ತಗ್ಗಿದ ಪ್ರವಾಹ: ಭಾಗಮಂಡಲ ರಸ್ತೆ ಸಂಚಾರಕ್ಕೆ ಮುಕ್ತ

Update: 2020-08-09 18:56 GMT

ಮಡಿಕೇರಿ, ಆ.9: ಜಿಲ್ಲೆಯಲ್ಲಿ ಕಳೆದ ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆ ರವಿವಾರ ಸಂಪೂರ್ಣ ಕಡಿಮೆಯಾಗಿದ್ದು, ಬಹುತೇಕ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಧಾರಾಕಾರವಾಗಿ ಸುರಿದ ಮಳೆಗೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಶ್ರೀಭಗಂಡೇಶ್ವರ ದೇವಾಲಯದ ಆವರಣದಲ್ಲಿ ನದಿಯ ಹರಿವು ತಗ್ಗಿದೆ.

ಅಲ್ಲದೆ ಭಾಗಮಂಡಲ-ತಲಕಾವೇರಿ ಮಾರ್ಗ ಸಾರಿಗೆ ಸಂಪರ್ಕ ಮುಕ್ತವಾಗಿದೆ. ತಲಕಾವೇರಿ ಕ್ಷೇತ್ರದಲ್ಲಿ ನಡೆದ ದುರಂತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಜೆಸಿಬಿ ಮತ್ತು ಇಟಾಚಿ ವಾಹನವನ್ನು ಕೊಂಡೊಯ್ಯಲು ವಾತಾವರಣ ಸಹಕಾರಿಯಾಗಿದೆ. ಭಾಗಮಂಡಲದ ತ್ರೀವೇಣಿ ಸಂಗಮ ಸಮೀಪ ಮುಳುಗಡೆಗೊಂಡಿದ್ದ ಅಂಗಡಿಗಳನ್ನು ವರ್ತಕರು ಸ್ವಚ್ಛಗೊಳಿಸುತ್ತಿರುವ ದೃಶ್ಯವೂ ಕಂಡು ಬಂತು. ಅಂಗಡಿಯಲ್ಲಿದ್ದ ಸರಕು ಪದಾರ್ಥಗಳು ನಷ್ಟವಾಗಿದ್ದು, ಸಂಕಷ್ಟದ ಬದುಕು ದೂಡುವಂತಾಗಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡರು.

ಮತ್ತೊಬ್ಬ ಪೆಟ್ಟಿಗೆ ಅಂಗಡಿ ಇಟ್ಟಿದ್ದ ವೃದ್ಧೆಯೊಬ್ಬರು 10 ವರ್ಷಗಳಿಂದ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ದೂಡುತ್ತಿದ್ದೆ. ಪ್ರವಾಹದಿಂದ ಆಕಾಶ ನೋಡುವಂತಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು. ಭಾಗಮಂಡಲದಲ್ಲಿಯೇ ಹುಟ್ಟಿ ಬೆಳೆದು ಬದುಕು ಸವೆಸುತ್ತಿದ್ದೇವೆ, ಇನ್ನೆಲ್ಲಿ ಹೋಗುವುದು ಎಂದು ಅವರು ನೋವು ತೋಡಿಕೊಂಡರು.

ಮುಳುಗಡೆಯಾಗಿದ್ದ ಜಿಲ್ಲೆಯ ಇತರ ಪ್ರದೇಶಗಳ ನಿವಾಸಿಗಳು ಹಾನಿಯ ನಡುವೆ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರವಾಹ ಕಡಿಮೆಯಾಗಿದ್ದರೂ ಮುಂದಿನ ಜೀವನ ಹೇಗೆ ಎನ್ನುವ ಪ್ರಶ್ನೆಯೊಂದಿಗೆ ಸಂಕಷ್ಟದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಕಾವೇರಿಯ ಕ್ಷೇತ್ರ ಸೇರಿದಂತೆ ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ ನದಿಯಲ್ಲೂ ಪ್ರವಾಹದ ಮಟ್ಟ ಸಾಕಷ್ಟು ಇಳಿದಿದ್ದು, ಗದ್ದೆ ಬಯಲುಗಳು, ರಸ್ತೆಗಳ ಮೇಲೆ ಹರಿಯುತ್ತಿದ್ದ ಪ್ರವಾಹ ಕೆಳಕ್ಕಿಳಿಯುವ ಮೂಲಕ ಸಂಚಾರ ಸುಗಮವಾಗಿದ್ದರೆ, ನಾಟಿ ಮಾಡಿದ್ದ ಗದ್ದೆಗಳ ಭತ್ತದ ಸಸಿಗಳು ನಾಶವಾಗಿ ಹಲವೆಡೆಗಳಲ್ಲಿ ಕೃಷಿಕ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇತ್ರಿಯಲ್ಲಿ ಕಾವೇರಿಯ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿ ಕಳೆದ ಮೂರು ನಾಲ್ಕು ದಿನಗಳಿಂದ ಕಡಿತಗೊಂಡಿದ್ದ ಮಡಿಕೇರಿ-ವಿರಾಜಪೇಟೆ ನಡುವಿನ ಸಂಪರ್ಕ ಭಾನುವಾರ ಮತ್ತೆ ಪುನರಾರಂಭವಾಗಿದೆ. ಹಿಂದೆಂದೂ ಕಾಣದ ಪ್ರವಾಹ ಪರಿಸ್ಥಿತಿಗಳಿಂದ ಕೊಂಡಂಗೇರಿಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದೀಗ ಪ್ರವಾಹ ಇಳಿದು ಸಂಚಾರ ಆರಂಭಗೊಂಡಿದೆ.

ಜಿಲೆಯ ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಮಳೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದು, ಜನ ಜೀವನ ಯಥಾಸ್ಥಿತಿಗೆ ಮರಳಲು ಪ್ರಕೃತಿ ಅವಕಾಶ ಮಾಡಿಕೊಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News