ನಾವು ಮದ್ಯದಂಗಡಿ ತೆರೆಯುವವರಲ್ಲ, ಮುಚ್ಚುವವರು: ಗೋವಿಂದ ಕಾರಜೋಳ

Update: 2020-08-08 17:40 GMT

ಬಾಗಲಕೋಟೆ, ಆ. 8: ಗ್ರಾಮೀಣ ಪ್ರದೇಶದಲ್ಲಿ ಎಂಎಸ್‍ಐಎಲ್ ಮಳಿಗೆ ಆರಂಭಿಸುವ ಪ್ರಸ್ತಾವ ರಾಜ್ಯ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಾವು ಮದ್ಯದ ಅಂಗಡಿಗಳನ್ನು ತೆರೆಯುವವರಲ್ಲ. ಅವುಗಳನ್ನು ಮುಚ್ಚುವವರು ಎಂದು ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಮುಧೋಳ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸರಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯದ ಅಂಗಡಿ ಆರಂಭಿಸಲಾಗುತ್ತದೆ ಎನ್ನುವುದು ಕೇವಲ ವದಂತಿ. ರಾಜ್ಯ ಸರಕಾರ ಆ ರೀತಿ ಯಾವುದೇ ತೀರ್ಮಾನವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್)ದ ಹಿನ್ನೆಲೆಯುಳ್ಳವರು. ಮದ್ಯದ ಅಂಗಡಿ ಮುಚ್ಚುವುದು, ಬಿಜೆಪಿ ನೀತಿಯಲ್ಲಿನ ಮುಖ್ಯ ಅಂಶ ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಈಗಿರುವ ಮದ್ಯದ ಅಂಗಡಿಗಳನ್ನು ಹೊರತುಪಡಿಸಿ, ಹೊಸದಾಗಿ ಯಾವುದೇ ಮದ್ಯದಂಗಡಿ ತೆರೆಯುವುದಿಲ್ಲ. ಅದು ನಮ್ಮ ಸರಕಾರದ ಆದ್ಯತೆಯೂ ಅಲ್ಲ. ಈ ಹಿಂದೆ ರಾಜ್ಯದ ಗಲ್ಲಿ-ಗಲ್ಲಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದರು. ಅದನ್ನು ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ಸಂಪೂರ್ಣ ಬಂದ್ ಮಾಡಿದರು. ಸಾರಾಯಿ ಬಂದ್ ಮಾಡಿದ ಕೀರ್ತಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಸಲ್ಲುತ್ತದೆ ಎಂದು ಕಾರಜೋಳ ಇದೇ ವೇಳೆ ಸ್ಮರಿಸಿದರು.

ಜಿಲ್ಲಾಡಳಿಕ್ಕೆ ಸೂಚನೆ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಗೋವಿಂದ ಕಾರಜೋಳ, ಪರಿಹಾರ ಕ್ರಮಗಳ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಸಂಭವಿಸಬಹುದಾದ ಹೆಚ್ವು ಹಾನಿಯನ್ನು ತಡೆಗಟ್ಟಲು, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ್ ಜಗಲಾಸ್ಕರ್ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News