ತಾವು ಧರಿಸಿದ್ದ ಸೀರೆಯನ್ನು ನದಿಗೆಸೆದು ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಮೂವರು ಮಹಿಳೆಯರು

Update: 2020-08-10 18:04 GMT

ಪೆರಂಬಲೂರ್: ತಮಿಳುನಾಡಿನ ಪೆರಂಬಲೂರ್ ಜಿಲ್ಲೆಯಲ್ಲಿರುವ ಕೊಟ್ಟರೈ ಡ್ಯಾಂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಲು ತಾವು ಧರಿಸಿದ ಸೀರೆಯನ್ನೇ ಬಿಚ್ಚಿ ನೀರಿಗೆಸೆದ ಮೂವರು ಮಹಿಳೆಯರು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಒಟ್ಟು ನಾಲ್ಕು ಯುವಕರು ಮುಳುಗುತ್ತಿದ್ದರೂ ಅವರಲ್ಲಿಬ್ಬರನ್ನು ಮಾತ್ರ ರಕ್ಷಿಸಲು ಈ ಮಹಿಳೆಯರಿಗೆ ಸಾಧ್ಯವಾಗಿದೆ.

ಆಗಸ್ಟ್ 6ರಂದು ಸಿರುವಚ್ಚೂರು ಗ್ರಾಮದ 12 ಮಂದಿ ಯುವಕರ ತಂಡವೊಂದು  ಕೊಟ್ಟರೈ ಗ್ರಾಮದಲ್ಲಿ ಕ್ರಿಕೆಟ್ ಆಟವಾಡಲು ಬಂದಿತ್ತು. ಆಟದ ನಂತರ ಯುವಕರೆಲ್ಲರೂ ಡ್ಯಾಂ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು, ಆದರೆ ಅಷ್ಟರೊಳಗಾಗಿ ನೀರಿನ ಸೆಳೆತಕ್ಕೆ ಮೂವರು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಅಲ್ಲಿಗೆ ಬಟ್ಟೆ ಒಗೆಯಲು ಬಂದಿದ್ದ  ಸೆಂದಮಿಳ್ ಸೆಲ್ವಿ (38), ಮುತ್ತುಮಾಲ್ (34) ಹಾಗೂ ಅನಂತವಲ್ಲಿ (34) ಎಂಬ ಮೂವರು ಅದನುರೈ ಗ್ರಾಮದ ಮಹಿಳೆಯರು  ನೋಡಿದ್ದರು.

“ನಾವು ಬಟ್ಟೆ ಒಗೆದು ಇನ್ನೇನು ಮನೆಗೆ ಹೋಗಬೇಕೆನ್ನುವಾಗ ಈ ಯುವಕರ ಗುಂಪು  ಬಂದಿತ್ತು. ಅತ್ತಿತ್ತ ನೋಡಿ ನೀರಿಗಿಳಿದ ಅವರಿಗೆ ನೀರಿನ ಆಳದ ಕುರಿತು ಎಚ್ಚರಿಕೆ ನೀಡಿದೆವು. ಆದರೂ  ಅವರು ನೀರಿಗಿಳಿದಿದ್ದರು. ಕೆಲವೇ ಕ್ಷಣದಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ನೋಡಿ ತಡ ಮಾಡದೆ ನಾವು ಧರಿಸಿದ ಸೀರೆಯನ್ನೂ ಬಿಚ್ಚಿ ನೀರಿಗೆಸೆದೆವು. ಅದನ್ನು ಹಿಡಿದುಕೊಂಡು ಇಬ್ಬರು ದಡ ಸೇರಿದರು,'' ಎಂದು ಮಹಿಳೆಯರು ವಿವರಿಸಿದ್ದಾರೆ.

ಈ ಮಹಿಳೆಯರ ಸಾಹಸ ಹಾಗೂ ಸಮಯಪ್ರಜ್ಞೆಯಿಂದ ಕಾರ್ತಿಕ್ ಮತ್ತು ಸೆಂಥಿಲ್ವೇಲನ್ ಬದುಕುಳಿದಿದ್ದಾರೆ. ಪವಿತ್ರನ್ (17)  ಹಾಗೂ ವೈದ್ಯ ರಂಜಿತ್ (25)  ಮೃತಪಟ್ಟಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಅವರಿಬ್ಬರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News