ಅಯ್ಯನಕೆರೆ ಜಲಸಾಹಸ ಕ್ರೀಡೆಗಳಿಂದ ಕೆರೆಗೆ ಹಾನಿ ಆರೋಪ: ಸಿ.ಟಿ.ರವಿ ವಿರುದ್ಧ ಗರಂ ಆದ ಸ್ಥಳೀಯರು

Update: 2020-08-08 16:34 GMT

ಚಿಕ್ಕಮಗಳೂರು, ಆ.8: ಜಿಲ್ಲೆಯ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿರುವ ಅಯ್ಯನಕೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಸಾಹಸ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದ ವೇಳೆ ಸ್ಥಳೀಯ ರೈತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಲ್ಲದೇ ಸಿ.ಟಿ.ರವಿ ಅವರನ್ನು ತರಾಟೆಗೆ ಪಡೆದ ಘಟನೆ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಆರಂಭದಲ್ಲಿ ವೇದಿಕೆ ಮುಂಭಾಗಕ್ಕೆ ದಿಢೀರ್ ಬಂದ ನೂರಾರು ರೈತರು, ಕೆರೆ ಅಚ್ಚುಕಟ್ಟುದಾರರು, ಕೆರೆ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು, ಅಯ್ಯನಕೆರೆಯಲ್ಲಿ ಜಲಸಾಹನ ಕ್ರೀಡಾ ಚಟುವಟಿಕೆ, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೂ ಮುನ್ನ ಸ್ಥಳೀಯ ರೈತರು, ಅಚ್ಚುಕಟ್ಟುದಾರರು, ಕೆರೆ ನಿರ್ವಹಣಾ ಸಮಿತಿಯೊಂದಿಗೆ ಚರ್ಚೆ ನಡೆಸಿಲ್ಲ. ಕಾರ್ಯಕ್ರಮದ ಬಗ್ಗೆ ಮಾಹಿತಿಯೇ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ವೇಳೆ ಮಾತಿನ ಚಕಮಕಿ, ಗದ್ದಲ ಏರ್ಪಟ್ಟಿತ್ತು.

ಸ್ಥಳೀಯ ಮುಖಂಡ ಸತೀಶ್ ಈ ವೇಳೆ ಮಾತನಾಡಿ, ಅಯ್ಯನಕೆರೆ ಸಖರಾಯಪಟ್ಟಣ ಭಾಗದ ಜನರ ಜೀವನಾಡಿಯಾಗಿದ್ದು, ಜಲಸಾಹಸ ಕ್ರೀಡೆಗಳ ಆರಂಭಕ್ಕೆ ಸ್ಥಳೀಯರ ವಿರೋಧವಿದೆ. ಕೆರೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ನೆಪದಲ್ಲಿ ಅಚ್ಚುಕಟ್ಟುದಾರರಿಗೆ ತೊಂದರೆಯಾಗಲಿದ್ದು, ಇದಕ್ಕೆ ಆಸ್ಪದ ನೀಡುವುದಿಲ್ಲ. ಚಿಕ್ಕಮಗಳೂರು ನಗರ ಸಮೀಪದಲ್ಲಿರುವ ಹಿರೇಕೊಳಲೆ ಕರೆ, ಬಸವನಹಳ್ಳಿ ಕೆರೆಗಳನ್ನೇ ಅಭಿವೃದ್ಧಿ ಮಾಡದವರು ಅಯ್ಯನಕೆರೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿರುವುದನ್ನು ನಂಬಲು ಸಾಧ್ಯವಿಲ್ಲ. ಜಲಸಾಹಸ ಕ್ರೀಡೆಗಳಿಗೆ ಅಲ್ಲಿನ ಕೆರೆಗಳನ್ನೇ ಬಳಸಿಕೊಳ್ಳದೇ ರೈತರ ಜೀವನಾಡಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ಮೂಲವಾಗಿರುವ ಕೆರೆ ಬಳಸಿಕೊಳ್ಳುತ್ತಿರುವು ಸರಿಯಲ್ಲ. ಅಯ್ಯನಕೆರೆ ತುಂಬಿಸಲು ಶಾಶ್ವತ ಯೋಜನೆ ರೂಪಿಸದೇ ಜಲಸಾಹಸ ಕ್ರೀಡೆ, ಪ್ರವಾಸೋದ್ಯಮದ ನೆಪದಲ್ಲಿ ಇಲ್ಲಿನ ಪರಿಸರ ನಾಶ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಕೆರೆ ಅಚ್ಚುಕಟ್ಟುದಾರ ಹಾಗೂ ಕೆರೆ ನಿರ್ವಹಣಾ ಸಮಿತಿ ಸದಸ್ಯ ಮಂಜುನಾಥ್ ಮಾತನಾಡಿ, ಜಲಸಾಹಸ ಕ್ರೀಡೆಗಳಿಗೆ ಕೆರೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರಬೇಕು. ಕ್ರೀಡೆಗಳಿಗಾಗಿ ಕೆರೆಯನ್ನು ಮೀಸಲು ಮಾಡಿದರೆ ರೈತರಿಗೆ, ಕೆರೆ ಅಚ್ಚುಕಟ್ಟುದಾರರಿಗೆ ನೀರು ಸಿಗದಂತಾಗುತ್ತದೆ. ಜನ, ಜಾನುವಾರುಗಳಿಗೆ ನೀರು ಸಿಗದಂತಾಗುತ್ತದೆ. ಬೋಟ್‍ಗಳಿಗೆ ಬಳಸುವ ಡೀಸೆಲ್‍ನಿಂದಾಗಿ ನೀರು ಕಲುಷಿತವಾಗುತ್ತದೆ. ಈ ಬಗ್ಗೆ ಕೆರೆ ಅಚ್ಚುಕಟ್ಟುದಾರರ ನೇತೃತ್ವದ ಸಮಿತಿ ಸದಸ್ಯರೊಂದಿಗೆ ಚರ್ಚೆಯೇ ಮಾಡದೇ ತೆರೆಮರೆಯಲ್ಲಿ ಯೋಜನೆ ಜಾರಿಗೆ ಮುಂದಾಗಿರುವುದೇಕೆ ಎಂದು ಪ್ರಶ್ನಿಸಿದರು.

ಈ ವೇಳೆ ಮುಖಂಡ ಸತೀಶ್ ಮತ್ತೆ ಮಾತನಾಡಲು ಮುಂದಾದಾಗ ಪೊಲೀಸರು ಮೈಕ್ ಕಸಿಯಲು ಮುಂದಾದರು. ಈ ಸಂದರ್ಭ ಸ್ಥಳದಲ್ಲಿದ್ದ ನೂರಾರು ರೈತರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸತೀಶ್ ಅವರು ಇಲ್ಲಿನ ರೈತರ ಸಮಸ್ಯೆ ಹೇಳುತ್ತಿದ್ದಾರೆ. ಅವರಿಗೆ ಮಾತನಾಡಲು ಬಿಡಿ, ಕೆರೆಯಲ್ಲಿ ನೀರಿನ ಸಮಸ್ಯೆಯಾದಾಗ ಉಂಟಾಗುವ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಮುಂದೆ ಸಮಸ್ಯೆಯಾದಾಗ ನಮ್ಮನ್ನು ಕೇಳಲು ಯಾರು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಭೋಜೇಗೌಡ ಹಾಗೂ ಧರ್ಮೇಗೌಡ ಅವರು ರೈತರನ್ನು ಸಮಾಧಾನ ಪಡಿಸಿದರು.

ಬಳಿಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಅಯ್ಯನಕೆರೆ ಈ ಭಾಗದ ರೈತರಿಗೆ ಇರುವ ಏಕೈಕ ನೀರಿನ ಮೂಲವಾಗಿದೆ. ಜಲಸಾಹಸ ಕ್ರೀಡೆಗಳು ಹಾಗೂ ಪ್ರವಾಸಿಗರಿಂದಾಗಿ ಕೆರೆಗೆ ಹಾನಿಯಾದಲ್ಲಿ ಯಾರು ಹೊಣೆ ಎಂಬ ಭೀತಿ ಕೆರೆ ನೀರು ಬಳಸುವ ರೈತರದ್ದಾಗಿದೆ. ಕೆರೆ ನೀರು ಹೋಗುವ 4 ಕಾಲುವೆಗಳು ದುರಸ್ತಿಯಾಗಿಲ್ಲ. ಕೆರೆಗೆ ನೀರು ತುಂಬಿಸುವ ಶಾಶ್ವತ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಈ ಕಾರಣಕ್ಕೆ ಸ್ಥಳೀಯರು ಜಲಸಾಹಸ ಕ್ರೀಡೆ ಹಾಗೂ ತರಬೇತಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಆತಂಕಗಳಿಗೆ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಜನರಲ್ ತಿಮ್ಮಯ್ಯ ಸಾಹಸ ಕ್ರೀಡಾ ಅಕಾಡೆಮಿಗೆ ಅಯ್ಯನಕೆರೆಯಲ್ಲಿ ಜಲಸಾಹಸ ಕ್ರೀಡೆಗಳು ಮತ್ತು ತರಬೇತಿಗೆ ಮಾತ್ರ ಅನುಮತಿ ನೀಡಲಾಗಿದೆಯೇ ಹೊರತು, ಅಕಾಡೆಮಿಗೆ ಕೆರೆ ಹಾಗೂ ಕೆರೆ ನೀರಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಕೆರೆಯಲ್ಲಿ ನೀರಿದ್ದರೆ ಕ್ರೀಡಾ ತರಬೇತಿಗಳನ್ನು ಆಯೋಜಿಸುತ್ತಾರೆ. ನೀರಿಲ್ಲದಿದ್ದರೆ ಜಲಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವುದಿಲ್ಲ. ಕ್ರೀಡೆಗಳಲ್ಲಿ ಡೀಸೆಲ್ ಚಾಲಿತ ಬೋಟ್‍ಗಳನ್ನು ಬಳಸದಿರುವುದರಿಂದ ಕೆರೆ ನೀರು ಕಲುಷಿತವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಖರಾಯಪಟ್ಟಣದಲ್ಲಿ ಹಿಂದೆ ನಡೆದ ಜನಸಂಪರ್ಕ ಸಭೆಯಲ್ಲಿ ಅಯ್ಯನಕೆರೆಯನ್ನು ಪ್ರವಾಸಿಕೇಂದ್ರವನ್ನಾಗಿ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಲಸಾಹಸ ಕ್ರೀಡೆಗಳ ಮೂಲಕ ಕೆರೆಯನ್ನು ಪ್ರವಾಸಿ ತಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ತರಬೇತಿ ಪಡೆದವರನ್ನು ಮುಂದೆ ಅತಿವೃಷ್ಟಿ ಸಂದರ್ಭ ರಕ್ಷಣಾ ಕಾರ್ಯಗಳಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ ಎಂದ ಅವರು, ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕೆರೆ ಸಮೀಪದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಈಗಾಗಲೇ 2.50 ಕೋ. ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನೆಯನ್ನು ಪರಿಸರಕ್ಕೆ ಪೂರಕವಾಗಿ ಅನುಷ್ಠಾನ ಮಾಡುತ್ತಿರುವುದರಿಂದ ಕೆರೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದರು.

ಅಯ್ಯನಕೆರೆಯ ಮೇಲೆ ಹಕ್ಕಿರುವುದು ಸಣ್ಣ ನೀರಾವರಿ ಇಲಾಖೆಗೆ ಹಾಗೂ ಸ್ಥಳೀಯ ಅಚ್ಚುಕಟ್ಟುದಾರರಿಗೆ ಮಾತ್ರ. ಸಹಾಸ ಅಕಾಡೆಮಿಗೆ ಈ ಕೆರೆಯ ಮೇಲೆ ಯಾವುದೇ ಹಕ್ಕು ನೀಡಿಲ್ಲ. ಸ್ಥಳೀಯರಿಗೆ ಜಲಸಾಹಸ ಕ್ರೀಡಾ ತರಬೇತಿ ನೀಡುವುದು ಮಾತ್ರ ಅವರ ಕೆಲಸವಾಗಿದೆ ಎಂದ ಅವರು, ಬಯಲು ಭಾಗದ ಕೆರೆಗಳನ್ನು ತುಂಬಿಸಲು 1350 ಕೋ. ರೂ.ವೆಚ್ಚದಲ್ಲಿ ಗೊಂದಿ ಹಳ್ಳ ಯೋಜನೆಗೆ ಡಿಪಿಆರ್ ಆಗಿದ್ದು, ತಾಂತ್ರಿಕ ಅನುಮೋದನೆಯನ್ನೂ ಪಡೆಯಲಾಗಿದೆ. ಯೋಜನೆ ಜಾರಿಗೆ ಹಣಕಾಸು ಸಮಿತಿ ಅನುಮತಿ ನೀಡಬೇಕಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ತೊಡಕಾಗಿದೆ. ಈ ಯೋಜನೆ ಜಾರಿಯಾದಲ್ಲಿ ಬಯಲು ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆ ವ್ಯಾಪ್ತಿಗೆ ಅಯ್ಯನಕೆರೆಯನ್ನೂ ಸೇರಿಸಲಾಗಿದೆ. ಚಿಕ್ಕಮಗಳೂರಿನ ಬಸವನಹಳ್ಳಿಕೆರೆ, ಅಯ್ಯನಕೆರೆಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದ್ದು, ಮುಳ್ಳಯ್ಯನಗಿರಿ ಅಭಿವೃದ್ಧಿಗೂ ಪ್ರವಾಸೋದ್ಯಮ ಇಲಾಖೆಯಿಂದ ಕ್ರಮ ವಹಿಸಲಾಗುವುದು ಎಂದರು.

ಸಚಿವ ಸಿ.ಟಿ.ರವಿ ಭರವಸೆ ಹಿನ್ನೆಲೆಯಲ್ಲಿ ರೈತರು ಸ್ಥಳದಿಂದ ಹೊರ ನಡೆದರು. ಬಳಿಕ ಜಲಸಾಹಸ ಕ್ರೀಡಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ರವೀಂದ್ರ ಬೆಳವಾಡಿ, ಜಸಿಂತಾ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲೇಹಳ್ಳಿ ಸೇರಿದಂತೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಅಯ್ಯನಕೆರೆಯಲ್ಲಿ ಜಲಸಾಹಸ ಕ್ರೀಡಾ ತರಬೇತಿ ಯೋಜನೆ ಸಂಬಂಧ ಕೆರೆ ಅಚ್ಚುಕಟ್ಟುದಾರರೊಂದಿಗೆ ಸಭೆ ನಡೆಸಿದ್ದರೆ ಈ ಗೊಂದಲ ಆಗುತ್ತಿರಲಿಲ್ಲ. ಕ್ರೀಡೆಗಳಿಂದ ಕೆರೆಗೆ ಯಾವುದೇ ಹಾನಿಯಾಗಲ್ಲ, ಕೆರೆ ಹಾಗೂ ಕೆರೆ ನೀರಿನ ಮೇಲೆ ಅಕಾಡೆಮಿಗೆ ಯಾವುದೇ ಅಧಿಕಾರ ಇಲ್ಲ, ರೈತರಿಗೆ, ಅಚ್ಚುಕಟ್ಟುದಾರರಿಗೆ ತೊಂದರೆಯಾಗಲ್ಲ ಎಂದು ಸಚಿವರು ಭರವಸೆ ನೀಡಿರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಅಯ್ಯನಕೆರೆ ಸಮೀಪದಲ್ಲಿ ಮೀನುಗಾರಿಕೆಗೆ 1983ರಲ್ಲಿ ಯೋಜನೆ ರೂಪಿಸಲಾಗಿದ್ದು, ಸದ್ಯ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಸಚಿವ ಸಿ.ಟಿ.ರವಿ ಅವರು ಇಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಕ್ರಮವಹಿಸಬೇಕು. ಕೆರೆ ವ್ಯಾಪ್ತಿಯಲ್ಲಿ ಪರಿಸರನಾಶವಾಗದಂತೆ ಎಲ್ಲರೂ ಕಾಳಜಿ ವಹಿಸಬೇಕು. ಗೊಂದಿ ಯೋಜನೆಯಿಂದ ಮದಗದ ಕೆರೆಗೆ ನೀರು ಹರಿಸುವಂತೆಯೇ ಅಯ್ಯನಕೆರೆಗೂ ನೀರು ಹರಿಸಲು ಸಚಿವರು ಕ್ರಮವಹಿಸಬೇಕು. 
- ಎಸ್.ಎಲ್.ಧರ್ಮೇಗೌಡ, ವಿಪ ಉಪಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News