ದಿಲ್ಲಿ ಹಿಂಸಾಚಾರ: ಶಹಬಾಝ್ ಮೃತಪಟ್ಟಿದ್ದಾನೆಯೇ ಎಂದು ತಿಳಿಯಲು ಜೀವಂತ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು

Update: 2020-08-06 09:41 GMT

ಹೊಸದಿಲ್ಲಿ: “ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ 22 ವರ್ಷದ ಯುವಕ ಶಹಬಾಝ್ ಮುಸ್ಲಿಂ ಸಮುದಾಯಕ್ಕೆ ಸೇರಿದವನೆಂದು ದೃಢೀಕರಿಸಿಕೊಂಡು ಗುಂಪೊಂದು ಹಲ್ಲೆಗೈದಿತ್ತು. ನಂತರ ಪ್ರಜ್ಞೆ ತಪ್ಪಿ ಬಿದ್ದಾಗ ಆತ ನಿಜವಾಗಿಯೂ ಮೃತಪಟ್ಟಿದ್ದಾನೆಯೇ ಅಥವಾ ಪ್ರಜ್ಞೆ ತಪ್ಪಿ ಬಿದ್ದವನಂತೆ ನಟಿಸುತ್ತಿದ್ದಾನೆಯೇ ಎಂಬುದನ್ನು ನೋಡಲು ಆತನಿಗೆ ಬೆಂಕಿ ಹಚ್ಚಿತ್ತು. ನಂತರ ಆತನ ದೇಹ ಅಲುಗಾಡಲು ಆರಂಭಿಸುತ್ತಿದ್ದಂತೆಯೇ ಕೆಲ ಮರದ ತುಂಡುಗಳನ್ನು ಎಸೆದು ಪೆಟ್ರೋಲ್ ಸುರಿದು ಆತನನ್ನು ಜೀವಂತ ದಹಿಸಿತ್ತು'' ಎಂದು ಆ ಅತ್ಯಂತ ಅಮಾನವೀಯ ಘಟನೆಯ ಕುರಿತಾಗಿ ದಿಲ್ಲಿ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದ ಆರೋಪಿ ರಾಹುಲ್ ಶರ್ಮ (24) ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಮಾಹಿತಿ ಸಲ್ಲಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಶಹಬಾಝ್ ‍ನದ್ದೆಂದು ಆತನ ಕುಟುಂಬ ಹೇಳುತ್ತಿರುವ ತಲೆಬುರುಡೆಯ ಒಂದು ತುಂಡು ಹಾಗೂ ಆತನ ದೇಹದ ಕೆಲ ಎಲುಬುಗಳು ಮಾತ್ರ ಪತ್ತೆಯಾಗಿವೆ. ಇವು ಆತನದ್ದೇ ಎಂಬುದು ಡಿಎನ್‍ಎ ಪರೀಕ್ಷೆಯಿಂದ ಮಾತ್ರ ದೃಢಗೊಳ್ಳಬಹುದು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಆರೋಪಿ ರಾಹುಲ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಪ್ರಕರಣ ಕುರಿತಂತೆ ಇಲ್ಲಿಯ ತನಕ ಐದು ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ ಮಾಹಿತಿಯ ಪ್ರಕಾರ ಫೆಬ್ರವರಿ 25ರಂದು ಬೆಳಿಗ್ಗೆ 7 ಗಂಟೆಗೆ ಕಣ್ಣಿನ ಔಷಧಿ ತರಲೆಂದು ಜಿಟಿಬಿ ಆಸ್ಪತ್ರೆಗೆ ತೆರಳಿದ್ದ ಶಹಬಾಝ್ ಮರಳಿ ಮನೆಗೆ ಬಂದಿರಲಿಲ್ಲ. ಆತನನ್ನು ಗುಂಪೊಂದು ಜೀವಂತ ದಹಿಸಿದೆ ಎಂಬ ವಿಚಾರ ಕುಟುಂಬಕ್ಕೆ ಫೆಬ್ರವರಿ 27ರಂದು ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News