5 ತಿಂಗಳುಗಳಿಂದ 14 ವರ್ಷದ ಪುತ್ರ ಬಂಧನದಲ್ಲಿ, ‘ವಯಸ್ಕ’ ಎನ್ನುತ್ತಿರುವ ಪೊಲೀಸರು: ಆರ್ ಟಿಐ ಕಾರ್ಯಕರ್ತನ ಆರೋಪ

Update: 2020-08-08 09:44 GMT

ಪಾಟ್ನಾ: ಶಸ್ತ್ರಾಸ್ತ್ರ ಪ್ರಕರಣದಲ್ಲಿ ಐದು ತಿಂಗಳ ಹಿಂದೆ ಇತರ ಇಬ್ಬರೊಂದಿಗೆ ಬಂಧನಕ್ಕೊಳಗಾಗಿರುವ ತಮ್ಮ ಪುತ್ರ ಅಪ್ರಾಪ್ತ ಹಾಗೂ ಆತನನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಿಹಾರದ ಆರ್‍ ಟಿಐ ಕಾರ್ಯಕರ್ತರೊಬ್ಬರು  ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಲಾಕ್ ಡೌನ್ ಹೇರಿಕೆ ಮುಂಚೆಯೇ ರಾಜ್ಯ ಡಿಜಿಪಿಗೆ ದೂರಿದ್ದ ಆರ್‍ ಟಿಐ ಕಾರ್ಯಕರ್ತ, ತಮ್ಮ 14 ವರ್ಷದ ಪುತ್ರ 10ನೇ ತರಗತಿ ಮುಗಿಸಿ ಫೆಬ್ರವರಿ 29ರಂದು ವಾಪಸಾಗುತ್ತಿದ್ದಾಗ ಇತರ ಇಬ್ಬರು ಸಾಗುತ್ತಿದ್ದ ಬೈಕ್ ನಲ್ಲಿ ಲಿಫ್ಟ್ ಪಡೆದಿದ್ದ. ಗ್ರಾಮಕ್ಕೆ ಮರಳುತ್ತಿದ್ದಾಗ ಪೊಲೀಸರು ರಾಜ್‍ ಪುರದ ಬುಕ್ಸಾರ್ ಪ್ರಾಂತ್ಯದಲ್ಲಿ ತಡೆದಿದ್ದರು ಎಂದು ಹೇಳಿದ್ದಾರೆ.

ಆರ್‍ ಟಿಐ ಕಾರ್ಯಕರ್ತನ ಪುತ್ರನಿಂದ ದೇಶೀಯ ನಿರ್ಮಿತ ಪಿಸ್ತೂಲು ಹಾಗೂ ಇತರ ಇಬ್ಬರಿಂದ ಸಜೀವ ಗುಂಡು ವಶಪಡಿಸಿಕೊಳ್ಳಲಾಗಿತ್ತೆಂದು ಎಂಬುದು ಪೊಲೀಸರ ವಾದವಾಗಿದೆ.

ಮೂವರನ್ನೂ ಬಂಧಿಸಿ ಬಕ್ಸಾರ್ ಜೈಲಿನಲ್ಲಿರಿಸಲಾಗಿತ್ತು. ಮುಂದೆ ಇತರ ಇಬ್ಬರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರೂ ತನ್ನ ಪುತ್ರನಿಗೆ ಮಾತ್ರ ಜಾಮೀನು ದೊರೆತಿಲ್ಲ ಎಂದು ಆರೋಪಿಸಿರುವ ಆರ್‍ ಟಿಐ ಕಾರ್ಯಕರ್ತ ತಮ್ಮ ಪುತ್ರ ತಾನು ಬರೆದ 10ನೇ ತರಗತಿಯ ಐದು ಪರೀಕ್ಷೆಗಳಲ್ಲಿ ಶೇ 83 ಅಂಕ ಗಳಿಸಿದ್ದಾನೆ ಹಾಗೂ ಇನ್ನೊಂದು  ಪರೀಕ್ಷೆ ಬಾಕಿಯಾಗಿದೆ ಎಂದಿದ್ದಾರೆ.

ಆತನ ಶಾಲಾ ದಾಖಲೆಗಳ ಪ್ರಕಾರ ಆತನ ಜನನ ವರ್ಷ ಎಪ್ರಿಲ್ 2006 ಆಗಿದೆ. ಸ್ಥಳೀಯವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಈ ಆರ್ ಟಿಐ ಕಾರ್ಯಕರ್ತನ ಪ್ರಕಾರ ತಾನು ಎದುರು ಹಾಕಿಕೊಂಡಿರುವ ಜನರೇ ಪುತ್ರನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.

ಬಿಹಾರ ಸರಕಾರದ ಸಾತ್ ನಿಶ್ಚಯ್, ಮನ್‍ ರೇಗಾ ಹಾಗೂ ಇತರ ಯೋಜನೆ ಜಾರಿಯಲ್ಲಿನ ಅವ್ಯವಹಾರ ಬಯಲಿಗೆಳೆಯಲು ಈ ಕಾರ್ಯಕರ್ತ ಹಲವು ಆರ್‍ ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು.

ಹತ್ತನೇ ತರಗತಿ ವಿದ್ಯಾರ್ಥಿಯನ್ನು ‘ವಯಸ್ಕ’ ಎಂದು ನಮೂದಿಸಿ ಏಕೆ ಜೈಲಿಗೆ ಹಾಕಲಾಗಿದೆ ಎಂಬ ಜುಕುತು ಪೊಲೀಸರಿಗೆ ವಿವರಣೆ ನೀಡುವುದು ಸಾಧ್ಯವಾಗಿಲ್ಲ. “ಇದರ ಹಿಂದೆ ನನ್ನ ಪಾತ್ರವಿಲ್ಲ. ನನಗೆ ಹೇಳಿದಂತೆ ಮಾಡಿದ್ದೇನೆ” ಎಂದು ರಾಯಪುರ್ ಪೊಲೀಸ್ ಠಾಣಾಧಿಕಾರಿ ರಂಜಿತ್ ಕುಮಾರ್ ಹೇಳುತ್ತಾರೆ.

ಈ ಕುರಿತು ಸೂಕ್ತ ತನಿಖೆಗೆ ಬಕ್ಸಾರ್ ಎಸ್‍ಪಿಗೆ ಸೂಚಿಸಲಾಗಿದೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಹೇಳಿದ್ದರೆ, ಬಕ್ಸಾರ್ ಎಸ್‍ಪಿ ಉಪೇಂದ್ರ ನಾಥ್ ವರ್ಮ ಅವರು ಮಾತನಾಡುತ್ತಾ ಈ ವಿಚಾರ ಪರಾಮರ್ಶಿಸಲು ಸ್ಥಳೀಯ ಠಾಣೆಯ ಅಧಿಕಾರಿಗಳಿಗೆ ಹೇಳಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News