ಕೊರೋನ: ಚೇತರಿಕೆ ಪ್ರಮಾಣ 67.19%ಕ್ಕೆ ಏರಿಕೆ

Update: 2020-08-05 18:53 GMT

ಹೊಸದಿಲ್ಲಿ, ಆ.5: ಬುಧವಾರ ಬೆಳಗ್ಗಿನವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 51,706 ರೋಗಿಗಳು ಕೊರೋನ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಈಗ 67.19%ಕ್ಕೆ ಹೆಚ್ಚಿದೆ. ಜೊತೆಗೆ ಮರಣ ಪ್ರಮಾಣವೂ 2.09%ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸಕ್ರಿಯ ಪ್ರಮಾಣದ ಎರಡು ಪಟ್ಟಿಗೂ ಅಧಿಕ ಚೇತರಿಕೆ ಪ್ರಮಾಣವಿದ್ದು ಒಟ್ಟು 12,82,215 ಜನ ಚೇತರಿಸಿಕೊಂಡಿದ್ದಾರೆ. ಈಗ ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣಗಳ ಸಂಖ್ಯೆ 5,86,244 ಆಗಿದೆ. ಕಳೆದ 14 ದಿನಗಳಿಂದ ಚೇತರಿಕೆ ಪ್ರಕರಣಗಳಲ್ಲಿ 63.8% ಹೆಚ್ಚಳವಾಗಿರುವುದು ಕೇಂದ್ರ ಸರಕಾರದ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಆರೈಕೆ ಕಾರ್ಯತಂತ್ರ ಫಲಪ್ರದವಾಗಿರುವ ದ್ಯೋತಕವಾಗಿದೆ. ಜಾಗತಿಕ ಪರಿಸ್ಥಿತಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನ ಸೋಂಕಿನ ಮರಣಪ್ರಮಾಣವೂ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪರೀಕ್ಷೆಯ ಪ್ರಮಾಣ ಹೆಚ್ಚಿಸಿದ್ದು ಮತ್ತು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಿರುವುದು ಹಾಗೂ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಸಂಘಟಿತ ಪ್ರಯತ್ನದಿಂದ ಚೇತರಿಕೆ ಪ್ರಮಾಣ ವೃದ್ಧಿಸಿದೆ. ಸತತ ಎರಡನೇ ದಿನವೂ ಭಾರತದಲ್ಲಿ 6 ಲಕ್ಷಕ್ಕೂ ಅಧಿಕ ಕೊರೋನ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದ್ದು ಇದುವರೆಗೆ ಭಾರತದಲ್ಲಿ 2,14,84,402 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಸೋಂಕು ಪರೀಕ್ಷಿಸುವ ಪ್ರಯೋಗಾಲಯಗಳ ಸಂಖ್ಯೆಯೂ ಹೆಚ್ಚಿದ್ದು ಈಗ ಭಾರತದಲ್ಲಿ 920 ಸರಕಾರಿ ಪ್ರಯೋಗಾಲಯ ಹಾಗೂ 446 ಖಾಸಗಿ ಪ್ರಯೋಗಾಲಯವಿದೆ. ಬುಧವಾರದ ವರೆಗಿನ ಅಂಕಿಅಂಶದ ಪ್ರಕಾರ ಭಾರತದಲ್ಲಿ ಸೋಂಕಿತರ ಒಟ್ಟು ಪ್ರಮಾಣ 19.08 ಲಕ್ಷಕ್ಕೇರಿದ್ದರೆ ಮೃತಪಟ್ಟವರ ಒಟ್ಟು ಸಂಖ್ಯೆ 39,795ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News