ಮಲೆನಾಡಿನಲ್ಲಿ ಭಾರೀ ಮಳೆ: ಪ್ರಮುಖ ರಸ್ತೆ ಸಂಪರ್ಕ ಕಡಿತ; 15ಕ್ಕೂ ಅಧಿಕ ಮನೆಗಳಿಗೆ ಹಾನಿ

Update: 2020-08-06 05:42 GMT

ಚಿಕ್ಕಮಗಳೂರು, ಆ.6: ಜಿಲ್ಲಾದ್ಯಂತ ಕಳೆದ ರಾತ್ರಿ ಧಾರಾಕಾರ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಯಿಂದ ಅಲ್ಲಲ್ಲಿ ಬೃಹತ್ ಮರಗಳು ರಸ್ತೆಗುರುಳಿವೆ. ಇದರಿಂದ ಮಲೆನಾಡಿನ ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿದೆ. ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಭಾರೀ ಗಾತ್ರ ಬಂಡೆಯೊಂದು ರಸ್ತೆ ಉರುಳಿದೆ. ಇದೇರೀತಿ ಘಾಟಿ ರಸ್ತೆಯ ಹಲವೆಡೆ ಭೂಕುಸಿತ, ಮರ, ಬಂಡೆಗಳು ರಸ್ತೆಗೆ ಉರುಳಿವೆ.

ಗಾಳಿಮಳೆಗೆ ಜಿಲ್ಲಾದ್ಯಂತ 15ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ. ಹಲವೆಡೆ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಉಂಟಾಗಿರುವುದು ವರದಿಯಾಗಿದೆ.

ಶೃಂಗೇರಿ- ಜಯಪುರ, ಬಾಳೆಹೊನ್ನೂರು-ಜಯಪುರದಲ್ಲಿ ಹಲವೆಡೆ ರಸ್ತೆಗೆ ಅಡ್ಡವಾಗಿ ಮರಗಳು ಬಿದ್ದಿದ್ದರೆ, ಕೆಲವೆಡೆ ಮಣ್ಣು , ದರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಣ್ಯ, ಪೊಲೀಸ್, ಲೋಕೋಪಯೋಗಿ ಇಲಾಖೆಯವರು ಸೇರಿ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರಾತ್ರಿ ಬೀಸಿದ ಭಾರೀ ಗಾಳಿಗೆ ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿ ಗ್ರಾಮದಲ್ಲಿ ರಾಜಣ್ಣ ಎಂಬವರ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಂಕ್ಲಾಪುರದಲ್ಲಿ ನಾಗೇಶ್ ಗೌಡ ಎಂಬವರಿಗೆ ಸೇರಿದ ಮನೆ ಮೇಲೆ ಮರಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಶಾಂತಕುಮಾರ್ ಅವರ ಕಾರಿನ ಮೇಲೆ ತೆಂಗಿನಮರ ಬಿದ್ದು ಹಾನಿ ಸಂಭವಿಸಿದೆ. ಶಾಂತಾ ಕುಮಾರ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಜನ್ನಾಪುರದಲ್ಲಿ ಆಟೊ ರಿಕ್ಷಾವೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ.

ಮಲೆನಾಡಿನಲ್ಲಿ ಗುರುವಾರ ಬೆಳಗ್ಗೆಯಿಂದ ಮಳೆಯ ಆರ್ಭಟ ಒಂದಿಷ್ಟು ಕಡಿಮೆಯಾಗಿದ್ದರೂ, ಸಾಧಾರಣ ಮಳೆ, ಗಾಳಿ ಮುಂದುವರಿದಿದೆ. ಈ ನಡುವೆ ಹವಾಮಾನ ಇಲಾಖೆಯ ಅಪರಾಹ್ನದ ಬಳಿ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದೆಡರು ದಿನಗಳಲ್ಲಿ ಗಾಳಿಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಇದರಿಂದ ಮಲೆನಾಡಿನಾದ್ಯಂತ ವಿದ್ಯುತ್ ಸರಬರಾಜು ಬಹುತೇಕ ಸ್ಥಗಿತಗೊಂಡಿದೆ. ಜನ್ನಾಪುರ ವಿದ್ಯುತ್ ಶಾಖಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆವರೆಗೆ 84 ಕಂಬಗಳು ಧರಾಶಾಯಿಯಾಗಿವೆ ಮೆಸ್ಕಾಂ ಜೆಇ ರವಿ ಕುಮಾರ್ ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಬುಧವಾರ ರಾತ್ರಿಯಿಡೀ ಕಳಸ- ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಿತ್ತು. ಗುರುವಾರ ಬೆಳಗ್ಗೆಯಿಂದ ಮಳೆ ಒಂದಿಷ್ಟು ಕಡಿಮೆಯಾಗಿದ್ದರಿಂದ ಸೇತುವೆ ಮೇಲಿಂದ ನೀರು ಇಳಿದಿದೆ.

ಶೃಂಗೇರಿ ಪಟ್ಟಣ ಸಮೀಪದ ತುಂಗಾ ನದಿ ತುಂಬಿ ಹರಿದ ಪರಿಣಾಮ ವಾಹನ ನಿಲುಗಡೆ ಪ್ರದೇಶವಾದ ಗಾಂಧಿ ಮೈದಾನ ಜಲಾವೃತಗೊಂಡಿದೆ. ಭದ್ರಾ ನದಿ ಇನ್ನೂ ತುಂಬಿ ಹರಿಯುತ್ತಿರುವುದರಿಂದ ಬಾಳೆಹೊನ್ನೂರಿನ ಸಂತೆ ಮಾರುಕಟ್ಟೆ ಇನ್ನೂ ಜಲಾವೃತಗೊಂಡಿದೆ. ಇಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಪ್ರವಾಹದ ನೀರು ನುಗ್ಗಿದೆ. ನದಿ ಅಕ್ಕಪಕ್ಕದ ತೋಟ ಹಾಗೂ ಗದ್ದೆಗಳು ಜಲಾವೃತಗೊಂಡಿದೆ. ಭದ್ರಾ ನದಿ ತೀರನಿವಾಸಿಗಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಶೃಂಗೇರಿಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶಾರದಾಂಬ ದೇವಾಲಯ ಸಮೀಪ ಇರು ಕಪ್ಪೆಶಂಕರ ದೇವಾಲಯ ನೀರಿನಲ್ಲಿ ಮುಳುಗಡೆಯಾಗಿರುವ ಮಾಹಿತಿ ಇದೆ.

ಜಿಲ್ಲೆಯ ಬಯಲು ಭಾಗವಾದ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಸಾಧಾರಣ ಮಳೆಯೊಂದಿಗೆ ಗಾಳಿಯೂ ಮುಂದುವರಿದಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News