ಕಳಸ: ಭಾರೀ ಮಳೆ, ಬಿರುಗಾಳಿಗೆ ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪಗಳು

Update: 2020-08-05 18:13 GMT

ಕಳಸ, ಆ.5: ಹೋಬಳಿಯಾದ್ಯಂತ ಬುಧವಾರವೂ ಭಾರೀ ಮಳೆಯ ಆರ್ಭಟ ಮುಂದುವರಿದಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತ, ಗುಡ್ಡ ಕುಸಿತದಂತಹ ಪ್ರಾಕೃತಿಕ ವಿಕೋಪಗಳು ವರದಿಯಾಗಿವೆ. 

ಬುಧವಾರ ಮುಂಜಾನೆಯಿಂದ ರಾತ್ರಿವರೆಗೂ ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಕಳಸ-ಹೊರನಾಡು ಮಧ್ಯೆ ಭದ್ರಾ ನದಿಗೆ ಕಟ್ಟಿರುವ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಬುಧವಾರ ಬೆಳಗ್ಗಿನ ಜಾವ ನದಿಯಲ್ಲಿ ನೀರು ಇಳಿಮುಖ ಕಂಡರೂ ಮಧ್ಯಾಹ್ನದ ಬಳಿಕ ಮತ್ತೆ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಪರಿಣಾಮ  ಸೇತುವೆ ಮೇಲೆ ನೀರು ಹರಿಯಲಾರಂಭಿಸಿ, ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು.

ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ಕೂಡ ಕೆಲ ವಾಹನಗಳು ನದಿ ದಾಟುವ ಸಹಾಸ ಮಾಡಿದರು. ಅಲ್ಲದೇ ಸ್ಥಳಿಯರೂ ನದಿ ದಾಟುವ ದುಸ್ಸಾಹಸಕ್ಕೂ ಕೈಹಾಕಿದರು. ಸದ್ಯ ಸೇತುವೆ ಬಳಿ ಪೊಲೀಸ್ ಕಣ್ಗಾವಲು ಹಾಕಿದ್ದು, ವಾಹನಗಳ ಸಂಚಾರ ನಿಷೇದಿಸಲಾಗಿದೆ.

ಇನ್ನು ಕಳಸ-ಕುದುರೆಮುಖ ರಸ್ತೆಯ ಬಿಳುಗೋಡು ಎಂಬಲ್ಲಿ ಗುಡ್ಡ ಕುಸಿಯಲಾರಂಭಿಸಿದ್ದು, ಜೆಸಿಬಿ ಮುಖಾಂತರ ರಸ್ತೆ ತೆರವು ಮಾಡಲಾಗುತ್ತಿದೆಯಾದರೂ ಗುಡ್ಡ ಜರಿತ ಮುಂದುವರಿದಿದೆ. ಕಳಸ-ಕುದುರೆಮುಖ ರಸ್ತೆಯುದ್ದಕ್ಕೂ 25ಕ್ಕೂ ಹೆಚ್ಚು ಮರಗಳು ಮುಖ್ಯ ರಸ್ತೆಗೆ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕಳಸ ಕುದುರೆಮುಖ ಮಾರ್ಗವಾಗಿ ಕರಾವಳಿ ಭಾಗಕ್ಕೆ ಪ್ರಯಾಣ ಬೆಳೆಸುವವರು ತೊಂದರೆ ಅನುಭವಿಸಿದರು. 

ಇದೇ ಭಾಗದಲ್ಲಿ ಮುಖ್ಯ ರಸ್ತೆಯ ಅಂಚಿನಲ್ಲಿರುವ ಗುಡ್ಡ ಕುಸಿಯತೊಡಗಿದ್ದು, ಮಳೆ ಮುಂದುವರಿದರೆ ಹೆಚ್ಚಿನ ಅಪಾಯದ ಮುನ್ಸೂಚನೆ ಕಂಡು ಬರುತ್ತಿದೆ. ತಾಲೂಕಿನ ಭದ್ರಾ ನದಿ ಮತ್ತು ಸೋಮವತಿ ನದಿಗಳು ತುಂಬಿ ಹರಿದು ನದಿ ಪಾತ್ರದಲ್ಲಿರುವ ಕೃಷಿ ಭೂಮಿಗಳು ಜಲಾವೃತವಾಗಿವೆ. ಮಳೆಗಾಲಕ್ಕೂ ಮುಂಚೆ ಲೋಕೋಪಯೋಗಿ ಇಲಾಖೆ ಚರಂಡಿ ನಿರ್ವಹಣೆ ಮಾಡದೆ ಇರುವ ಹಿನ್ನಲೆಯಲ್ಲಿ ಕುದುರೆಮುಖ ರಸ್ತೆಯಲ್ಲಿ ನೀರು ರಸ್ತೆಯಲ್ಲಿಯೇ ಹರಿದು ರಸ್ತೆಯೋ ನದಿಯೋ ಎಂಬಂತೆ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.

ಬುಧವಾರ ಮಧ್ಯಾಹ್ನ ಕಳಸ ಸಮೀಪದ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತನೂಡಿ ನಾಗೇಶ್‍ಗೌಡ ಎಂಬವರ ಮನೆ ಮೇಲೆ ಅಡಿಕೆ ಮರ ಬಿದ್ದು, ಮನೆಗೆ ಹಾನಿಯಾಗಿದೆ. ನೆಲ್ಲಿಕೋಟ ಎಂಬಲ್ಲಿ ನಾಗರತ್ನಾ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ಮರಸಣಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಳಿಗಂಡಿ ಸಮುದಾಯ ಭವನದ ಶೀಟ್‍ಗಳು ಬಿರುಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ. ಗಾಳಿಯ ರಭಸಕ್ಕೆ ಹೋಬಳಿಯಾದ್ಯಂತ ನೂರಾರು ಅಡಿಕೆ ಮರಗಳು, ಕಾಡು ಮರಗಳು, ವಿದ್ಯುತ್ ಕಂಬಗಳು ನೆಲಕ್ಕಚ್ಚಿವೆ. ಭಾರೀ ಮಳೆ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದಿರುವ ಪರಿಣಾಮ ಹೋಬಳಿಯಾದ್ಯಂತ ವಿದ್ಯುತ್ ಸಂಚಾರ ಕಡಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಸುರಿಯುವ ಮಳೆಯಲ್ಲೇ ವಿದ್ಯುತ್ ಮಾರ್ಗಗಳ ದುರಸ್ತಿಯಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಕಳೆದ ರವಿವಾರದಿಂದ ಬುಧವಾರ ರಾತ್ರಿವರೆಗೂ ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಹೋಬಳಿಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News