ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆಗೆ ಹೈಕೋರ್ಟ್ ತಡೆ

Update: 2020-08-05 13:08 GMT

ಬೆಂಗಳೂರು, ಆ.5: ಪರಿಸರ ಪರಿಣಾಮ ಮೌಲ್ಯಮಾಪನ-2020 ಕರಡು ಅಧಿಸೂಚನೆಯನ್ನು ಕನ್ನಡವೂ ಸೇರಿ ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಲು ಕೇಂದ್ರ ಸರಕಾರ ನಿರಾಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕರಡು ಅಧಿಸೂಚನೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರದ ಪರಿಸರ ಪರಿಣಾಮ ಮೌಲ್ಯಮಾಪನ-2020 ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಲು ಮತ್ತು ರಾಜ್ಯ ಭಾಷೆಗಳಲ್ಲಿ ಪ್ರಕಟಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ಚಾರಿಟಬಲ್ ಆ್ಯಂಡ್ ವೆಲ್‍ಫೇರ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಹಿಂದಿನ ವಿಚಾರಣೆ ವೇಳೆ ಕನ್ನಡ ಭಾಷೆಯೂ ಸೇರಿ ಆಯಾ ರಾಜ್ಯ ಭಾಷೆಗಳಲ್ಲಿ ಕರಡು ಅಧಿಸೂಚನೆ ಹೊರಡಿಸುವ ಸಂಬಂಧ ಹಾಗೂ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವ ಕುರಿತು ನಿರ್ಧಾರ ಕೈಗೊಳ್ಳುವಂತೆ ಪೀಠ ಕೇಂದ್ರಕ್ಕೆ ಸೂಚನೆ ನೀಡಿತ್ತು. ಆದರೆ, ಕೇಂದ್ರ ಸರಕಾರದ ಪರ ವಕೀಲರು, ಕರಡನ್ನು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಪ್ರಕಟಿಸಲು ಸಾಧ್ಯವಿದೆ. ರಾಜ್ಯಗಳ ಅಧಿಕೃತ ಭಾಷೆಯಲ್ಲಿ ಗೆಜೆಟ್ ಹೊರಡಿಸುವ ಅಗತ್ಯ ಕೇಂದ್ರ ಸರಕಾರಕ್ಕೆ ಇಲ್ಲ ಎಂದು ತಿಳಿಸಿದ್ದರು. 

ಬುಧವಾರ ನಡೆದ ವಿಚಾರಣೆ ವೇಳೆ ಕೂಡ ಇದನ್ನೇ ಪುನರುಚ್ಚರಿಸಿದರು. ಜತೆಗೆ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಕನ್ನಡದಲ್ಲಿ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್, ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸರಕಾರದ ನಿಲುವುಗಳನ್ನು ತಿಳಿದುಕೊಳ್ಳುವ ಹಕ್ಕಿದೆ. ಕರಡು ಅಧಿಸೂಚನೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಮೇಲೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪುವ ಅಗತ್ಯವಿದೆ. ಜನ ಸಾಮಾನ್ಯರಿಗೆ ತಲುಪದ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಕನ್ನಡದಲ್ಲಿಯೂ ಕರಡು ಪ್ರಕಟಿಸುವ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕರಡು ಅಧಿಸೂಚನೆಗೆ ವ್ಯಾಪಕ ಪ್ರಚಾರ ನೀಡದಿರುವುದಕ್ಕೆ ಮತ್ತು ಸ್ಥಳೀಯ ಭಾಷೆಯಲ್ಲಿ ಕರಡು ಅಧಿಸೂಚನೆ ಹೊರಡಿಸಲು ಸಾಧ್ಯವಾಗದಿರುವುದಕ್ಕೆ ಕೇಂದ್ರ ಸರಕಾರ ತಾಂತ್ರಿಕ ಕಾರಣಗಳನ್ನು ನೀಡುತ್ತಿದೆ. ಕೋರ್ಟ್ ಸೂಚನೆ ನೀಡದ ನಂತರವೂ ಕೇಂದ್ರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕರಡು ಅಧಿಸೂಚನೆಯು ಕೈಗಾರಿಕೆಗಳು ಮತ್ತು ಜನ ಸಾಮಾನ್ಯರ ಮೇಲೆ ತೀವ್ರ ಸ್ವರೂಪದಲ್ಲಿ ಪರಿಣಾಮ ಬೀರುವಂತಿದೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಶೇ.43ರಷ್ಟು ಜನಕ್ಕೆ ಹಿಂದಿ ಭಾಷೆ ತಿಳಿದಿದ್ದು, ಹಿಂದಿ ತಿಳಿಯದ ಶೇ.57ರಷ್ಟಿದ್ದಾರೆ. ಹೀಗಾಗಿ, ಕರಡು ಅಧಿಸೂಚನೆಯನ್ನು ಕನ್ನಡವೂ ಸೇರಿ ಆಯಾ ರಾಜ್ಯಭಾಷೆಗಳಲ್ಲಿ ಪ್ರಕಟಿಸಿ, ಸಾರ್ವಜನಿಕರಿಗೆ ತಲುಪುವಂತೆ ವ್ಯಾಪಕ ಪ್ರಚಾರ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ, ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಪೀಠ ಮಧ್ಯಂತರ ಆದೇಶ ಹೊರಡಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News