿತು ಪರಿಹಾರ ಒದಗಿಸುವ ಉದ್ದೇಶದಿಂದ ಇಲ್ಲಿಗೆ ಭೇಟಿ ಮಾಡಿರುವುದಾಗಿ ತಿಳಿಸಿದರು.

ಸ್ವತ: ಖುದ್ದಾಗಿ ಪದವಿ, ಪಿಯುಸಿ, ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಭೇಟಿಮಾಡಿದ್ದೇನೆ. ಈ ವೇಳೆ ಶಿಕ್ಷಣ ಇಲಾಖೆ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿರುವುದು ಕಂಡು ಬಂದಿದೆ. ಮಕ್ಕಳಿಗೆ ಕಲಿಯುವ ಹಂಬಲವಿದ್ದು, ನೆಟ್‍ವರ್ಕ್, ಹಾಸ್ಟೆಲ್, ರಸ್ತೆ, ಬಸ್ ಇನ್ನೀತರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆದರೆ ಸಮಸ್ಯೆ ಇವತ್ತು ಹುಟ್ಟಿಕೊಂಡಿರುವುದಲ್ಲ ಹಲವು ವರ್ಷಗಳಿಂದ ಸಮಸ್ಯೆ ಇದೆ. ಈ ರೀತಿಯ ಸಮಸ್ಯೆಗಳು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗದ ಮಲೆನಾಡು ಭಾಗದಲ್ಲಿಯೂ ಇದೆ. ಇಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಅಲ್ಲಿಯೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೂ ಈ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.

ಕೊರೋನಾದಿಂದ ಶಿಕ್ಷಣ ಇಲಾಖೆ ಬಹಳ ಸಂಕಷ್ಟಕ್ಕೆ ತುತ್ತಾಗಿದೆ. ಆದರೂ ಕಲಿಕಾ ದೃಷ್ಟಿಯಿಂದ ಹಿಂದುಳಿಯಬಾರದು ಎಂಬ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ವಿದ್ಯಾಗಮ ಯೋಜನೆ ಜಾರಿಗೊಳಿಸಲಾಗುತ್ತದೆ. ಹಿಂದೆ ಡಾ.ಎಂ.ಕೆ ಶ್ರೀಧರ್ ಎಂಬವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ್ದು, ಅವರ ವರದಿಯ ಆಧಾರದ ಮೇಳೆ ಮತ್ತಷ್ಟು ಅಂಶಗಳನ್ನು ಸೇರಿಸಿ ಕೊರೋನ ಅವಧಿಯಲ್ಲಿ ಕಲಿಕೆಯನ್ನು ಮುಂದುವರಿಸಲು ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದ ಅವರು, ಈ ಮೂಲಕ ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಉಸ್ತುವಾರಿಯನ್ನು(ಮೆಂಟರ್)ನೇಮಿಸಿ ಶಿಕ್ಷಣ ನೀಡಲಾಗುತ್ತದೆ. ಈ ಯೋಜನೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು. ಈ ಯೋಜನೆ ಮೂಲಕ ಮಕ್ಕಳಿಗೆ ಕಲಿಸುವ ಜೊತೆಗೆ ಅವರ ಸಮಸ್ಯೆಗಳನ್ನು ಪರಿಹರಿಸಿ ಅವರ ಸರ್ವಾಂಗಿಣ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಿದ್ದೇವೆ. ಒಂದು ವಾರದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತದೆ ಎಂದು ಹೇಳಿದರು.

ಇಲ್ಲಿನ ಮಕ್ಕಳಲ್ಲಿ ಓದುವ ತುಡಿತ ಇದೆ. ಇದು ನನಗೆ ಬಹಳ ಖುಷಿ ತಂದಿದೆ. ಹೀಗಾಗಿ ಮಕ್ಕಳ ತುಡಿತಕ್ಕೆ ತಕ್ಕ ಹಾಗೆ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹರ್ಷವ್ಯಕ್ತಪಡಿಸಿದರು. ಈ ಭಾಗದಲ್ಲಿ ಮೊದಲಿನಿಂದಲೂ ಶಿಕ್ಷಣಕ್ಕೆ ಪೋಷಕರು, ಇಲ್ಲಿನ ಸಮಾಜ ಹೆಚ್ಚು ಒತ್ತು ಕೊಟ್ಟಿದ್ದಾರೆ. ಹಲವಾರು ಸಮಸ್ಯೆಗಳಿದ್ದರು ಅದನ್ನು ಎದುರಿಸಿ ಇಲ್ಲಿನ ಮಕ್ಕಳು ಕಲಿಯುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಉತ್ತಮ ಶಿಕ್ಷಕರನ್ನು ಈ ಭಾಗಕ್ಕೆ ನೇಮಿಸಲಾಗುವುದು. ಇಲ್ಲಿನ ವಿಶಿಷ್ಟ ಸಮಸ್ಯೆಗಳ ಬಗ್ಗೆ ಹಲವು ಇಲಾಖೆಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಬರವಸೆ ನೀಡಿದರು

ಶೀಘ್ರ ಎಸೆಸೆಲ್ಸಿ ಫಲಿತಾಂಶ
ಕೊರೋನ ಸಂಕಷ್ಟದಲ್ಲಿಯೂ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಈಗ ವಿದ್ಯಾರ್ಥಿಗಳು ಪೋಷಕರು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಶಿಕ್ಷಣ ಸಚಿವರು ಆಗಸ್ಟ್ 7 ರಿಂದ 9 ತಾರೀಖಿನೊಳಗೆ ಎಸೆಸೆಲ್ಸಿ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯಕ್ಕನುಗುಣವಾಗಿ ಶಿಕ್ಷಣ ನೀತಿ ಜಾರಿ
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ರಾಜ್ಯದಲ್ಲಿ ಉನ್ನತ ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಕುರಿತು ವಿಧಾನ ಪರಿಷತ್ ಸದಸ್ಯ ಅರುಣ್ ಶಹಪುರ್ ಜೊತೆ ಮಾತುಕತೆ ನಡೆಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ತಂಡ ರಚಿಸಲಾಗಿದೆ. ಆ.20ರೊಳಗೆ ತಜ್ಞೆರೊಂದಿಗೆ ಚರ್ಚಿಸಿ ರೂಪುರೇಷೆ ತಯಾರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮಾಜಿ ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News