ಹತ್ತು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸದಿದ್ದರೆ ಪಾದಯಾತ್ರೆ

Update: 2020-08-08 13:48 GMT

ಬಳ್ಳಾರಿ, ಆ. 8: ಜಿಲ್ಲೆಯ ಭೂಮಿ, ಜಲ ಸೇರಿದಂತೆ ಇಲ್ಲಿನ ಸಂಪನ್ಮೂಲ ಉಪಯೋಗಿಸಿಕೊಂಡು ಲಾಭ ಗಳಿಸುತ್ತಿರುವ ಜಿಂದಾಲ್ ಕಂಪೆನಿ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಜನರ ನೆರವಿಗೆ ಧಾವಿಸಬೇಕಿತ್ತು. ಇದುವರೆಗೆ ಕೈಜೋಡಿಸದಿರುವುದು ವಿಷಾದಕರ. ಇನ್ನೂ 10 ದಿನದೊಳಗೆ 1 ಸಾವಿರ ಬೆಡ್‍ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್ ಕಂಪೆನಿಯ ವರೆಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಬೆಡ್‍ಗಳ ಕೊರತೆ ಕಾಣುತ್ತಿದೆ. ಇದನ್ನು ನೀಗಿಸಲು ಜಿಂದಾಲ್ ಸಂಸ್ಥೆಯವರು ಸಾವಿರ ಬೆಡ್‍ಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು ಮತ್ತು ಅಗತ್ಯ ಸಹಕಾರ ಕಲ್ಪಿಸಬೇಕು. ಇನ್ನೂ 10 ದಿನದೊಳಗೆ ಕಂಪೆನಿ ಕೇರ್ ಸೆಂಟರ್ ಸ್ಥಾಪಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಗುಡುಗಿದರು.

ಜಿಲ್ಲೆಯಲ್ಲಿರುವ ಕಬ್ಬಿಣದ ಅದಿರು ಗಣಿ ಮಾಲಕರು ಮುಂದೆ ಬಂದು ಎಲ್ಲರೂ ಸೇರಿ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಗಳ ವ್ಯವಸ್ಥೆ ಮಾಡಿಕೊಡಬೇಕು. ಖಾಸಗಿ ಆಸ್ಪತ್ರೆಗಳು ಕೂಡಲೇ ಶೇ.50ರಷ್ಟು ಬೆಡ್‍ಗಳನ್ನು ನೀಡಬೇಕು. ಆ ಮೂಲಕ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಬೇಕು. ಜತೆಗೆ ಸೋಂಕಿನ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಲಾಕ್‍ಡೌನ್ ಮಾಡಿ: ಜಿಲ್ಲೆಯಲ್ಲಿ ಕೊರೋನ ಸೋಂಕು ದಿನೇದಿನೇ ಅತ್ಯಂತ ವೇಗದಲ್ಲಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಸಂಪೂರ್ಣವಾಗಿ ಎರಡು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡುವುದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ ಸೋಮಶೇಖರ ರೆಡ್ಡಿ, ಲಾಕ್‍ಡೌನ್ ಮಾಡುವುದಕ್ಕಿಂತ ಮುಂಚೆಯೇ ಜನರು ಪಡಿತರ ಸಹಿತ ಅಗತ್ಯ ವಸ್ತುಗಳ ಖರೀದಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಿದ ಬಳಿಕವೇ ಸೋಂಕು ಹಬ್ಬುತ್ತಿರುವುದರ ವೇಗಕ್ಕೆ ಕಡಿವಾಣ ಬೀಳಬಹುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ನಗರಕ್ಕೆ 2 ವೆಂಟಲೇಟರ್ ಆಂಬ್ಯುಲೆನ್ಸ್ ಗಳನ್ನು ನೀಡುವುದಕ್ಕೆ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಒಪ್ಪಿದ್ದು, ಎರಡು ವಾರಗಳಲ್ಲಿ ಬಳ್ಳಾರಿಗೆ ಬರಲಿವೆ ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 12ರಿಂದ 15ಕೋಟಿ ರೂ.ಖರ್ಚು ಮಾಡಿದಲ್ಲಿ ಬಳಕೆಗೆ ಸಿದ್ಧವಾಗಲಿದೆ. ಜಿಲ್ಲಾ ಖನಿಜ ನಿಧಿಯಡಿ ಹಣವನ್ನು ವೆಚ್ಚ ಮಾಡಿ ಕೊರೋನ ಸೊಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ರೋಗಿಗಳಿಗೆ ವೈದ್ಯರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News