ಬ್ರಹ್ಮಗಿರಿ ಬೆಟ್ಟ ಕುಸಿತ: ಕಾರ್ಯಾಚರಣೆ ಚುರುಕುಗೊಳಿಸಲು ಸಚಿವ ಸೋಮಣ್ಣ ಸೂಚನೆ

Update: 2020-08-08 16:38 GMT

ಮಡಿಕೇರಿ. ಆ.8: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿರುವ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನಿರ್ದೇಶನ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು

ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದರೂ ಸಹ, ಅವಘಡ ಸಂಭವಿಸಿದೆ. ಜನರ ನೋವು, ತೊಳಲಾಟ, ದುಗುಡ ನೋಡಲು ಸಾಧ್ಯವಾಗುತ್ತಿಲ್ಲ. ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತದಿಂದ ಐವರು ಕಾಣೆಯಾಗಿದ್ದು, ಇದು ಸವಾಲಿನ ಕೆಲಸವಾಗಿದೆ. ಹಿಟಾಚಿಗಳನ್ನು ತರಿಸಿ ಶೀಘ್ರವೇ ಕಾರ್ಯ ನಿರ್ವಹಿಸಬೇಕು. ಈಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ. ಹಿಟಾಚಿಗಳು ತಲಕಾವೇರಿ ಪ್ರದೇಶವನ್ನು ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.   

ಮುಖ್ಯಮಂತ್ರಿ ಅವರು ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಹಾರ ಕಾರ್ಯವನ್ನು ಆರಂಭಿಸಲೇ ಬೇಕು ಎಂದರು. ಪ್ರಕೃತಿ ವಿಕೋಪ ಸಂಬಂಧಿಸಿದಂತೆ ದಾನಿಗಳು ಬಟ್ಟೆ, ಬರೆ, ಇತರೆ ವಸ್ತುಗಳನ್ನು ನೀಡುವುದು ಬೇಡ, ಬದಲಾಗಿ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಕಳುಹಿಸಬಹುದಾಗಿದೆ ಎಂದು ಸಚಿವರು ಮನವಿ ಮಾಡಿದರು.  

ಪರಿಹಾರ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ
ಪರಿಹಾರ ಕೇಂದ್ರಗಳಲ್ಲಿನ ಪ್ರತಿಯೊಬ್ಬರಿಗೂ ಸಹ ಕೋವಿಡ್ ಪರೀಕ್ಷೆ ನಡೆಸಿ, ಪಾಸಿಟಿವ್ ವರದಿ ಬಂದರೆ ಆಸ್ಪತ್ರೆಗೆ ಸೇರಿಸಿ, ನೆಗೆಟಿವ್ ಬಂದವರನ್ನು ಸುರಕ್ಷಿತ ಅಂತರ ಕಾಯ್ದುಕೊಂಡು ಪರಿಹಾರ ಕೇಂದ್ರಗಳಲ್ಲಿ ಇರಿಸಿ ಆರೈಕೆ ಮಾಡಲಾಗುವುದು ಎಂದು ವಿ.ಸೋಮಣ್ಣ ಅವರು ತಿಳಿಸಿದರು. 

ಇಡೀ ಜಿಲ್ಲೆಯ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಮತ್ತಷ್ಟು ಮುತುವರ್ಜಿ ವಹಿಸಬೇಕು. ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಜನರ ಆರೋಗ್ಯ ರಕ್ಷಣೆಯೂ ಸಹ ಮುಖ್ಯವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿಯಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಸಿದರು. 

ಬೆಳೆ ನಷ್ಟ ಸರ್ವೆ
ಬೆಳೆ ಹಾನಿ ಪರಿಹಾರ ಸಂಬಂಧ ಮತ್ತು ಕಾಫಿ, ಕರಿಮೆಣಸು ಮತ್ತು ಜಿಲ್ಲೆಯಲ್ಲಿ ಹಾನಿಗೊಳಗಾದ ಬೆಳೆಗಳ ಸರ್ವೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರ ವಹಿಸಬೇಕು ಎಂದರು. 

ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಕೆಲಸ ನಿರ್ವಹಣೆ ಸಾಧ್ಯ, ಒಬ್ಬರಿಗೊಬ್ಬರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. 5 ಮಂದಿ ನಾಪತ್ತೆ ಆಗಿರುವ ಘಟನೆಗೆ ಸಂಬಂಧಿಸಿದಂತೆ ಎಲ್ಲೋ ಒಂದು ಕಡೆ ನಾವು ಎಡವಿದ್ದೇವೆ ಎನಿಸುತ್ತದೆ ಎಂದು ಸಚಿವರು ನುಡಿದರು. ಯಾವ ಯಾವ ಹಂತದ ಅಧಿಕಾರಿಗಳಿಗೆ ಕೆಲಸ ವಹಿಸಲಾಗಿದೆ ಅವರು ನಿಭಾಯಿಸಬೇಕು. ದುಗುಡ ಕಡಿಮೆ ಮಾಡಲು ಸವಾಲುಗಳನ್ನು ಎದುರಿಸಬೇಕು. ಸರ್ಕಾರ ಎಂದರೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯ ಜನರಲ್ಲಿ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ತಡೆಗೋಡೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಕಾಫೀ ಬೆಳೆ ನಷ್ಟ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡುವಂತೆ ಸೂಚಿಸಿದರು. ರೈತರಿಗೆ ತೊಂದರೆ ಆಗದಂತೆ ಗಮನಹರಿಸಬೇಕು ಎಂದರು ಅಲ್ಲದೆ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಪಡೆದರು.  

ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಮಾತನಾಡಿ ಜಿಲ್ಲೆಯಲ್ಲಿ ಹಾನಿಗೊಳಗಾದ ಭಾಗಮಂಡಲ, ಸಂಪಾಜೆ ಭಾಗದ ರಸ್ತೆಗಳನ್ನು ಶೀಘ್ರವೇ ಸರಿಪಡಿಸಿ ಎಂದು ಸೂಚಿಸಿದರು.

ಬಿಎಸ್‍ಎನ್‍ಎಲ್ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಭ ಮಾಡಬಾರದು ಎಂದು ಸಂಸದರು ನಿರ್ದೇಶನ ನೀಡಿದರು. ಬಿಎಸ್‍ಎನ್‍ಎಲ್ ವತಿಯಿಂದ ಟವರ್ ಗಳನ್ನು ಆರಂಭಿಸಿ. ಹಳ್ಳಿಗಳ ಪ್ರದೇಶದಲ್ಲಿ ನೆಟ್‍ವರ್ಕ್ ಸಮಸ್ಯೆಯಾಗದಂತೆ ಎಚ್ಚರ ವಹಿಸಿ ಎಂದು ಭಾರತ್ ಸಂಚಾರ ನಿಗಮ ಲಿಮಿಟೆಡ್‍ನ ಅಧಿಕಾರಿಗಳಿಗೆ ಸೂಚನೆ ನಿಡಿದರು.

ಟವರ್ ಗಳಿಗೆ ಡೀಸೆಲ್ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಜಿಲ್ಲಾಡಳಿತದ ವತಿಯಿಂದ ಡೀಸೆಲ್ ಒದಗಿಸಲಾಗುವುದು. ತಕ್ಷಣವೇ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ಅವರು ತಿಳಿಸಿದರು. ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ಹೋಬಳಿ ವಲಯಕ್ಕೆ ನೇಮಕ ಮಾಡಲಾಗಿದೆ ಎಂದರು.

ಹಾನಿಗೆ 5 ಕೋಟಿ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಪ್ರಕೃತಿ ವಿಕೋಪ ಹಾನಿಗೆ ಸರ್ಕಾರದ ಜಿಲ್ಲೆಗೆ 5 ಕೋಟಿ ಬಿಡುಗಡೆಯ ಆದೇಶ ನೀಡಿದೆ. ಸರ್ಕಾರದ ವತಿಯಿಂದ ಗೃಹ ವಸ್ತುಗಳ ಹಾನಿಗಳಿಗೆ 10 ಸಾವಿರ ರೂ, ಸಂಪೂರ್ಣ ಮನೆ ಹಾನಿಗೆ 5 ಲಕ್ಷ ಗರಿಷ್ಠ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಬಾರಿಯಂತೆ ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಹಾರ ಕೇಂದ್ರದಲ್ಲಿ ಇರುವವರಿಗೆ ತಕ್ಷಣವೇ 10 ಸಾವಿರ ರೂ. ನೀಡುವಂತೆ ಮತ್ತು ಪ್ರಾಣಹಾನಿ ಸಂಭವಿಸಿದಲ್ಲಿ ತಕ್ಷಣವೇ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರು ಮಡಿಕೇರಿ ವೀರಾಜಪೇಟೆ ವಲಯದಿಂದ 33 ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಿದ್ಧವಾಗಿದೆ. ಈ ತಂಡದಲ್ಲಿ 176 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ 257 ಮರಗಳು ರಸ್ತೆ, ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಮರಗಳನ್ನು ತೆರವುಗೊಳಿಸಲಾಗಿದೆ. ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ಟೀಂ 24 ಗಂಟೆಗಳೂ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

1800 ಕಂಬಗಳಿಗೆ ಹಾನಿ
ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು, ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆ ಮತ್ತು ಗಾಳಿಯಿಂದಾಗಿ 1800 ವಿದ್ಯುತ್ ಕಂಬಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ವಿದ್ಯುತ್ ಅವಘಡ ಉಂಟಾದಲ್ಲಿ ನಿರ್ವಹಿಸಲು 200 ರಿಂದ 300 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕರೆಸಲಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕೊಡಗು ಸೂಕ್ಷ್ಮ ಪ್ರದೇಶವಾಗಿದೆ. ಜನ ತಿಂಗಳುಗಳಗಟ್ಟೆಲೆ ಕತ್ತಲೆಯಲ್ಲಿರುವಂತಾಗಬಾರದು. ಈ ಬಗ್ಗೆ ಗಮನಹರಿಸಿ, ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಸಹ ಬಗೆಹರಿಸಿ ಎಂದರು. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ಎಚ್ಚರ ವಹಿಸಿ. ವಿದ್ಯುತ್ ಅತ್ಯವಶ್ಯಕವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಎಚ್ಚರ ವಹಿಸಿ. ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಉಸ್ತುವಾರಿ ಸಚಿವರು ಹೇಳಿದರು.

ಜಿಲ್ಲಾಡಳಿತ ಭವನ ಸುರಕ್ಷಿತ
ಜಿಲ್ಲಾಡಳಿತ ಭವನ ಶೇ.100 ರಷ್ಟು ಸುರಕ್ಷಿತವಾಗಿದೆ. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ನಾನೇ ಜಿಲ್ಲಾಡಳಿತ ಭವನದ ಅಡಿಪಾಯಕ್ಕೆ ಯೋಜನೆ ರೂಪಿಸಿರುವುದು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಅವರು ಇದೇ ಸಂದರ್ಭ ಭರವಸೆ ನೀಡಿದರು.  

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಗೋವಿಂದರಾಜು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News