ಪೋಷಕರ ಜೊತೆ ಮುನಿಸಿ ಆತ್ಮಹತ್ಯೆಗೆ ಮುಂದಾದ ಯುವತಿ; ರಕ್ಷಿಸಿದ ಪೊಲೀಸ್ ಕಾನ್ಸ್‌ಟೇಬಲ್

Update: 2020-08-10 12:02 GMT

ಶಿವಮೊಗ್ಗ, ಆ.10: ತಂದೆ-ತಾಯಿ ಜೊತೆ ಜಗಳವಾಡಿ ಮನೆ ಬಿಟ್ಟು ನದಿಗೆ ಹಾರಲು ಹೋದ ಯುವತಿಯ ಮನವೊಲಿಸಿ ಪೊಲೀಸರು ಮನೆಗೆ ತಲುಪಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಿನಾಯಕನಗರ ನಿವಾಸಿ 24 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೋಟೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮನು ಶಂಕರ್ ಯುವತಿಯನ್ನು ರಕ್ಷಿಸಿದ್ದಾರೆ. ಯುವತಿ ಮಧ್ಯರಾತ್ರಿ ಬೆಕ್ಕಿನಕಲ್ಮಠದ ಬಳಿ ತುಂಗಾನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ಮಧ್ಯರಾತ್ರಿ ವೇಳೆ ಯುವತಿ ರಸ್ತೆಯಲ್ಲಿ ನದಿಯ ಬಳಿ ಏಕಾಂಗಿಯಾಗಿ ಹೋಗುವುದನ್ನು ಕಾನ್ಸ್‌ಟೇಬಲ್ ಮನು ಶಂಕರ್ ಗಮನಿಸಿದರು.ಆಗ ಯುವತಿಯನ್ನು ವಿಚಾರಿಸಿದ್ದು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ವಿಷಯ ಅರಿತ ಕಾನ್ಸ್‌ಟೇಬಲ್ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಮಗಳು ಮನೆಯಲ್ಲಿ ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದು, ಮಧ್ಯರಾತ್ರಿಯೇ ಹುಡುಕಿಕೊಂಡು ಹೊರಟಿದ್ದರು. ಈ ವೇಳೆ ದಂಪತಿಗೆ ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಗಂಗಾಧರ್ ಎದುರಾಗಿದ್ದಾರೆ. ಆಗ ಯುವತಿಯ ತಂದೆ, ಮಗಳು ಹೆಚ್ಚು ಮೊಬೈಲ್ ಉಪಯೋಗಿಸುತ್ತಿದ್ದಳು. ಮೊಬೈಲ್ ಹೆಚ್ಚು ಬಳಸಬೇಡ ಒಳ್ಳೆಯದಲ್ಲ ಎಂದು ಬೈದಿದ್ದಕ್ಕೆ ಕೋಪಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ದಯವಿಟ್ಟು ಹುಡುಕಿಕೊಡಿ ಎಂದು ಕೋರಿದ್ದಾರೆ. ಪೊಲೀಸ್ ಗಂಗಾಧರ್ ವಾಕಿಟಾಕಿಯಲ್ಲಿ ಕಂಟ್ರೋಲ್ ರೂಮ್‌ಗೆ ವಿಷಯ ತಿಳಿಸಿದ್ದಾರೆ.

ಅಷ್ಟರಲ್ಲಿ ಕೋಟೆ ಪೊಲೀಸರು ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ತಡೆದು ನಿಲ್ಲಿಸಿದ್ದರು. ನಂತರ ಜಯನಗರ ಠಾಣೆಗೆ ಯುವತಿಯನ್ನು ಕರೆತಂದಿದ್ದು, ಪೊಲೀಸರು ಠಾಣೆಯಲ್ಲಿ ಯುವತಿಗೆ ಬುದ್ಧಿವಾದ ಹೇಳಿ ತಂದೆ ಜೊತೆ ಮನೆಗೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News