ಕರಡು ಇಐಎ ಅಧಿಸೂಚನೆ: ಸರಕಾರಕ್ಕೆ ಜನಾಭಿಪ್ರಾಯದ ಕುರಿತು ನಿಜವಾದ ಕಾಳಜಿ ಇದೆಯೇ?

Update: 2020-08-06 19:30 GMT

ಕರಡು ಅಧಿಸೂಚನೆಯು ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಗಳಷ್ಟೇ ಅಲ್ಲದೆ ಇನ್ನಿತರ ಕೆಲವು ಯೋಜನೆಗಳನ್ನೂ ಸರಕಾರ ‘ಕಾರ್ಯತಂತ್ರ’ ಎಂಬ ವರ್ಗದಲ್ಲಿ ಸೇರಿಸಿ, ಈ ಯೋಜನೆಗಳು ಇಐಎಗೆ ಒಳಪಡುವುದಿಲ್ಲ ಎಂದು ಹೇಳಿದೆ. ಸಾರ್ವಜನಿಕರಿಗೆ ಇದರ ಕುರಿತು ಮಾಹಿತಿ ಲಭ್ಯವಿರುವುದಿಲ್ಲ ಎಂದೂ ಸೂಚಿಸಿದೆ. ಇದು ಹವಾಮಾನ ಕುರಿತಾದ ಚರ್ಚೆಯಲ್ಲಿ ಪಾರದರ್ಶಕತೆ ಮೂಲತತ್ವವಾಗಿರಬೇಕೆಂಬ ಅಂತರ್‌ರಾಷ್ಟ್ರೀಯ ಪರಿಸರ ನಿಯಮಾವಳಿ, ಸ್ಟಾಕ್‌ಹೋಮ್ ಘೋಷಣೆ ಮೊದಲಾದವುಗಳ ಮೂಲತತ್ವಕ್ಕೆ ವಿರುದ್ಧವಾಗಿದೆ.


ಅರವತ್ತಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು ಇತ್ತೀಚೆಗೆ ಪ್ರಧಾನಿ ಅವರಿಗೆ ಬರೆದ ಮನವಿ ಪತ್ರದಲ್ಲಿ ‘ಪರಿಸರ ಪ್ರಭಾವ ಮೌಲ್ಯಮಾಪನ ಅಧಿಸೂಚನೆ 2020’(ಇಐಎ)ರ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಈ ಘಟನೆಯ ಬೆನ್ನಲ್ಲೇ ಐವತ್ತಕ್ಕೂ ಹೆಚ್ಚು ಹೆಸರಾಂತ ವಿ.ವಿ., ಅಧ್ಯಯನ ಕೇಂದ್ರ, ಯುವಜನ ಸಂಘ ಸಂಸ್ಥೆಗಳಿಂದ ನೂರಾರು ವಿದ್ಯಾರ್ಥಿಗಳು, ಸಂಶೋಧಕರು, ಇಂತಹುದ್ದೇ ಒಂದು ಮನವಿಯನ್ನು ಪ್ರಧಾನಿಯವರಿಗೆ ಸಲ್ಲಿಸಿದ್ದಾರೆ.


ಕೋವಿಡ್-19ರ ಪರಿಣಾಮದಿಂದ ನೆಲಕಚ್ಚಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಭರಾಟೆಯಲ್ಲಿ ಇಐಎನ ನಿಯಮಾವಳಿಗಳನ್ನು ಸಡಿಲಿಸಿ ವ್ಯಾಪಾರ ಸ್ನೇಹಿ ಸೂಚ್ಯಂಕವನ್ನು ಉನ್ನತೀಕರಿಸುವ ಉದ್ದೇಶ ಸರಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದು ಮತ್ತೊಮ್ಮೆ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ನಡುವಿನ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಇಐಎ ಇತಿಹಾಸ

1984ರ ಭೋಪಾಲ್ ಅನಿಲ ದುರಂತದ ನಂತರ ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂತು. 1992ರ ರಿಯೋ ಶೃಂಗ ಸಭೆಯ ಸಹಿದಾರ ರಾಷ್ಟ್ರವಾದ ಭಾರತ, ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಒಪ್ಪಿಕೊಂಡಿತ್ತು. ಈ ನಿಟ್ಟಿನಲ್ಲಿ 1994ರಲ್ಲಿ ಇಐಎ ಅಧಿಸೂಚನೆಯನ್ನು ಜಾರಿಗೊಳಿಸಿ ಪ್ರಸ್ತುತ 2006ರ ಇಐಎ ನಿಯಮಾವಳಿಗಳು ಅನುಸರಿಸುತ್ತಿದೆ. ಕೈಗಾರಿಕಾ ಅಥವಾ ಮೂಲ ಸೌಕರ್ಯ ಒದಗಿಸುವ ಅಭಿವೃದ್ಧಿ ಯೋಜನೆಗಳು- ಗಣಿಗಾರಿಕೆ, ಬೃಹತ್ ಕೈಗಾರಿಕೆಗಳು, ಅನಿಲ ಕಂಪೆನಿಗಳು, ನೀರಾವರಿ ಯೋಜನೆ, ಬೃಹತ್ ಅಣೆಕಟ್ಟು, ರಸ್ತೆ ಕಾರಿಡಾರ್ ಮೊದಲಾದವುಗಳು, ಇಐಎ ನಿಯಮಾನುಸಾರ ಪರಿಸರ ಮಂಜೂರಾತಿಯನ್ನು ಪಡೆದ ನಂತರವೇ ವ್ಯವಹಾರ ಪ್ರಾರಂಭಿಸಬೇಕು. ಪರಿಸರ ಮೌಲ್ಯಮಾಪನ ಮಂಡಳಿ ಪರಿಸರ, ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಕೋನಗಳಿಂದ ಯೋಜನೆಯನ್ನು ಅಧ್ಯಯನ ಮಾಡುತ್ತದೆ. ನಂತರ ವಾಸವಾಗಿರುವ ಸಾರ್ವಜನಿಕರ ಅಭಿಪ್ರಾಯವನ್ನು ಕ್ರೋಡೀಕರಿಸುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಋಣಾತ್ಮಕ, ಗುಣಾತ್ಮಕ ಅಂಶಗಳನ್ನು ಪರಿಶೀಲಿಸಿ ತನ್ನ ಶಿಫಾರಸನ್ನು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸುತ್ತದೆ.
\ಈ ವ್ಯವಸ್ಥೆ ದೋಷರಹಿತವಾಗಿತ್ತೆಂದೇನಲ್ಲ. ಯೋಜನೆಯೊಂದರ ಪರಿಸರ ಅಪಾಯದ ಸಾಧ್ಯತೆ ಕುರಿತಾದ ವರದಿ ಹಲವು ಬಾರಿ ಕಳಪೆ ಮಟ್ಟದ್ದಾಗಿದ್ದವು. ಅದನ್ನು ತಯಾರಿಸುತ್ತಿದ್ದ ಕನ್ಸಲ್ಟಿಂಗ್ ಸಂಸ್ಥೆಗಳ ಉತ್ತರದಾಯಿತ್ವ ಪರಿಶೀಲನೆಗೆ ಒಳಗಾಗುತ್ತಿದ್ದುದು ವಿರಳ. ಕಂಪೆನಿಗಳು ಪಾಲಿಸಬೇಕಾದ ಅತಿ ದೀರ್ಘವಿದ್ದ ಪಟ್ಟಿಯನ್ನು ಅನುಸರಿಸುತ್ತಿದೆಯೋ ಇಲ್ಲವೋ ಎಂದು ಪರಿಶೀಲಿಸಲು ಬೇಕಿರುವ ಆಡಳಿತಾತ್ಮಕ ಸಾಮರ್ಥ್ಯ ಇಐಎಗೆ ಇಲ್ಲವಾಗಿತ್ತು. ಈ ದೋಷಗಳನ್ನು ಹೋಗಲಾಡಿಸಿ ಇಐಎ ಅನ್ನು ಬಲಪಡಿಸುವ ಬದಲಿಗೆ ಹೊಸ ಕರಡಿನಲ್ಲಿ ಸೂಚಿಸಿರುವ ತಿದ್ದುಪಡಿ, ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇಐಎ ಕರಡು ತಿದ್ದುಪಡಿ ಭಾರೀ ವಿರೋಧಕ್ಕೆ ಕಾರಣವಾಗಿರುವುದು ಏಕೆ?

ಕರಡು ಇಐಎ ಅಧಿಸೂಚನೆ ಅನುಸಾರ, ಯೋಜನೆಯೊಂದು ಸ್ಥಾಪನಾ-ನಂತರವೂ (ಪೋಸ್ಟ್ ಫ್ಯಾಕ್ಟೊ) ಸಹ ಪರಿಸರ ಅನುಮತಿ ಪಡೆಯಬಹುದಾಗಿದೆ. ಇದು ಭಾರತದ ಪರಿಸರ ಸಂರಕ್ಷಣಾ ಮೂಲತತ್ವಕ್ಕೆ ವಿರುದ್ಧ; ಮುನ್ನೆಚ್ಚರಿಕೆ ನೀತಿಯ ಬದಲಿಗೆ ‘‘ಶುಲ್ಕ ಪಾವತಿಸಿ ಮಾಲಿನ್ಯದ ಹಕ್ಕು ಪಡೆದುಕೊಳ್ಳಿ’’ ಎಂಬ ನೀತಿಗೆ ಅಸ್ತು ನೀಡಿದಂತಾಗುತ್ತದೆ. ವರ್ಷಗಳಿಂದ ಪರಿಸರ ಅನುಮತಿ ರಹಿತವಾಗಿ, ಪರಿಸರ, ಅರಣ್ಯ ಜನಜೀವನದ ಮೇಲೆ ಋಣಾತ್ಮಕ ಪ್ರಭಾವ ಬೀರಿ, ಕಾನೂನುಬಾಹಿರವಾಗಿ ಕಾರ್ಯ ಪ್ರಾರಂಭಿಸಿದ್ದ ನೂರಾರು ಬೃಹತ್ ಯೋಜನೆಗಳು ಈಗ ದಂಡ ಪಾವತಿಸಿ ಕಾನೂನುಬದ್ಧವಾಗಲಿವೆ! ಮುಂದಿನ ಯೋಜನೆಗಳೂ ಸಹ ಇದೇ ಮಾದರಿಯನ್ನು ಅನುಸರಿಸಬಹುದು. ಪರಿಸರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದವರಿಗೆ ಕಾರ್ಪೊರೇಟ್ ಕಂಪೆನಿಗಳು ದಂಡ ಭರಿಸುವ ಪ್ರಕ್ರಿಯೆ ಎಷ್ಟು ಪೊಳ್ಳೆಂದು ಗೊತ್ತಿರುವಂಥದ್ದೇ. ಈ ಹಿಂದೆ ಗುಜರಾತ್‌ನಲ್ಲಿ ಅದಾನಿ ವಿಶೇಷಾರ್ಥಿಕ ವಲಯ(ಎಸ್‌ಇಝೆಡ್), 200 ಕೋಟಿ ರೂ. ದಂಡ ಪಾವತಿಸಬೇಕಿತ್ತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಐದು ಕೋಟಿ ರೂ. ದಂಡ ಪಾವತಿಸಬೇಕಿತ್ತು. ಇವೆಲ್ಲವುದರಲ್ಲಿ ಸರಕಾರಕ್ಕೆ ಎಷ್ಟು ತಲುಪಿತು, ತಲುಪಿದ್ದ ಮೊತ್ತದಲ್ಲಿ ಪರಿಸರವನ್ನು ಎಷ್ಟರಮಟ್ಟಿಗೆ ಯಥಾಸ್ಥಿತಿಗೆ ತರಲಾಯಿತು ಎಂಬುದು ಪ್ರಶ್ನಾರ್ಹ. ಈ ಹಿಂದಿನ ಮಹಾಲೆಕ್ಕಪಾಲಕರ ಖಡಕ್ ವರದಿ ಇಂತಹ ಹಲವು ಪ್ರಕರಣಗಳ ಸತ್ಯವನ್ನು ಬಿಚ್ಚಿಟ್ಟಿದೆ. ಇತೀಚೆಗಷ್ಟೇ ವಿಶಾಖಪಟ್ಟಣದಲ್ಲಿ ಜರುಗಿದ ಅನಿಲ ದುರಂತಕ್ಕೆ ಕಾರಣವಾದ ಎಲ್‌ಜಿ ಪಾಲಿಮರ್ಸ್ ಕಂಪೆನಿ ಮತ್ತು ಅಸ್ಸಾಮಿನ ಭಾಗ್‌ಜಾನ್ ಅನಿಲ ಬೆಂಕಿ ದುರಂತಕ್ಕೆ ಕಾರಣವಾದ ಕಂಪೆನಿ ಪರಿಸರ ಅನುಮತಿ ಪಡೆದುಕೊಂಡಿರಲಿಲ್ಲ ಎಂಬುದನ್ನು ಗಮನಿಸಬೇಕು. ಇದೇ ಎಪ್ರಿಲ್ 1ರಂದು ಸರ್ವೋಚ್ಚ ನ್ಯಾಯಾಲಯ ಮತ್ತು ಈ ಹಿಂದೆ ಹಲವು ಬಾರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸಹ, ‘ಸ್ಥಾಪನಾ-ನಂತರ’ದ ಅನುಮತಿ ಸಲ್ಲದು ಎಂದು ಹೇಳಿದ್ದರೂ ಸರಕಾರ ಇದನ್ನು ಜಾರಿಗೊಳಿಸಲು ಹೊರಟಿರುವುದು ದುರದೃಷ್ಟಕರ. ಕರಡು ಅಧಿಸೂಚನೆಯು ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಗಳಷ್ಟೇ ಅಲ್ಲದೆ ಇನ್ನಿತರ ಕೆಲವು ಯೋಜನೆಗಳನ್ನೂ ಸರಕಾರ ‘ಕಾರ್ಯತಂತ್ರ’ ಎಂಬ ವರ್ಗದಲ್ಲಿ ಸೇರಿಸಿ, ಈ ಯೋಜನೆಗಳು ಇಐಎಗೆ ಒಳಪಡುವುದಿಲ್ಲ ಎಂದು ಹೇಳಿದೆ. ಸಾರ್ವಜನಿಕರಿಗೆ ಇದರ ಕುರಿತು ಮಾಹಿತಿ ಲಭ್ಯವಿರುವುದಿಲ್ಲ ಎಂದೂ ಸೂಚಿಸಿದೆ. ಇದು ಹವಾಮಾನ ಕುರಿತಾದ ಚರ್ಚೆಯಲ್ಲಿ ಪಾರದರ್ಶಕತೆ ಮೂಲತತ್ವವಾಗಿರಬೇಕೆಂಬ ಅಂತರರಾಷ್ಟ್ರೀಯ ಪರಿಸರ ನಿಯಮಾವಳಿ, ಸ್ಟಾಕ್‌ಹೋಮ್ ಘೋಷಣೆ ಮೊದಲಾದವುಗಳ ಮೂಲತತ್ವಕ್ಕೆ ವಿರುದ್ಧವಾಗಿದೆ.
\ಸಾರ್ವಜನಿಕರಿಗೆ ಉಪಯುಕ್ತವಾಗುವ ನೀರಾವರಿ ಯೋಜನೆ, ಒಳನಾಡು ಜಲಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳು, ಕೊಳವೆಮಾರ್ಗಗಳ ನಿರ್ಮಾಣ ಮುಂತಾದವುಗಳನ್ನು ‘ಕಡ್ಡಾಯ ಸಾರ್ವಜನಿಕ ಸಮಾಲೋಚನೆ’ಯಿಂದ ಹೊರಗಿಡಲು ಕರಡಿನಲ್ಲಿ ಸೂಚಿಸಲಾಗಿದೆ. ಜನರ ಉಪಯೋಗಕ್ಕೆಂದು ನಿರ್ಮಾಣವಾಗುತ್ತಿರುವ ಯೋಜನೆಗಳಿಗೆ ಜನರ ಅಭಿಪ್ರಾಯವೇ ಬೇಡ ಎನ್ನುವುದು ಮತ್ತು ಇದರ ಕುರಿತಾದ ಮಾಹಿತಿಯನ್ನು ಅವರಿಂದಲೇ ಮುಚ್ಚಿಡುವುದು ವಿಪರ್ಯಾಸವೇ ಸರಿ.

ವಾಸ್ತವಿಕ ನಿಯಂತ್ರಣ ಗೆರೆಯಿಂದ ನೂರು ಕಿಲೋಮೀಟರ್ ವೈಮಾನಿಕ ಅಂತರದಷ್ಟು ಪ್ರದೇಶವನ್ನು ಗಡಿ ಪ್ರದೇಶವೆಂದು ವ್ಯಾಖ್ಯಾನಿಸಿ ಈ ಪ್ರದೇಶದಲ್ಲಿ ತಲೆಯೆತ್ತುವ ಯೋಜನೆಗಳಿಗೆ ಸಾರ್ವಜನಿಕ ಸಮಾಲೋಚನೆ ಅಗತ್ಯವಿಲ್ಲ ಎನ್ನಲಾಗಿದೆ. ಈ ವ್ಯಾಖ್ಯಾನ ಅನುಸರಿಸಿದರೆ, ದೇಶದಲ್ಲಿರುವ ಶ್ರೀಮಂತ ಜೀವವೈವಿಧ್ಯದ ಭಂಡಾರವಾದ ಈಶಾನ್ಯ ಭಾಗದ ಬಹಳಷ್ಟು ಪ್ರದೇಶಗಳು ಗಣಿಗಾರಿಕೆ, ಅರಣ್ಯನಾಶ ಮುಂತಾದವುಗಳಿಗೆ ತುತ್ತಾಗುತ್ತವೆ. ಪರಿಸರ ಸೂಕ್ಷ್ಮ ವಲಯಗಳಾದ ಹಿಮಾಲಯ ಪ್ರದೇಶ, ಕೇದಾರನಾಥ, ಹಿಮಾಚಲ ಪ್ರದೇಶ ಮುಂತಾದ ಪ್ರದೇಶಗಳನ್ನು ಯಾವುದೇ ನಿಯಂತ್ರಣವಿಲ್ಲದೆ ಕಾರ್ಪೊರೇಟ್ ಕಂಪೆನಿಗಳು ಶೋಷಿಸಲು ಮುಂದಾಗುತ್ತವೆೆ. ಇದು ಪವಿತ್ರ ತೋಪುಗಳು, ಅರಣ್ಯತೇಪೆಗಳು, ಅತಿಸೂಕ್ಷ್ಮ ಪರಿಸರವ್ಯವಸ್ಥೆಗಳು ಹಾಗೂ ಅಳಿವಿನಂಚಿನಲ್ಲಿರುವ ಭಾರತೀಯ ಬಸ್ಟರ್ಡ್, ಏಶ್ಯಾಟಿಕ್ ಸಿಂಹ, ಒಂದು ಕೊಂಬಿನ ಖಡ್ಗಮೃಗ ಮುಂತಾದವುಗಳನ್ನು ನಾಶಮಾಡುವುದರಲ್ಲಿ ಸಂದೇಹವಿಲ್ಲ. ವಿಚಿತ್ರವೆಂದರೆ, ಹೊಸ ಕರಡಿನ ಅನುಸಾರ ಉಲ್ಲಂಘನೆಗಳನ್ನು ಆ ಕಂಪೆನಿ ಸ್ವತಃ ಅಥವಾ ಸರಕಾರದ ಪ್ರತಿನಿಧಿಯಷ್ಟೇ ಬಿಟ್ಟರೆ ಸಾರ್ವಜನಿಕರು ವರದಿ ಮಾಡಲು ಅವಕಾಶವಿಲ್ಲ.

ಕಾನೂನುಬಾಹಿರ ಕಾರ್ಯವೆಸಗಿದಾತ ತಾನು ಇಂಥದ್ದೊಂದು ಕಾರ್ಯವೆಸಗಿದ್ದೇನೆಂದು ತಾನಾಗಿಯೇ ವರದಿ ಮಾಡಿರುವುದು ಈ ಹಿಂದೆ ಎಲ್ಲಾದರೂ ಕೇಳಿದ್ದೇವೆಯೇ? ಒಂದು ಬೃಹತ್ ಯೋಜನೆ ತಲೆಯೆತ್ತುವ ಪ್ರದೇಶದ ಸುತ್ತ ಹತ್ತಾರು ಹಳ್ಳಿಗಳು, ನೂರಾರು ಆದಿವಾಸಿ ಜನರು, ಮೀನುಗಾರರು ವಾಸವಿರುತ್ತಾರೆ. ಈ ಯೋಜನೆಗಳನ್ನು ಓದಿ, ಅರ್ಥಮಾಡಿಕೊಂಡು, ಪರಾಮರ್ಶಿಸಿ ಮೂವತ್ತು ದಿನಗಳಲ್ಲಿ ಒಮ್ಮತಕ್ಕೆ ಬರುವುದು ಎಷ್ಟು ಕಷ್ಟಸಾಧ್ಯ ಎಂಬುದನ್ನು ಊಹಿಸಬಹುದು. ಅಂಥದ್ದರಲ್ಲಿ ಈ ಸಮಯಾವಕಾಶವನ್ನು ಮೂವತ್ತು ದಿನದಿಂದ ಹೆಚ್ಚಿಸುವ ಬದಲಿಗೆ ಇಪ್ಪತ್ತು ದಿನಕ್ಕೆ ಇಳಿಸಲಾಗಿದೆ. ಪ್ರಸಕ್ತ ಕರಡನ್ನು ಸರಕಾರ ಕೋವಿಡ್-19ರಂತಹ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಅವಗಾಹನೆಗೆ ಬಿಟ್ಟು ಜೂನ್ 30ರೊಳಗೆ ಅಭಿಪ್ರಾಯ ಸಲ್ಲಿಸಲು ಕೊನೆಯ ದಿನ ಎಂದು ನಿಗದಿ ಪಡಿಸಿತ್ತು. ದಿಲ್ಲಿ ಉಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿದ ನಂತರ ದಿನಾಂಕವನ್ನು ಆಗಸ್ಟ್ 11ಕ್ಕೆ ವಿಸ್ತರಿಸಿದೆ.

ಈ ಕರಡು ಪ್ರತಿಯನ್ನು ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಷ್ಟೇ ಬಿಡುಗಡೆಗೊಳಿಸಿದ್ದನ್ನು ಗಮನಿಸಿದರೆ, ಸರಕಾರಕ್ಕೆ ಜನಾಭಿಪ್ರಾಯ ಮತ್ತು ಪರಿಸರದ ಕುರಿತು ಕಾಳಜಿ ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಉಂಟಾಗುತ್ತದೆ. ಪರಿಸರ ಅನುಮತಿ ಸಿಂಧುತ್ವ ಮೂವತ್ತರಿಂದ ಐವತ್ತು ವರ್ಷಕ್ಕೆ ವಿಸ್ತರಿಸಲಾಗಿದೆ; ಉಷ್ಣ ಸ್ಥಾವರದಂತಹ ಯೋಜನೆಗಳನ್ನು ಬಿ2 ವರ್ಗಕ್ಕೆ ಸೇರಿಸಿ ಅದಕ್ಕೆ ಅನುಮತಿ ಪಡೆಯಲು ಅನುಸರಿಸಬೇಕಿದ್ದ ನಿಯಮಾವಳಿಗಳನ್ನು ಸಡಿಲಿಸಲಾಗಿದೆ; ಐದು ಹೆಕ್ಟೇರ್‌ನೊಳಗೆ ಗಣಿಗಾರಿಕೆಗೆ ಈಗಿರುವ ನಿಯಮಗಳನ್ನು ಅನುಸರಿಸದೆಯೇ ಮಂಜೂರಾತಿ ಪಡೆಯಬಹುದು; ಈ ರೀತಿಯ ಹಲವು ಆತಂಕಕಾರಿ ಸಲಹೆಗಳು ಎಂಭತ್ತು ಪುಟಗಳ ಈ ಕರಡನ್ನು ಓದಿದರೆ ಕಾಣಸಿಗುತ್ತವೆ. ಒಟ್ಟಿನಲ್ಲಿ ಹಲವು ಪರಿಸರ ತಜ್ಞರು ಬಣ್ಣಿಸಿರುವಂತೆ ಈ ಕರಡು ಪಾರದರ್ಶಕರಹಿತ, ಅಪ್ರಜಾತಾಂತ್ರಿಕ, ಪರಿಸರ ಮತ್ತು ಜನವಿರೋಧಿ ಆಗಿದೆ ಎಂಬುದು ಸತ್ಯ.

Writer - ರವಿನಂದನ್ ಬಿ. ಬಿ.

contributor

Editor - ರವಿನಂದನ್ ಬಿ. ಬಿ.

contributor

Similar News