ಮಳೆ-ಪ್ರವಾಹ ಪರಿಸ್ಥಿತಿ: ಪ್ರಧಾನಿಯೊಂದಿಗೆ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲಿರುವ ಬೊಮ್ಮಾಯಿ, ಆರ್.ಅಶೋಕ್

Update: 2020-08-08 18:18 GMT

ಬೆಂಗಳೂರು, ಆ. 8: ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ.10ರ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿರುವ ವಿಡಿಯೋ ಸಂವಾದದಲ್ಲಿ ರಾಜ್ಯ ಸರಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಪಾಲ್ಗೊಳ್ಳಲಿದ್ದಾರೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರಿಗೆ ಜವಾಬ್ದಾರಿ ನೀಡಿದ್ದು, ರಾಜ್ಯದಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಪ್ರಧಾನಿ ಮೋದಿಯವರಿಗೆ ಇಬ್ಬರು ಸಚಿವರು ವಿವರಣೆ ನೀಡಲಿದ್ದಾರೆಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಹಾನಿ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳು ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಿದ್ದು, ಪರಿಹಾರ ಕಾರ್ಯಗಳಿಗಾಗಿ ಮುಂಗಡವಾಗಿ ಕೇಂದ್ರ ಸರಕಾರದಿಂದ ಹೆಚ್ಚಿನ ಮೊತ್ತದ ಹಣ ಮಂಜೂರು ಮಾಡುವಂತೆ ಪ್ರಧಾನಿ ಮೋದಿಯವರಿಗೆ ಸಚಿವರು ಮನವಿ ಮಾಡುವ ಸಾಧ್ಯತೆಗಳಿವೆ. ಪ್ರಧಾನಿಯವರ ವಿಡಿಯೋ ಸಂವಾದದ ಹಿನ್ನೆಲೆಯಲ್ಲಿ ಸಚಿವರು ನಾಳೆ(ಆ.9) ಸಂಜೆ ಬೆಂಗಳೂರಿನಲ್ಲಿ ಸಭೆ ನಡೆಸಿ ಪ್ರಧಾನಿ ಜತೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲೆ ವಾಸ್ತವ್ಯ ಹೂಡಿದ್ದು ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ವಾಸ್ತವತೆ ಮಾಹಿತಿ ಸಂಗ್ರಹಿಸಿದ್ದಾರೆ. ಆ ಎಲ್ಲ ವಿಚಾರಗಳನ್ನು ವಿಡಿಯೋ ಸಂವಾದದಲ್ಲಿ ಪ್ರಸ್ತಾಪಿಸಲಿದ್ದಾರೆ. ಜೊತೆಗೆ ಕೇಂದ್ರದಿಂದ ಹೆಚ್ಚಿನ ನೆರವು ಕೋರಿ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News