ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕನೇ ಬಲಿ ಪಡೆದ ಮಹಾಮಳೆ

Update: 2020-08-08 14:06 GMT

ಚಿಕ್ಕಮಗಳೂರು, ಆ.8: ಕಾಫಿನಾಡಿನಲ್ಲಿ ಸತತ ಐದು ದಿನಗಳಿಂದ ಅಬ್ಬರಿಸಿದ ಮಳೆ ಶನಿವಾರ ಹಗಲಿನ ವೇಳೆ ಸ್ವಲ್ಪಮಟ್ಟಿಗೆ ಬಿಡುವು ನೀಡಿದ್ದು, ಭದ್ರಾ, ತುಂಗಾ, ಹೇಮಾವತಿ ನದಿ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆಯಾದರೂ ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಧಾರಾಕಾರವಾಗಿ ಮಳೆ ಆರ್ಭಟಿಸುತ್ತಿರುವುದರಿಂದ ಮಲೆನಾಡಿನಾದ್ಯಂತ ಅಲ್ಲಲ್ಲಿ ಪ್ರಾಕೃತಿಕ ಅನಾಹುತಗಳು ಮುಂದುವರಿದಿವೆ. 

ಕಳೆದೊಂದು ವಾರದಿಂದ ಮೂಡಿಗೆರೆ ತಾಲೂಕಿನಾದ್ಯಂತ ಮಳೆ ಆರ್ಭಟಿಸುತ್ತಿರುವುದರಿಂದ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಚಿಕ್ಕಮಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು ಮಣ್ಣು, ಬೃಹತ್ ಗಾತ್ರದ ಮರ ಹಾಗೂ ಬಂಡೆಕಲ್ಲುಗಳು ರಸ್ತೆ ಮೇಲೆ ಬಿದ್ದಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಆ.11ರವರೆಗೆ ಬಂದ್ ಮಾಡಲಾಗಿದ್ದು, ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತಗೊಂಡಿದೆ. ಶುಕ್ರವಾರ ರಾತ್ರಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ಚಾರ್ಮಾಡಿ ಘಾಟ್‍ನ ಅಲೇಖಾನ್ ಸಮೀಪ ಮತ್ತೇ ಗುಡ್ಡ ಕುಸಿದಿದೆ. ಲೋಕೋಪಯೋಗಿ ಇಲಾಖೆ, ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಮಣ್ಣು, ಮರ, ಕಲ್ಲು ತೆರವಿಗೆ ಶ್ರಮಿಸುತ್ತಿದ್ದರೂ ಘಾಟಿ ವ್ಯಾಪ್ತಿಯಲ್ಲಿ ಸತತ ಮಳೆಯಿಂದಾಗಿ ರಸ್ತೆ, ಧರೆ ಕುಸಿತ ಮುಂದುವರಿದಿದೆ.

ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಆರು ಅಡಿ ನೀರು ಹರಿದಿದೆ. ಶನಿವಾರ ಮದ್ಯಾಹ್ನದ ವೇಳೆಗೆ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಭದ್ರಾ ನದಿಯ ಪ್ರವಾಹದಿಂದಾಗಿ ನದಿ ಪಾತ್ರದ ಅಡಿಕೆ, ಭತ್ತದ ಗದ್ದೆಗಳು ಜಲಾವೃತಗೊಂಡಿದ್ದ ದೃಶ್ಯ ಶನಿವಾರ ಬೆಳಗ್ಗೆ ಕಂಡು ಬಂತು. ಕಳಸ ಭಾಗದಲ್ಲಿ ಹರಿಯುವ ಸೋಮಾವತಿ ನದಿ ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. 

ಮೂಡಿಗೆರೆ ತಾಲೂಕಿನಾದ್ಯಂತ ಶನಿವಾರ ಹಗಲಿನ ವೇಳೆ ಮಳೆ ಬಿಡುವು ನೀಡಿದ್ದು, ತುಂತುರು ಮಳೆ ನಿರಂತರವಾಗಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆ, ಗಾಳಿಗೆ ಊರುಬಗೆ ಗ್ರಾಮದಲ್ಲಿ ಲಕ್ಷ್ಮಣ್ ಕುಮಾರ್ ಎಂಬವರ ಮೂರು ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ಅಕ್ಕಪಕ್ಕದ ಕಾಫಿ, ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಶನಿವಾರ ಬೆಳಗ್ಗೆ ಕಳಸ ಸಮೀಪದಲ್ಲಿ ಜಾನುವಾರೊಂದು ಭದ್ರಾ ನದಿಯ ಪ್ರವಾಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಹೆಬ್ಬಾಳೆ ಗ್ರಾಮದ ಭದ್ರಾ ನದಿಯ ಪ್ರವಾಹ ಸಮೀಪದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಭಾರೀ ಹಾನಿ ಸಂಭವಿಸಿದೆ.

ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಶೃಂಗೇರಿ ಶಾರದಾಂಬ ದೇವಾಸ್ಥಾನ ಸುತ್ತುವರಿದಿದ್ದ ತುಂಗಾನದಿಯ ಪ್ರವಾಹದ ನೀರು ಸ್ವಲ್ಪ ಇಳಿಕೆಯಾಗಿದೆ. ಪಟ್ಟಣದ ಕೆ.ವಿ.ಆರ್ ರಸ್ತೆ, ಗಾಂಧಿ ಮೈದಾನ, ಭೋಜನಾಶಾಲೆ, ನದಿ ಪಾತ್ರದಲ್ಲಿದ್ದ ತೋಟಗಳಿಗೆ ನುಗ್ಗಿದ್ದ ನೀರು ಶನಿವಾರ ಇಳಿಕೆಯಾಗಿದೆ. ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕೆರೆಕಟ್ಟೆ, ನೆಮ್ಮಾರ್ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಬಿಡುವು ನೀಡಿದೆ. 

ಕೊಪ್ಪ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಸಾಧಾರಣ ಮಳೆಯಾಗುತ್ತಿದ್ದು, ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಶನಿವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ಮಧ್ಯಾಹ್ನದ ವೇಳೆಗೆ ಸ್ವಲ್ಪ ಬಿಡುವು ನೀಡಿದೆ. ಶನಿವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಭದ್ರಾನದಿಯ ನೀರಿನ ಮಟ್ಟ ಏರುಗತಿಯಲ್ಲೇ ಸಾಗುತ್ತಿದೆ. ನದಿ ತೀರದಲ್ಲಿರುವ ಭಂಡೀಮಠ ಗ್ರಾಮದಲ್ಲಿರುವ 30 ಕುಟುಂಬಗಳನ್ನು ಶನಿವಾರ ಸ್ಥಳಾಂತರಿಸಿ ನಿರಾಶ್ರಿತ ಕೇಂದ್ರದಲ್ಲಿರಿಸಲು ತಾಲೂಕು ಆಡಳಿತ ಕ್ರಮಕೈಗೊಂಡಿದೆ.

ತರೀಕೆರೆ ತಾಲೂಕಿನ ಜಂಬದಹಳ್ಳ ಜಲಾಶಯದಿಂದ ಹರಿದು ಬರುವ ಹೋದಿರಾಯನ ಹಳ್ಳದ ನಾಲೆ ಕುಸಿದು ನಾಲೆ ಸುತ್ತಮುತ್ತ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಐದು ದಿನಗಳಿಂದ ಸುರಿದ ಭಾರೀ ಮಳೆಗೆ ಜಿಲ್ಲಾದ್ಯಂತ 108ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ ಎಂದು ತಿಳಿದುಬಂದಿದ್ದು, ಶನಿವಾರ ಜಿಲ್ಲಾದ್ಯಂತ ವರುಣಾನ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವುದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಸಂಸದೆ ಶೋಭಾ, ಶಾಸಕ ಕುಮಾರಸ್ವಾಮಿ ಭೇಟಿ; ಸ್ಥಳೀಯರಿಂದ ತರಾಟೆ 

ಮೂಡಿಗೆರೆ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಅತಿವೃಷ್ಟಿಯಾಗುತ್ತಿದ್ದು, ಶನಿವಾರ ತಾಲೂಕಿನ ಬಂಕೇನಹಳ್ಳಿ ಗ್ರಾಮಕ್ಕೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಇಬ್ಬರನ್ನೂ ತರಾಟೆಗೆ ಪಡೆದಿರುವ ಘಟನೆ ನಡೆದಿದೆ.

ಕಳೆದ ಬಾರಿ ಮೂಡಿಗೆರೆ ಸಂಪರ್ಕದ ಬಂಕೇನಹಳ್ಳಿ ಸೇತುವೆ ಕುಸಿದು ನಿವಾಸಿಗಳಿಗೆ ಸಂಚಾರ ಅಸಾಧ್ಯವಾಗಿರುವುದರಿಂದ ಆಕ್ರೋಶಿತರಾದ ನಿವಾಸಿಗಳು ವರ್ಷ ಕಳೆದರೂ ಸೇತುವೆ ಪುನರ್ ರ್ಮಾಣಕ್ಕೆ ಕ್ರಮಕೈಗೊಳ್ಳದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. 

ಮಹಾಮಳೆಗೆ ನಾಲ್ಕನೇ ಬಲಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಜಿಲ್ಲೆಯಲ್ಲಿ ಇದುವರೆಗೂ ನಾಲ್ವರನ್ನು ಬಲಿ ಪಡೆದಿದೆ.

ಶುಕ್ರವಾರ ಸಂಜೆ ವೇಳೆ ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ವಾಸುದೇವ್ ಭಟ್(54) ಎಂಬವರು ಮನೆ ಸಮೀಪದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರಾತ್ರಿ ವೇಳೆ ಹಳ್ಳದಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ರುದ್ರಮ್ಮ(87) ಎಂಬವರ ಮೃತದೇಹ ಶನಿವಾರ ಪತ್ತೆಯಾಗಿದೆ. ಆ.6ರಂದು ಗೋಣಿಬೀಡು ಗ್ರಾಮದ ಅಗ್ರಹಾರದ ದೇವಾಲಯಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಹೇಮಾವತಿ ನದಿ ಪ್ರವಾಹಕ್ಕೆ ಸಿಲುಕಿ ವೃದ್ಧೆ ರುದ್ರಮ್ಮ ಕೊಚ್ಚಿ ಹೋಗಿದ್ದು, ಸ್ಥಳೀಯರು, ಪೊಲೀಸರು ಶನಿವಾರ ಮಧ್ಯಾಹ್ನ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದಕ್ಕೂ ಮೊದಲು ಕಡೂರು ತಾಲೂಕಿನಲ್ಲಿ ರೈತರೊಬ್ಬರು ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದರೆ, ಬಾಳೆಹೊನ್ನೂರು ಸಮೀಪ ಭದ್ರಾ ನದಿಯ ನೆರೆ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು. ಒಟ್ಟಾರೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಜಿಲ್ಲೆಯಲ್ಲಿ ನಾಲ್ವರನ್ನು ಬಲಿ ಪಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News