ಮುರ್ಮು ರಾಜೀನಾಮೆ, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ನೇಮಕ: ಕಾರಣಗಳು ಇಲ್ಲಿವೆ

Update: 2020-08-06 07:13 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಗಿರೀಶ್ ಚಂದ್ರ ಮುರ್ಮು ಅವರ ರಾಜೀನಾಮೆ ಹಾಗೂ  ಈ ಪ್ರಮುಖ ಹುದ್ದೆಗೆ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಮನೋಜ್ ಸಿನ್ಹಾ ಅವರ ನೇಮಕಾತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುರ್ಮು ಅವರು  ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್‍ನೆಟ್ ಮರುಸ್ಥಾಪಿಸುವ ಕುರಿತು ಹೊಂದಿದ್ದ ನಿಲುವು, ಆಡಳಿತದ ಅಸಮಾಧಾನಕರ ಕಾರ್ಯನಿರ್ವಹಣೆ ಅಂತಿಮವಾಗಿ ಮುರ್ಮು ಅವರ ರಾಜೀನಾಮೆಗೆ ಕಾರಣವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಕೇಂದ್ರ ಸರಕಾರಕ್ಕೆ ಈ ಹುದ್ದೆಗೆ ರಾಜಕೀಯ ವ್ಯಕ್ತಿಯೊಬ್ಬರನ್ನು ನೇಮಿಸುವ  ಕುರಿತು ಇದ್ದ ಅತೀವ ಆಸಕ್ತಿಯೇ ಮನೋಜ್ ಸಿನ್ಹಾ ಅವರ ನೇಮಕಕ್ಕೆ ಕಾರಣ ಎಂದು theprint.in ವರದಿ ಮಾಡಿದೆ.

ಆದರೆ ಬಹುಮುಖ್ಯವಾಗಿ ಮುರ್ಮು ಅವರು ಇತ್ತೀಚೆಗೆ 4ಜಿ ಇಂಟರ್ನೆಟ್ ಸೇವೆಯ ಮರುಸ್ಥಾಪನೆ ಕುರಿತು ನೀಡಿದ್ದ ಹೇಳಿಕೆ ಮೋದಿ ಸರಕಾರಕ್ಕೆ ಹಿಡಿಸಿಲ್ಲವೆನ್ನಲಾಗಿದೆ. 4ಜಿ ಇಂಟರ್ನೆಟ್ ಮರುಸ್ಥಾಪಿಸಿದರೆ ಅದನ್ನು ಸಮಾಜದ್ರೋಹಿ ಶಕ್ತಿಗಳು ದುರುಪಯೋಗ ಪಡಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದ್ದರೆ, ಜಮ್ಮು ಕಾಶ್ಮೀರದ ಜನರು  ಇಂಟರ್ನೆಟ್ ಹೇಗೆ ಬಳಕೆ ಮಾಡುತ್ತಾರೆಂಬ ಕುರಿತು ತಮಗೆ ಭಯವಿಲ್ಲ ಎಂದು ಮುರ್ಮ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಮುರ್ಮು ಅವರಿಗೆ ಬುಧವಾರ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದ್ದು ಅವರಿಗೆ ದಿಲ್ಲಿಯಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆಯಿದೆ. ಈ ನಡುವೆ ಸಿನ್ಹಾ ಅವರನ್ನು ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳಿಸಿರುವುದು ಕೇಂದ್ರ ಸರಕಾರಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆಯೆನ್ನಲಾಗಿದ್ದು ಒಬ್ಬ  ಉನ್ನತಾಧಿಕಾರಿಯ ಬದಲು ಆ ಸ್ಥಾನದಲ್ಲಿ ಹಿರಿಯ ರಾಜಕಾರಣಿಯಿದ್ದಲ್ಲಿ ಅವರು ಜನರೊಡನೆ ಬೆರೆತು ಅವರನ್ನು ವಿಶ್ವಾಸಕ್ಕೆ ಪಡೆಯಬಹುದೆನ್ನುವ ಇರಾದೆ ಸರಕಾರದ್ದು. ಇದೇ ಕಾರಣಕ್ಕಾಗಿ ಪಕ್ಷದ ಉನ್ನತ ನಾಯಕತ್ವದ ನಂಬಿಕೆಯ ವ್ಯಕ್ತಿಯಾಗಿರುವ ಸಿನ್ಹಾ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News