ಅಸಹ್ಯ ಕಮೆಂಟ್, ಕೊಲೆ ಬೆದರಿಕೆಯ ಹಿಂದೆ ಬಿಜೆಪಿ, ಆರೆಸೆಸ್ಸ್ ಕೈವಾಡ: ಲೇಖಕಿ ಶೈಲಜಾ ಹಿರೇಮಠ್ ಆರೋಪ

Update: 2020-08-09 16:54 GMT

ಕೊಪ್ಪಳ, ಆ. 9: `ರಾಜ್ಯದಲ್ಲಿನ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಒಂದು ವರ್ಷದ ಸಾಧನೆಗಳೇನು?' ಎಂದು ಜಾಣತಾಣದಲ್ಲಿ ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಅತ್ಯಂತ ಅಸಹ್ಯ ಕಮೆಂಟ್‍ಗಳ ಮೂಲಕ ವೈಯಕ್ತಿಕ ದಾಳಿ ಆರಂಭಿಸಿದ್ದು, ಇದರ ಹಿಂದೆ ಬಿಜೆಪಿ ಮತ್ತು ಆರೆಸೆಸ್ಸ್ ಕೈವಾಡವಿದೆ. ಸರಕಾರದ ಕುಮ್ಮಕ್ಕಿನಿಂದಲೇ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ' ಎಂದು ಹವ್ಯಾಸಿ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಕಾಂಗ್ರೆಸ್ ನಾಯಕಿ ಶೈಲಜಾ ಹಿರೇಮಠ್ ಆರೋಪಿಸಿದ್ದಾರೆ.

ರವಿವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಅಸಹ್ಯ ಕಮೆಂಟ್ ಹಾಕಿದ ಭೀಮನಗೌಡ ಬಿರಾದಾರ, ಜಯರಾಮ, ಶ್ರೀನಿವಾಸ, ಯುವರಾಜ ರೆಡ್ಡಿ ಸೇರಿ 7 ಜನರ ವಿರುದ್ಧ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಸರಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಇವರ ನಿಜಬಣ್ಣ ಬಯಲಾಗಲಿದೆ ಎಂದು ಟೀಕಿಸಿದರು.

ಜುಲೈ 30ರಂದು ನಾನು ನನ್ನ ಫೇಸ್‍ಬುಕ್ ಪೇಜ್‍ನಲ್ಲಿ `ರಾಜ್ಯ ಬಿಜೆಪಿ ಒಂದು ವರ್ಷದ ಸಾಧನೆ ಏನು? ಒಬ್ಬರಿಗೆ ಒಂದೇ ಉತ್ತರದ ಅವಕಾಶ' ಎಂದು ಮಾಡಿದ ಪೋಸ್ಟ್ ಗೆ ಅಸಹ್ಯ ಕಮೆಂಟ್ ಮಾಡಲಾಗಿದೆ. ಅಲ್ಲದೆ, `ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದಲೇ ನೀನು ಉಳಿದುಕೊಂಡಿದ್ದಿಯಾ.. ಇಲ್ಲವಾದರೆ ಕಾಣದ ಕಡಲಿಗೆ..' ಎಂಬ ಕೊಲೆ ಬೆದರಿಕೆಯನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು.

ಯಾರೊಬ್ಬರೂ ಕೇಳಲು ಸಾಧ್ಯವಿಲ್ಲದ ಹಾಗೂ ಯಾರಿಗೂ ಹೇಳಲು ಆಗದ ಅತ್ಯಂತ ಅಸಹ್ಯ, ಕೆಟ್ಟ ಪದ ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ. ಇವರಿಗೆ ಅಕ್ಕ-ತಂಗಿ, ತಾಯಿ ಇದ್ದಾರೋ ಇಲ್ಲವೋ ಎಂಬುದೇ ಅನುಮಾನ. ನಾನು ಅತ್ಯಂತ ಸಂಕಷ್ಟದಲ್ಲಿ ಬದುಕು ಕಟ್ಟಿಕೊಂಡು ಈ ಹಂತಕ್ಕೆ ಬಂದಿದ್ದೇನೆ. ಬಿಜೆಪಿ ಮತ್ತು ಆರೆಸೆಸ್ಸ್ ಬೆಂಬಲಿಗ ಅಂಧ ಭಕ್ತರ ಕಮೆಂಟ್ ನೋಡಿ ನನಗೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವಾಗಿತ್ತು ಎಂದು ಶೈಲಜಾ ಹಿರೇಮಠ್ ಗದ್ಗದಿತರಾದರು.

ನನ್ನ ವಿರುದ್ಧ ಕಮೆಂಟ್ ಮಾಡಿದ ವ್ಯಕ್ತಿಗಳ ಫೇಸ್‍ಬುಕ್ ಪೇಜ್ ನೋಡಿದರೆ ಇವರೆಲ್ಲ ಬಿಜೆಪಿ ಮತ್ತು ಆರ್‍ಎಸೆಸ್ಸ್ ಬೆಂಬಲಿಗರು ಎಂಬುದು ಸ್ಪಷ್ಟ. ಹೀಗಾಗಿ ಇವರುಗಳ ವಿರುದ್ಧ ಗಂಗಾವತಿ ಪೋಲೀಸರು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಏಳು ಮಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ದಾರಿಯನ್ನು ಅನಿವಾರ್ಯವಾಗಿ ಹಿಡಿಯಬೇಕಾಗುತ್ತದೆ ಎಂದು ಶೈಲಜಾ ಹಿರೇಮಠ್ ಅವರು ಇದೇ ವೇಳೆ ಎಚ್ಚರಿಕೆಯನ್ನು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ, ಬಿಜೆಪಿ ವಿರುದ್ಧ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಬರೆದರೆ ಅಂತಹವರನ್ನು ಹತ್ತು ನಿಮಿಷದಲ್ಲಿ ಹಿಡಿದು ಬಂಧಿಸುವ ಪೊಲೀಸರು, ಶೈಲಜಾ ಹಿರೇಮಠ್ ಅವರ ವಿರುದ್ಧ ಅತ್ಯಂತ ಅಸಹ್ಯ ರೀತಿಯಲ್ಲಿ ಸಂಸ್ಕಾರವಂತ ಬಿಜೆಪಿ-ಆರೆಸೆಸ್ಸ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದು, ಅವರೆಲ್ಲರನ್ನು ಬಂಧಿಸಲು ಇನ್ನೂ ಒಂದು ವಾರ ಕಾಲಾವಕಾಶ ನೀಡುತ್ತೇವೆ. ಇಲ್ಲವಾದರೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ'

-ಶಿವರಾಜ ತಂಗಡಗಿ, ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News