ಸಿ.ಟಿ.ರವಿಗೆ ಸಂತ್ರಸ್ತರ ಗೋಳಿಗಿಂತ ಕಾರ್ಯಕ್ರಮವೇ ಮುಖ್ಯ: ಸಚಿವರ ವಿರುದ್ಧ ವ್ಯಾಪಕ ಟೀಕೆ

Update: 2020-08-08 18:05 GMT

ಚಿಕ್ಕಮಗಳೂರು, ಆ.7: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದಾಗಿ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಭಾರೀ ಅನಾಹುತ, ಸಾವು, ನೋವುಗಳು ಸಂಭವಿಸಿದ್ದರೂ ಶುಕ್ರವಾರದವರೆಗೂ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬಂದಿವೆ.

ಜಿಲ್ಲೆಯಲ್ಲಿ ಕಳೆದ ರವಿವಾರದಿಂದ ಭಾರೀ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಪ್ರಾಕೃತಿಕ ವಿಕೋಪಗಳು ಸಂಭವಿಸಿರುವುದಲ್ಲದೇ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ, ಮನೆಗಳ ಹಾನಿ, ರಸ್ತೆ ಸಂಪರ್ಕ ಕಡಿತ ಸೇರಿದಂತೆ ನಾಲ್ಕು ಮಂದಿ ಜಿಲ್ಲೆಯಲ್ಲಿ ಮಹಾಮಳೆಗೆ ಬಲಿಯಾಗಿದ್ದಾರೆ. ಆದರೂ ಶುಕ್ರವಾರದವರೆಗೂ ಜಿಲ್ಲೆಯತ್ತ ತಲೆ ಹಾಕದ ಸಿ.ಟಿ.ರವಿ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಭೆ ನಡೆಸುವಲ್ಲಿ ಮಗ್ನರಾಗಿದ್ದರು. ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಲ್ಲೇ ಠಿಕಾಣಿ ಹೂಡಬೇಕೆಂಬ ಸಿಎಂ ಆದೇಶಕೂ ಕ್ಯಾರೆ ಎನ್ನದೇ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಸಿ.ಟಿ.ರವಿ ಶುಕ್ರವಾರ ರಾತ್ರಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಬಳಿಕ ಸಿ.ಟಿ.ರವಿ ಅತಿವೃಷ್ಟಿ ಸಂಭವಿಸಿದ ಪ್ರದೇಶಗಳ ಅಳಲು ಆಲಿಸಲಿದ್ದಾರೆಂದು ಜನರು ನಿರೀಕ್ಷೆಯಲ್ಲಿದ್ದರು. ಆದರೆ ಸಿ.ಟಿ.ರವಿ ಶನಿವಾರ ಬೆಳಗಾಗುತ್ತಲೇ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಸಖರಾಯಪಟ್ಟಣದ ಅಯ್ಯನಕೆರೆಯಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಕಾರ್ಯಕ್ರಮ ಉದ್ಘಾಟಿಸಲು ತೆರಳಿದ್ದರು. ಈ ಕಾರ್ಯಕ್ರಮದ ಉದ್ಘಾಟಿಸಿದ ಸಚಿವ ರವಿ ಕೆಲ ಹೊತ್ತು ಅಯ್ಯನಕೆರೆಯಲ್ಲಿ ಬೋಟ್‍ನಲ್ಲಿ ಸಂಚರಿಸಿ ದೋಣಿ ವಿಹಾರದ ಮಜಾ ಅನುಭವಿಸಿದರು. ಮಧ್ಯಾಹ್ನದ ಬಳಿಕ ಚಾರ್ಮಾಡಿ ಘಾಟ್ ಹಾಗೂ ಮೂಡಿಗೆರೆಯ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಸಿ.ಟಿ.ರವಿ ನಂತರ ಬೇಲೂರಿಗೆ ತೆರಳಿ ಯಗಚಿ ನದಿಗೆ ಬಾಗಿನ ಆರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿ.ಟಿ.ರವಿ ಅವರ ಈ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

ಜಿಲ್ಲೆಯಾದ್ಯಂತ ಅತಿವೃಷ್ಟಿ ಸಂಭವಿಸಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದವರು ಮೊದಲು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜವಾದ ಜನಪ್ರತಿನಿಧಿಯಾದವನ ಕೆಲಸ, ಆದರೆ ಸಚಿವ ಸಿ.ಟಿ.ರವಿ ಅವರಿಗೆ ಅತಿವೃಷ್ಟಿ ಸಂತ್ರಸ್ತರ ಗೋಳು ಕೇಳುವುದಕ್ಕಿಂತ ತಮ್ಮ ಇಲಾಖೆಯ ಕಾರ್ಯಕ್ರಮವೇ ಮುಖ್ಯವಾಗಿರುವುದು ವಿಪರ್ಯಾಸ, ಇಂತಹ ಸಚಿವರನ್ನು ಪಡೆದ ಚಿಕ್ಕಮಗಳೂರಿನ ಜನರೇ ಭಾಗ್ಯವಂತರೆಂಬ ಟೀಕೆಗಳು ಇದೀಗ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ಮುಖಂಡರಿಂದ ಕೇಳಿ ಬರುತ್ತಿವೆ. ಕಳೆದ ಬಾರಿ ಸಂಭವಿಸಿದ ಅತಿವೃಷ್ಟಿಗೆ ಜಿಲ್ಲಾಡಳಿತ ಇನ್ನೂ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಈ ಬಾರಿ ಮತ್ತೆ ಅತಿವೃಷ್ಟಿ ಸಂಭವಿಸಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕನಿಷ್ಠ ಸಂತ್ರಸ್ತರನ್ನು ಭೇಟಿ ಮಾಡಿ ಸ್ಪಂದಿಸುವ ಭರವಸೆಯನ್ನಾದರೂ ನೀಡಬಹುದಿತ್ತು. ಆದರೆ ಸಚಿವರಿಗೆ ಜನರ ಗೋಳು ಕೇಳುವುದಕ್ಕಿಂತ ತಮ್ಮ ಇಲಾಖೆಯ ಮನರಂಜನಾ ಕಾರ್ಯಕ್ರಮವೇ ಆದ್ಯತಾ ಕೆಲಸವಾಗಿರುವುದು ವಿಪರ್ಯಾಸವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಸಿ.ಟಿ.ರವಿ ಅವರ ಕಾರ್ಯವೈಖರಿ, ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಇರುವ ತಾತ್ಸಾರವನ್ನು ಟೀಕಿಸಿದ್ದಾರೆ.

ಕಳೆದ ಒಂದು ವರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗತ್ತಿದ್ದು, ಮಲೆನಾಡಿನಾದ್ಯಂತ ಜನರ ಬದುಕು ಹೈರಾಣಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಕೇಂದ್ರದಲ್ಲಿದ್ದು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವುದು ಜಿಲ್ಲಾ ಉಸ್ತುವಾರಿ ಸಚಿವ ಆದ್ಯ ಕರ್ತವ್ಯವಾಗಿದೆ. ಆದರೆ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಅತಿವೃಷ್ಟಿ ಸಂತ್ರಸ್ತರ ಸಮಸ್ಯೆಗಳಿಗಿಂತ ಪ್ರವಾಸೋದ್ಯಮ ಇಲಾಖೆಯ ಕೆಲಸಗಳೇ ಮುಖ್ಯವಾಗಿರುವುದು ದುರದೃಷ್ಟಕರ. ಜಿಲ್ಲೆಯಲ್ಲಿ ಕಳೆದ ರವಿವಾರದಿಂದ ಅತಿವೃಷ್ಟಿಯಾಗುತ್ತಿದ್ದು, ಸಚಿವರು ಶುಕ್ರವಾರದವರೆಗೂ ಜಿಲ್ಲೆಯತ್ತ ತಲೆ ಹಾಕಿರಲಿಲ್ಲ. ಸಿಎಂ ಯಡಿಯೂರಪ್ಪನವರೂ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲೇ ಇದ್ದು, ಜನರ ಸಮಸ್ಯೆಗೆ ಸ್ಪಂದಿಸಲು ಸೂಚಿಸಿದ್ದರು. ಆದರೆ ನಮ್ಮ ಜಿಲ್ಲೆಯ ಸಚಿವ ಸಿ.ಟಿ.ರವಿ ಸಿಎಂ ಮಾತಿಗೂ ಬೆಲೆ ನೀಡಿಲ್ಲ. ಶನಿವಾರ ಜಿಲ್ಲೆಯಲ್ಲಿದ್ದ ಸಿ.ಟಿ.ರವಿ ಮೊದಲು ಅತಿವೃಷ್ಟಿ ಸ್ಥಳಗಳಿಗೆ ಭೇಟಿ ನೀಡುವುದನ್ನು ಬಿಟ್ಟು ಅಯ್ಯನಕೆರೆಯಲ್ಲಿ ಮೋಜು ಮಾಡಲು ಹೋಗಿದ್ದಾರೆ. ಮಧ್ಯಾಹ್ನದ ಬಳಿಕ ಮೂಡಿಗೆರೆ ವ್ಯಾಪ್ತಿಯಲ್ಲಿ ಒಂದೆರೆಡು ಕಡೆ ಅಧಿಕಾರಿಗಳೊಂದಿಗೆ ಹೋಗಿ ಬಂದಿದ್ದಾರೆಯೇ ಹೊರತು ಸಂತ್ರಸ್ತರ ಗೋಳು ಕೇಳಿಲ್ಲ. ಸಚಿವರಿಗೆ ಸಂತ್ರಸ್ತರ ಸಮಸ್ಯೆ ಆಲಿಸಲು ಪುರುಷೊತ್ತಿಲ್ಲದಿರುವುದು ವಿಪರ್ಯಾಸವಾಗಿದೆ.
- ರಸೂಲ್ ಖಾನ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News