ಎಸೆಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ

Update: 2020-08-10 17:30 GMT

ಚಿಕ್ಕಬಳ್ಳಾಪುರ, ಆ.10: ಎಸೆಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ಶ್ರಮ ವಹಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 287 ಶಾಲೆಗಳಿದ್ದು, ಇದರಲ್ಲಿ 111 ಸರ್ಕಾರಿ ಶಾಲೆಗಳು, 45 ಅನುದಾನ ಸಹಿತ, 118 ಅನುದಾನ ರಹಿತ ಶಾಲೆಗಳು, 13 ವಸತಿ ಶಾಲೆಗಳಲ್ಲಿ ಒಟ್ಟು 15676 ಮಕ್ಕಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು 15,513 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. 7527 ವಿದ್ಯಾರ್ಥಿನಿಯರು 7949 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಕಳೆದ ವರ್ಷ 19ನೇ ಸ್ಥಾನ ಬಂದಿತ್ತು. ಆದರೆ ಈ ವರ್ಷ ಕಳೆದ ಚಿಕ್ಕಬಳ್ಳಾಪುರ ಜಿಲ್ಲೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರಲು 2,700 ಶಿಕ್ಷಕರ ಶ್ರಮವಿದೆ ಹಾಗೂ ಈ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ನಿವೃತ್ತ ಪ್ರೋಪೆಸರ್ ಒಳಗೊಂಡಂತೆ ಒಂದು ಕೋರ್ ಕಮಿಟಿ ರಚನೆ ಮಾಡಿ ಪ್ರತಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಗಮನ ಹರಿಸಲಾಗುತ್ತಿತ್ತು ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರೋತ್ಸಾಹ ನೀಡಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳು ಸಲ್ಲಿಸಿದರು.  

ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ ಮಾತನಾಡಿ, ಕೊರೋನ ಸಮಯದಲ್ಲೂ ಪ್ರಾಣದ ಹಂಗನ್ನು ತೊರೆದು ಶಿಕ್ಷಕರು ವಿದ್ಯಾರ್ಥಿಗಳ ಮನೆಮನೆಗಳಿಗೆ ತೆರಳಿ ಪಾಠವನ್ನು ಬೋಧನೆ ಮಾಡಿದ ಶಿಕ್ಷಕರಿಗೆ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರಲು ಶ್ರಮ ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೆ.ಸುಧಾಕರ್ ರವರು ಅಧಿಕಾರವನ್ನು ಸ್ವೀಕಾರ ಮಾಡಿದಾಗ ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಎಂದು ಹೇಳಿದ್ದರು. ಅದೇ ರೀತಿ ನಮ್ಮ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠವನ್ನು ಬೋಧನೆ ಹಾಗೂ ಆನ್ ಲೈನ್ ತರಗತಿಗಳನ್ನು ನಡೆಸಿ ಇಂದು ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದೇವೆ ಎಂದರು.

ಜಿಲ್ಲೆಯಾದ್ಯಂತ ಸುಮಾರು 350 ರಿಂದ 360 ಶಿಕ್ಷಕರನ್ನು ಕರೆಸಿ ಸಭೆಯನ್ನು ನಡೆಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅವರಲ್ಲಿ ಉತ್ತೇಜನವನ್ನು ನೀಡಿ ಮಕ್ಕಳಿಗೆ ಸಂಜೆಯ ವೇಳೆಯಲ್ಲಿ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈಗಾಗಲೇ ಹೇಳಿದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂರು ಶಾಲೆಗಳಿಗೆ ತಲಾ ಒಂದೊಂದು ಲ್ಯಾಪ್‍ಟಾಪ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ವಿದ್ಯಾರ್ಥಿಗಳೇ ಪ್ರಮುಖ ಕಾರಣರಾಗಿದ್ದು, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಯಪಡದೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿದ್ದಾರೆ. ಅದರ ಪ್ರತಿಫಲವೇ ಈ ಫಲಿತಾಂಶ. ಪ್ರತಿಯೊಬ್ಬ ಶಿಕ್ಷಕರು ಕೊರೋನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಅವರಿಗೆ ಪಾಠವನ್ನು ಮಾಡುತ್ತಿದ್ದರು. ವಿಶೇಷವಾಗಿ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪರಿಗಣಿಸಲಾಗಿತ್ತು. ಅವರಿಗೆ ಆನ್‍ಲೈನ್ ಮೂಲಕ ಭೋದನೆ ಮಾಡಲಾಗುತ್ತಿತ್ತು. ಆದ್ದರಿಂದ ರಾಜ್ಯದಲ್ಲಿ ಜಿಲ್ಲೆಯು ಎಸೆಸೆಲ್ಸಿ ಫಲಿತಾಂಶ ಮೊದಲ ಸ್ಥಾನಕ್ಕೆ ಬರಲು ಕಾರಣವಾಗಿದೆ. ಈ ಒಂದು ಪ್ರತಿಫಲ ಪ್ರತಿಯೊಬ್ಬ ಶಿಕ್ಷಕರಿಗೆ ಸಲ್ಲಬೇಕಿದೆ. ಅದೇ ರೀತಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಬೇಸರಗೊಳ್ಳದೆ ಮತ್ತೆ ಪರೀಕ್ಷೆಗೆ ಬರೆಯಲು ಸಿದ್ಧರಾಗಿ ಎಂದು ಧೈರ್ಯವನ್ನು ತುಂಬಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕ ಎಸ್. ನಾಗೇಶ್ ಮಾತನಾಡಿ, ಜಿಲ್ಲಾಡಳಿತ ಮಾರ್ಗದರ್ಶನದಂತೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು. ಪ್ರತಿಯೊಬ್ಬ ಶಿಕ್ಷಕರ ಶ್ರಮದಿಂದ ಜಿಲ್ಲೆ ಮೊದಲ ಸ್ಥಾನ ಬರಲು ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ವಿನೂತನ ಪ್ರಯತ್ನಗಳನ್ನು ಮಾಡಲಾಯಿತು. ಮುಖ್ಯವಾಗಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪ್ರಮುಖವಾಗಿ ವಿದ್ಯಾರ್ಥಿಗಳು ಕಾರಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುನಿಯಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ಅನ್ನು ನೀಡಲಾಗುವುದು ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News