ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

Update: 2020-08-08 05:20 GMT

ಚಿಕ್ಕಮಗಳೂರು, ಆ.8: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಮೊಟಕು, ಪ್ರವಾಹ ಭೀತಿಯಿಂದಾಗಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಾಳೆಹೊನ್ನೂರಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈ ನಡುವೆ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಕಳೆದ ಮೂರು ದಿನದಿಂದಲೂ ಮುಳುಗಡೆಯಾಗಿದೆ. ಸೇತುವೆಯ ಮೇಲೆ ಆರು ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಹೊರನಾಡಿನ ಸಂಪರ್ಕ ಕಷ್ಟಕರವಾಗಿದೆ. ಶುಕ್ರವಾರ ಸಂಜೆ ಒಂದಿಷ್ಟು ವೇಳೆ ಸೇತುವೆ ಮೇಲಿಂದ ನೀರು ತೆರವಾಗಿದ್ದರೂ, ರಾತ್ರಿ ಸುರಿದ ಮಳೆಗೆ ಮತ್ತೆ ಮುಳುಗಡೆಯಾಗಿದೆ. ಸೇತುವೆ ಪಕ್ಕದಲ್ಲಿದ್ದ ಅಂಗಡಿಯೊಂದು ಜಲಾವೃತಗೊಂಡಿದೆ.

  ಕುದುರೆಮುಖ, ಕಳಸ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಸಂಸೆ ಸಮೀಪವಿರುವ ಸೋಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ.

ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ದರೆ ಕುಸಿದು ಬಿದ್ದ ಪರಿಣಾಮ ರವೀಂದ್ರ ಎಂಬವರ ಮನೆಯ ಒಂದು ಭಾಗ ಸಂಪೂರ್ಣ ಹಾನಿಗೀಡಾಗಿದೆ. ಮನೆಯೊಳಗೆ ಕೆಸರು ನೀರು ನುಗ್ಗಿದೆ. ಈ ಪ್ರದೇಶದಲ್ಲಿ ಕಳೆದ 4 ದಿನಗಳಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News