ಕೊಡಗು: ತಲಕಾವೇರಿ ಎರಡು ಮನೆಗಳ ಮೇಲೆ ಗುಡ್ಡ ಕುಸಿತ; ನಾಲ್ವರು ನಾಪತ್ತೆ

Update: 2020-08-06 07:37 GMT

ಕೊಡಗು, ಆ.6: ಭಾರೀ ಮಳೆಯಿಂದ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಗುಡ್ಡ ಕುಸಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ನಾಪತ್ತೆಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರೀ ಗಾಳಿಮಳೆಗೆ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆಗಳ ಮೇಲೆ ಬಿದ್ದಿದೆ. ಇದರಿಂದ ಒಂದು ಮನೆಯಲ್ಲಿದ್ದ ನಾಲ್ವರು ನಾಪತ್ತೆಯಾಗಿರುವುದಾಗಿ ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ.

ತಲಕಾವೇರಿ ದೇವಳದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ ಆನಂದತೀರ್ಥ ಮತ್ತು ಇನ್ನಿಬ್ಬರು ಅರ್ಚಕರು ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಎರಡು ಕಾರು ಮತ್ತು 20ಕ್ಕೂ ಅಧಿಕ ದನಕರುಗಳು ಕೂಡಾ ಮಣ್ಣಿನಡಿ ಸಿಲುಕಿವೆ.

ಭಾಗಮಂಡಲ - ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ರಕ್ಷಣಾ ತಂಡ ಸ್ಥಳಕ್ಕೆ ತೆರಳುವಲ್ಲಿ ತೊಡಕಾಗಿ ಪರಿಣಮಿಸಿದೆ. ಅದಲ್ಲದೇ ದಟ್ಟವಾಗಿ ಆವರಿಸಿರುವ ಮಂಜು, ಮಳೆ ಕೂಡಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆಗಾಗಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಧಾವಿಸುತ್ತಿದೆ.

ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುತ್ತಾರೆ. ತಲಕಾವೇರಿಯ ಮನೆ ಖಾಲಿ ಇರುತ್ತದೆ. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿರುತ್ತಾರೆ. ಅವರ ಮನೆಯಲ್ಲಿದ್ದ ನಾಲ್ವರು ಇದೀಗ ಕಣ್ಮರೆಯಾಗಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News