ಹೇಮಾವತಿ ಜಲಾಶಯದಿಂದ ನೀರು ಹರಿಸುವ ವಿಚಾರ: ಸಚಿವ ಮಾಧುಸ್ವಾಮಿ-ಮಾಜಿ ಸಚಿವ ರೇವಣ್ಣ ಜಟಾಪಟಿ

Update: 2020-08-10 17:50 GMT

ಬೆಂಗಳೂರು, ಆ. 10: ಹೇಮಾವತಿ ಜಲಾಶಯದಿಂದ ರೈತರ ಬೆಳೆಗಳಿಗೆ ನೀರು ಒದಗಿಸಲಾಗುವುದು. ಅಲ್ಲದೆ, ಕುಡಿಯುವ ನೀರಿಗೆ ಆಯ್ದುಕೊಂಡ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ನಡೆದ ಕಾವೇರಿ ನೀರಾವರಿ ನಿಗಮದಡಿಯ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಲ್ಲಿ ಸದ್ಯಕ್ಕೆ 33 ಟಿಎಂಸಿ ನೀರು ಇದೆ. ನ್ಯಾಯಾಧಿಕರಣ ಮತ್ತು ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಎಷ್ಟು ಬೇಕು ಅಷ್ಟು ನೀರನ್ನು ಹರಿಸಲಾಗುವುದು. ಮಂಡ್ಯ, ಹಾಸನಕ್ಕೆ ನಿಗದಿಗಿಂತ ಹೆಚ್ಚು ನೀರು ಹರಿಯುತ್ತಿದೆ ಎಂದು ಹೇಳಿದರು.

ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ತುಮಕೂರಿಗೆ 24 ಟಿಎಂಸಿ ನೀರು ಬೇಕು. ಆದರೆ, ಅಷ್ಟು ಸಿಗುತ್ತಿಲ್ಲ. ಕೆನಾಲ್ ನಿರ್ವಹಣೆಗೆ ತೊಂದರೆ ಇಲ್ಲ. ಕುಣಿಗಲ್ ಬಳಿ ನಾಲೆ ತೊಂದರೆಯಾಗುತ್ತಿದೆ. ಮುಂದಿನ ವರ್ಷದಲ್ಲಿ ಸರಿ ಪಡಿಸುವ ಕಾರ್ಯ ನಡೆಯಲಿದೆ. ಯೂರಿಯಾ ಸಂಗ್ರಹವೂ ಇದೆ. ಮಳೆ ಚೆನ್ನಾಗಿ ಆಗಿದೆ. ಇನ್ನಷ್ಟು ಯೂರಿಯಾ ಬೇಕಾಗುತ್ತದೆ ಎಂದು ಅವರು ಹೇಳಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಹೇಮಾವತಿ ಜಲಾಶಯದಿಂದ ಈಗಾಗಲೇ ನೀರನ್ನು ಹರಿಬಿಡಲಾಗುತ್ತಿದೆ. ನೀರು ಹರಿಸಲು ಇಂದಿನ ಸಭೆ ಒಪ್ಪಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಬಲದಂಡೆ ನಾಲೆಗೆ ಮುಂದಿನ ಸೋಮವಾರದಿಂದ ನೀರು ಬಿಡಲಾಗುವುದು. ಕೃಷಿ ಮತ್ತು ಕುಡಿಯುವ ಸಲುವಾಗಿಯೂ ನೀರು ಹರಿಸಲಾಗುವುದು ಎಂದರು.

ನೀರಿಗಾಗಿ ಸಚಿವ ಮಾಧುಸ್ವಾಮಿ-ಮಾಜಿ ಸಚಿವ ರೇವಣ್ಣ ಜಟಾಪಟಿ

ಹೇಮಾವತಿ ಜಲಾಶಯದಿಂದ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಕಾನೂನು, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯೆ ಸಭೆಯಲ್ಲೆ ಮಾತಿನ ಚಕಮಕಿ ನಡೆದಿದ್ದು, ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕು ಎಂಬ ಬಗ್ಗೆ ಉಭಯ ನಾಯಕರು ಜಟಾಪಟಿ ನಡೆಸಿದ ಪ್ರಸಂಗವು ಜರುಗಿತು.

ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ರೇವಣ್ಣ ಅವರು ಮಾತಿನ ಚಕಮಕಿ ನಡೆಸಿದ್ದು, ಕೆಲಕಾಲ ಜಟಾಪಟಿಗೂ ಕಾರಣವಾಯಿತು. ಆ ಬಳಿಕ ಸ್ಪಷ್ಟನೆ ನೀಡಿದ ಮಾಧುಸ್ವಾಮಿ, `ಅಗತ್ಯಕ್ಕಿಂತ ಹೆಚ್ಚು ನೀರು ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಹರಿದಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕು ಎಂಬ ನಿಯಮವಿದೆ. ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, `ಆಯ್ತು ಸ್ವಾಮಿ, ಅಷ್ಟೇ ನೀರು ಹರಿಸಿ, ನಿರ್ಣಯ ಮಾಡಿ. ಹಾಸನಕ್ಕೆ ಹೆಚ್ಚಿಗೆ ನೀರು ಹರಿದಿಲ್ಲ' ಎಂದು ತಿರುಗೇಟು ನೀಡಿದರು. ಇದರಿಂದ ಕೆರಳಿದ ಮಾಧುಸ್ವಾಮಿ, ಎಷ್ಟು ನೀರು ಹರಿದಿದೆ ಎಂದು ಅಧಿಕಾರಿಗಳು ಇಲ್ಲೇ ಮಾಹಿತಿ ನೀಡಲಿದ್ದಾರೆಂದು ಸಮಜಾಯಿಷಿ ನೀಡಿದರು.

ಆ ಬಳಿಕ ಮಾತನಾಡಿದ ಎಚ್.ಡಿ.ರೇವಣ್ಣ, ಜಲಾಶಯದ ನೀರನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಹಾಸನ, ತುಮಕೂರು, ಮಂಡ್ಯ ಬೇರೆ ಬೇರೆಯಲ್ಲ. ಎಲ್ಲರಿಗೂ ನೀರು ಕೊಡಬೇಕು. ರೈತರು ಬೆಳೆ ಬೆಳೆಯಬೇಕು. ಹಾಸನದವರು ನೀರು ಬಿಡುವುದಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. 15 ವರ್ಷದ ಮಾಹಿತಿ ನೀಡುತ್ತೇವೆ. ಎಲ್ಲರಿಗೂ ಸಮಾನವಾಗಿ ನೀರು ಹಂಚಿಕೆ ಮಾಡಬೇಕು ಎಂದು ಕೋರಿದರು.

ಸಭೆಯಲ್ಲಿ ತುಮಕೂರು ಸಂಸದ ಜಿ.ಎಸ್.ಬಸವರಾಜು, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ ಸೇರಿದಂತೆ ಮಂಡ್ಯ, ಹಾಸನ, ತುಮಕೂರು ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News