ಕೊರೋನ ಸೋಂಕಿನಿಂದ ಸಿಎಂ ಬಿಎಸ್‌ವೈ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

Update: 2020-08-10 13:24 GMT

ಬೆಂಗಳೂರು, ಆ. 10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೋನ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಸೋಮವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ಮನೆಗೆ ಮರಳಿದ್ದಾರೆ.

ಯಡಿಯೂರಪ್ಪನವರಿಗೆ ಆ.2ರ ರವಿವಾರ ರಾತ್ರಿ ಕೊರೋನ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೋವಿಡ್-19 ಸೋಂಕಿನ ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ, ಕೊರೋನ ಪಾಸಿಟಿವ್ ಬಂದಿದ್ದರಿಂದ ಬಿಎಸ್‍ವೈ ಅವರು, ವೈದ್ಯರ ಸಲಹೆಯಂತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮೊದಲಿಗೆ ಸಿಎಂ ಬಿಎಸ್‍ವೈ ಅವರ ಕಾರು ಚಾಲಕ ಹಾಗೂ ಅವರ ಅಡುಗೆ ಸಿಬ್ಬಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಆಗ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಪರೀಕ್ಷೆ ಮಾಡಿಸಿದಾಗ ಸೋಂಕು ಕಾಣಿಸಿಕೊಂಡಿರಲಿಲ್ಲ. ಆ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ಯಡಿಯೂರಪ್ಪನವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು.

ಜತೆಗೆ ಅವರ ಪುತ್ರಿ ಸೇರಿದಂತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹತ್ತಕ್ಕೂ ಹೆಚ್ಚು ಮಂದಿಗೆ ಕೊರೋನ ಸೋಂಕು ಪಾಸಿಟಿವ್ ಬಂದಿತ್ತು. ಹಾಗಾಗಿ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಅಧಿಕೃತ ನಿವಾಸ ಕಾವೇರಿ ಸೇರಿದಂತೆ ಡಾಲರ್ಸ್ ಕಾಲನಿಯಲ್ಲಿರುವ ಧವಳಗಿರಿ ನಿವಾಸವನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗಿತ್ತು.

ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಎಂ ನಿವಾಸಿ ಕಾವೇರಿ ಸೀಲ್‍ಡೌನ್ ಮಾಡಲಾಗಿತ್ತು. ಆ.16ರ ವರೆಗೆ `ನಾನು ಕ್ವಾರಂಟೈನ್‍ನಲ್ಲಿ ಇದ್ದೇನೆ' ಎಂಬ ಫಲಕವನ್ನು ಸಿಎಂ ನಿವಾಸಕ್ಕೆ ಬಿಬಿಎಂಪಿ ಅಳವಡಿಸಿತ್ತು. ಇದೀಗ ಬಿಎಸ್‍ವೈ ಅವರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕೋವಿಡ್-19ನಿಂದ ಸಂಪೂರ್ಣ ಗುಣಮುಖರಾಗಿ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳಿಗೆ ಧನ್ಯವಾದಗಳು. ಚೇತರಿಕೆಗಾಗಿ ಹಾರೈಸಿದ ಸಮಸ್ತ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವೈದ್ಯರ ಸಲಹೆಯಂತೆ ಇನ್ನು ಕೆಲವು ದಿನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ಇರಲಿದ್ದೇನೆ. ಆತ್ಮವಿಶ್ವಾಸ, ವೈದ್ಯಕೀಯ ಚಿಕಿತ್ಸೆಗಳಿಂದ ಕೊರೋನ ಸೋಂಕು ಗೆಲ್ಲಬಹುದು. ಆತಂಕಬೇಡ, ಮುನ್ನಚ್ಚರಿಕೆ ಇರಲಿ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಸಿಎಂ ಬಿಎಸ್‍ವೈ ಅವರು ಕೋವಿಡ್‍ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸುದ್ದಿ ಕೇಳಿ ಸಂತೋಷವಾಯಿತು. ಸಿಎಂ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಆಶಿಸುವೆ. ರಾಜ್ಯದಲ್ಲಿ ಕೋವಿಡ್, ಅತಿವೃಷ್ಟಿ ಎರಡನ್ನೂ ನಾವೆಲ್ಲ ಎದುರಿಸಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಲಿ. ಸರಕಾರ ಕೈಗೊಳ್ಳುವ ಪರಿಹಾರ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಜೊತೆಗೆ ಭೂ ಸುಧಾರಣಾ, ಎಪಿಎಂಸಿ, ಕೈಗಾರಿಕಾ ನೀತಿ ಕಾಯ್ದೆ ತಿದ್ದುಪಡಿಗಳನ್ನು ಮರುಪರಿಶೀಲಿಸಲಿ'

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News