ಮಳೆ ಹೆಚ್ಚಾಗಿ ಡ್ಯಾಂ ತುಂಬಿರುವುದರಿಂದ ನಾಲೆಗಳಿಗೆ ನೀರು ಹರಿಸಿ : ಹಾಸನ ಜಿಲ್ಲಾ ಮಂತ್ರಿ ಗೋಪಾಲಯ್ಯ ಸೂಚನೆ

Update: 2020-08-07 17:12 GMT

ಹಾಸನ: ದಿನೆ ದಿನೆ ಮಳೆಯು ಹೆಚ್ಚಾಗಿ ಬರುತ್ತಿದ್ದು, ಈಗಾಗಲೇ ಅಣೆಕಟ್ಟುಗಳು ತುಂಬುವ ಹಂತ ತಲುಪಿರುವುದರಿಂದ ನಾಲೆಗಳಿಗೆ ನೀರು ಬಿಡುವ ಕೆಲಸ ಮಾಡುವಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯನವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಳೆಯಿಂದ ಆಗಿರುವ ಹಾನಿ, ಕೊರೋನಾ ಬಗ್ಗೆ ಚರ್ಚಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಕೂಡಲೇ ಹೇಮಾವತಿ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಬೇಕು. ನದಿಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವಾರು ಜಿಲ್ಲೆಯ ರೈತರು ಭೂಮಿಗೆ ನೀರು ಬಿಡುವಂತೆ ಒತ್ತಾಯ ಮಾಡುತ್ತಿರುವುದರಿಂದ ನೀರು ಬಿಡಲು ಆದೇಶ ನೀಡುತ್ತಿರುವುದಾಗಿ ತಿಳಿಸಿದರು.

ಗುಡ್ಡ ಕುಸಿಯುವ ಕಡೆ ಹಾಗೂ ನೀರು ಹೆಚ್ಚು ಹರಿಯುವ ಸ್ಥಳಗಳಲ್ಲಿ ಇರುವ ಜನರನ್ನು ತಕ್ಷಣದಲ್ಲಿ ಸ್ಥಳಾಂತರ ಮಾಡಲು ಸೂಚಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಯಾವ ಭಾಗಗಳಲ್ಲಿ ಬೆಳೆ ನಷ್ಟ, ಜೀವಹಾನಿ, ಮನೆ ಬಿದ್ದು ಹೋಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿ ಗಳಿಂದ ಅಂಕಿ-ಅಂಶ ಕೇಳಲಾಗಿದೆ. ಮನೆಯಲ್ಲಿರುವ ಊಟದ ಪಾತ್ರ ಇತರೆ ಪೀಠೋಪಕರಣ ನಷ್ಟವಾದ ಭಾಗದಲ್ಲಿ ತಕ್ಷಣ 10 ಸಾವಿರ ರೂ ಪರಿಹಾರವನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ವರದಿ ಬಂದ ನಂತರ ಮತ್ತಷ್ಟು ಪರಿಹಾರ ನೀಡಲಾಗುವುದು ಎಂದು ಭರವಸೆ ನುಡಿದರು.

ಹಾನಿಯಾಗಿರುವ ಕೆಲ ಸ್ಥಳಗಳಿಗೆ ನಾನೇ ಖುದ್ದು ಭೇಟಿ ನೀಡಿ ಅಂಕಿ-ಅಂಶ ಪಡೆಯಲಾಗುವುದು. ಜಿಲ್ಲೆಯ ಜನರ ಕಷ್ಟಗಳಿಗೆ ಸರಕಾರ ಸ್ಪಂದಿಸಲಿದೆ. ಜಿಲ್ಲೆಯಲ್ಲಿ ಇದುವರೆಗೂ ಇಡೀ ಹಾಸನ ಜಿಲ್ಲೆಯಲ್ಲಿ 196 ಕ್ಕೂ ಹೆಚ್ವು ಮನೆ ಕುಸಿದಿದೆ. ಮಳೆಯಿಂದ ಓರ್ವ ಸಾವನ್ನಪ್ಪಿದ್ದಾರೆ. 2 ಹಸುಗಳು ಮೃತಪಟ್ಟಿದೆ. ಸಕಲೇಶಪುರದ ಯಸಳೂರು ಪೊಲೀಸ್ ಠಾಣೆ ಜಖಂಗೊಂಡಿದೆ. ರೈತನು 2100 ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ನಷ್ಟವಾಗಿದೆ. 779 ಹೆಕ್ಟೇರ್ ಪ್ರದೇಶದಲ್ಲಿ ಮಳೆ ನೀರಿನಿಂದ ಭತ್ತನಾಶವಾಗಿದೆ ಎಂದರು. ರಾಮನಾಥ ಪುರದಲ್ಲಿ 18 ಮನೆಗಳನ್ನು ಸ್ಥಳಾಂತರ ಮಾಡಿರುವುದಾಗಿ ಇದೆ ವೇಳೆ ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದರು. ಇದೆ ವೇಳೆ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News