​ಅತಿವೃಷ್ಟಿ ಸಂತ್ರಸ್ತರಿಗೆ ಅಗತ್ಯ ನೆರವು: ಸಚಿವ ಕೆ.ಎಸ್.ಈಶ್ವರಪ್ಪ

Update: 2020-08-08 09:47 GMT

ಶಿವಮೊಗ್ಗ, ಆ.8: ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಗುಡ್ಡ ಕುಸಿದು, ಫಸಲು ನೀಡುತ್ತಿದ್ದ ತೋಟ ಹಾಗೂ ಜಮೀನು ಕಳೆದುಕೊಂಡ ಭೂಸಂತ್ರಸ್ತರಿಗೆ ಸರ್ಕಾರದ ವಿವಿಧ ಇಲಾಖೆಗಳ ಹಲವು ಯೋಜನೆಗಳಡಿಯಲ್ಲಿ ಅಗತ್ಯ ಸೌಲಭ್ಯ ಒದಗಿಸಿ, ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಅವರು ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡಕುಸಿದ ಪ್ರದೇಶಕ್ಕೆ ಶಾಸಕ ಆರಗಜ್ಞಾನೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿ, 19 ಮಂದಿ ಭೂಸಂತ್ರಸ್ತರಿಗೆ ಅಗತ್ಯ ನೆರವನ್ನು ಒದಗಿಸಲಾಗುವುದು. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸದ್ಯ ಗುಡ್ಡಕುಸಿತದಿಂದಾಗಿ ಮಣ್ಣಿನಿಂದ ಆವೃತವಾಗಿರುವ ಜಮೀನಿನಲ್ಲಿನ ಮಣ್ಣನ್ನು ತೆರವುಗೊಳಿಸಿ, ನರೇಗಾ ಯೋಜನೆಯಡಿ ಹೊಂಡಹೊಡೆದು, ಗಿಡ ನೆಟ್ಟು ತೋಟ ಮಾಡಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದ ಅವರು, ಕಳೆದ ಸಾಲಿನಲ್ಲಿ ಅಲ್ಪಪ್ರಮಾಣದ ಆರ್ಥಿಕ ನೆರವನ್ನು ಒದಗಿಸಲಾಗಿದೆ ಎಂದರು.

ಭೂಕುಸಿತಗೊಂಡ ಪ್ರದೇಶದಲ್ಲಿ ರೈತರ ಜಮೀನಿನಲ್ಲಿ ಹರಿವ ಮಳೆಯ ನೀರನ್ನು ಪರಿವರ್ತಿಸಲು ಚಾನಲ್‌ನ್ನು ನಿರ್ಮಿಸಲು ಕೂಡ ಉದ್ದೇಶಿಸಲಾಗಿದೆ. ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯನ್ನು ರೆಡ್‌ ಅಲರ್ಟ್ ಆಗಿ ಘೋಷಿಸಲಾಗಿದ್ದು, ಸಂತ್ರಸ್ಥರಿಗೆ ಅಗತ್ಯ ನೆರವನ್ನು ಒದಗಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಳೆಯಿಂದ ಮನೆ ನಾಶಗೊಂಡಿರುವ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ 10,000 ಜರು.ಗಳನ್ನು ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೆ ಪೂರ್ಣ ಹಾನಿಗೊಂಡ ಮನೆಗಳ ಮಾಲಕರಿಗೆ 5 ಲಕ್ಷ ರೂ. ನೀಡಲಾಗುವುದು. ಅದರ ಮೊದಲ ಕಂತಿನ ಹಣ ಒಂದು ಲಕ್ಷ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News