ಬಿಜೆಪಿ ಸಂಸದನಾಗಲು ಸ್ವಯಂ ನಿವೃತ್ತಿ ಕೇಳಿದ್ದರು ಬಿಹಾರ ಡಿಜಿಪಿ

Update: 2020-08-08 10:45 GMT

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಸಾವು ಪ್ರಕರಣದ ತನಿಖೆಯನ್ನು ಇತ್ತೀಚೆಗೆ ಬಿಹಾರ ಪೊಲೀಸರು ಆರಂಭಿಸಿದಂದಿನಿಂದ ರಾಜ್ಯದ ಡಿಜಿಪಿ ಗುಪ್ತೇಶ್ವರ್ ಪಾಂಡೆ ಹೆಚ್ಚು ಸುದ್ದಿಯಾಗಿದ್ದಾರಲ್ಲದೆ, ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಆಗಿ ಬಿಟ್ಟಿದ್ದಾರೆ.

“ರಿಯಾ ಚಕ್ರವರ್ತಿ ಎಲ್ಲಿದ್ದರೂ ಹುಡುಕಿ ತರುತ್ತೇವೆ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಪಾಂಡೆ,  ಹಲವು ಟಿವಿ ವಾಹಿನಿಗಳ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಸುಶಾಂತ್ ಸಾವಿಗೆ ನ್ಯಾಯಕ್ಕಾಗಿ ದನಿಯೆತ್ತಿದ್ದಾರೆ.

ಆದರೆ ಇದೇ ಅಧಿಕಾರಿ 2009ರ ಲೋಕಸಭಾ ಚುನಾವಣೆ ಸ್ಪರ್ಧಿಸಲು ಅವಧಿಪೂರ್ವ ನಿವೃತ್ತಿ ಪಡೆದಿದ್ದರು. 1987ನೇ ಬ್ಯಾಚಿನ ಬಿಹಾರ ಕೇಡರ್ ಅಧಿಕಾರಿಯಾಗಿರುವ ಇವರು 2009ರಲ್ಲಿ ಬಕ್ಸಾರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‍ ನಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಇದೇ ಕಾರಣಕ್ಕೆ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ವಿಆರ್‍ಎಸ್ ಪಡೆದಿದ್ದರೂ ಅವರ ಕನಸು ಈಡೇರಿರಲಿಲ್ಲ. ಆಗಿನ ಬುಕ್ಸಾರ್ ಸಂಸದ ಲಾಲ್ಮುನಿ ಚೌಬೆ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿ ತಾನು ಸ್ಫರ್ಧಿಸಬಹುದೆಂದು ಪಾಂಡೆ ಅಂದುಕೊಂಡಿದ್ದರೂ ಹಾಗಾಗಲಿಲ್ಲ. ಚೌಬೆ ಅವರು ಬಂಡಾಯವೇಳುವ ಸೂಚನೆ ದೊರಕಿದಂತೆ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು.

ಹೀಗೆ ವಿಆರ್‍ಎಸ್ ಪಡೆದು ಒಂಬತ್ತು ತಿಂಗಳ ನಂತರ ತಮ್ಮ ರಾಜೀನಾಮೆ ವಾಪಸ್ ಪಡೆಯುವಂತೆ ಅವರು ಬಿಹಾರ ಸರಕಾರವನ್ನು ಕೋರಿದ್ದರು. ಅವರ ಮನವಿಗೆ ಬಿಹಾರ ಸರಕಾರ ಒಪ್ಪಿತ್ತು ಹಾಗೂ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಅವರು ಬಿಹಾರದ ಡಿಜಿಪಿಯಾದರು.

ಐದು ವರ್ಷಗಳ ಹಿಂದೆ ಮುಝಫ್ಫರಪುರ್‍ ನ 12 ವರ್ಷದ ಬಾಲಕಿಯೊಬ್ಬಳ ಅಪಹರಣ ಪ್ರಕರಣ ಕುರಿತಂತೆ ಸಿಬಿಐ ಪಾಂಡೆ ಅವರನ್ನು ಪ್ರಶ್ನಿಸಿತ್ತು. ಆಗ ಮುಝಫ್ಫರಪುರ್ ವಲಯ ಐಜಿ ಆಗಿದ್ದ  ಪಾಂಡೆಯ ವಿರುದ್ಧ ಬಾಲಕಿಯ ತಂದೆ ಕಿಡಿಕಾರಿದ್ದರಲ್ಲದೆ  ತಮ್ಮ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿರುವವರ ಜತೆ  ಪಾಂಡೆ ಶಾಮೀಲಾಗಿದ್ದಾರೆಂದು ಆರೋಪಿಸಿದ್ದರು. ಈ ಪ್ರಕರಣದ ಆರೋಪಿಗಳಲ್ಲೊಬ್ಬರು ಎಂದು ಪಾಂಡೆ ಅವರನ್ನು ಹೆಸರಿಸಲಾಗಿತ್ತು. ಈ ಪ್ರಕರಣದ ಸಿಬಿಐ ತನಿಖೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News