ಅಪಾಯದ ಮಟ್ಟ ಮೀರಿ ಹರಿದ ಕಪಿಲೆ: ನಂಜನಗೂಡು- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್

Update: 2020-08-08 17:13 GMT

ಮೈಸೂರು,ಆ.8: ಕಪಿಲಾ ನದಿ ಅಪಯಾದ ಮಟ್ಟ ಮೀರಿ ಹರಿಯುತ್ತಿದ್ದು, ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಯನ್ನು ಬಂದ್ ಮಾಡಲಾಗಿದೆ.

ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ 78 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದ್ದು, ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗೆ ಕಪಿಲಾ ನದಿ ನೀರು ನುಗ್ಗಿದೆ. ಕಪಿಲಾ ನದಿಗೆ 78 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಟ್ಟ ಪರಿಣಾಮ ಮೈಸೂರು-ಊಟಿ ರಸ್ತೆಗೆ ನದಿ ನೀರು ನುಗ್ಗಿದ್ದು, ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿದ್ದವು. 

ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು, ಕಾರು ಸೇರಿದಂತೆ ಎಲ್ಲಾ ವಾಹನಗಳು ಅಪಾಯದಲ್ಲಿಯೇ ಸಂಚರಿಸುತ್ತಿವೆ. ಸರ್ಕಸ್ ನಡೆಸಿ ಜನರು ವಾಹನ ಚಲಾಯಿಸುತ್ತ ಸಾಗಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡಿನ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದೇವಾಲಯಕ್ಕೆ ನೀರು ನುಗ್ಗಿದೆ. ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಮತ್ತಷ್ಟು ಮುಳುಗಡೆಯಾಗುವ ಸಾಧ್ಯತೆ ಇದೆ. ಮಲ್ಲನಮೂಲೆ ಮಠದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.

ಇನ್ನು, ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇಗುಲದ ಬಳಿಯ ಮುಡಿಕಟ್ಟೆ ಸಂಪೂರ್ಣ ಜಲಾವೃಗೊಂಡಿದೆ. ಹದಿನಾರು ಕಾಲು ಮಂಟಪ, ಅಯ್ಯಪ್ಪಸ್ವಾಮಿ ದೇವಸ್ಥಾನ ಮತ್ತು ಪರುಶರಾಮ ದೇವಸ್ಥಾನಗಳಿಗು ಜಲದಿಗ್ಬಂಧನವಾಗಿದೆ.

ಮತ್ತೊಂದಡೆ ಕಪಿಲಾ ನದಿ ಪಕ್ಕದಲ್ಲಿರುವ ತೊರೆಮಾವು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಹ ಸಂಪೂರ್ಣ ಜಲಾವೃತಗೊಂಡಿದ್ದು, ಸುತ್ತೂರು ಮಾರ್ಗದ ರಸ್ತೆ ಮುಳುಗಡೆಯಾಗಿದೆ. ನಂಜನಗೂಡು ನಗರದ ಹಳ್ಳದಕೇರಿ ಮತ್ತು ತೋಪಿನ ಬೀದಿಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

ಪ್ರವಾಹ ಭೀತಿಗೆ ನಂಜನಗೂಡಿನ ಜನರು ಭಯ ಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ತಾಲೂಕು ಆಡಳಿತ ಜೊತೆಯಲ್ಲಿದ್ದು, ನಿಮ್ಮ ಸಂಪೂರ್ಣ ಯೋಗಕ್ಷೇಮವನ್ನು ನೋಡಿಕೊಳ್ಳಲಿದೆ ಎಂದು ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದರು. ಈಗಾಗಲೇ ನೆರೆಪೀಡಿತರಿಗೆ ಗಂಜಿ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದ್ದು, ಜಾನುವಾರುಗಳ ರಕ್ಷಣೆಗೆ 8 ಕಡೆಗಳಲ್ಲಿ ಗೋ ಶಾಲೆ ತೆರೆಯಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News