ಧಾರಾಕಾರ ಮಳೆಯಲ್ಲಿ ಜನರನ್ನು ರಕ್ಷಿಸಲು ಏಳು ಗಂಟೆ ಮ್ಯಾನ್‌ಹೋಲ್ ಬಳಿ ನಿಂತ ಮಹಿಳೆ!

Update: 2020-08-11 05:41 GMT

ಮುಂಬೈ, ಆ.11: ನಾಲ್ಕು ದಶಕಗಳಲ್ಲೇ ಬಿದ್ದ ಗರಿಷ್ಠ ಮಳೆಯಿಂದ ಇಡೀ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, 50 ವರ್ಷದ ಕಾಂತಾ ಮೂರ್ತಿ ಕಾಳನ್ ಎಂಬ ದಿಟ್ಟ ಮಹಿಳೆ ಧಾರಾಕಾರ ಮಳೆಯನ್ನೂ ಲೆಕ್ಕಿಸದೇ ತೆರೆದ ಮ್ಯಾನ್‌ಹೋಲ್ ಬಳಿ ಜನರನ್ನು ರಕ್ಷಿಸುವ ಸಲುವಾಗಿ ನಿಂತ ಅಪರೂಪದ ಘಟನೆ ವರದಿಯಾಗಿದೆ.

ಇಲ್ಲಿ ತೆರೆದ ಮ್ಯಾನ್‌ಹೋಲ್ ಇದೆ ಎಂದು ಜನತೆಗೆ ಎಚ್ಚರಿಸುವ ಮೂಲಕ ಯಾರೂ ಅದಕ್ಕೆ ಬೀಳದಂತೆ ಮಹಿಳೆ ತಡೆದರು. ಪೌರ ಕಾರ್ಮಿಕರು ಆಗಮಿಸುವವರೆಗೂ ಸತತ ಏಳು ಗಂಟೆ ಕಾಲ ಮ್ಯಾನ್‌ಹೋಲ್ ಬಳಿ ನಿಂತು ಜನರನ್ನು ರಕ್ಷಿಸಿದರು. ಹೂ ಮಾರಾಟ ಮಾಡುವ ಕಾಂತಾಮೂರ್ತಿ ಭಾರಿ ಮಳೆಯಿಂದಾಗಿ ತಮ್ಮ ಮನೆ ಹಾಗೂ ಉಳಿತಾಯವನ್ನು ಕಳೆದುಕೊಂಡಿದ್ದಾರೆ.

ಎಂಟು ಮಕ್ಕಳ ತಾಯಿಯಾಗಿರುವ ಇವರ ಪತಿ ಅಶಕ್ತ. ಐದು ಮಕ್ಕಳಿಗೆ ವಿವಾಹವಾಗಿದ್ದು, ರಸ್ತೆಬದಿ ಹೂ ಮಾರಾಟ ಮಾಡುವ ಮೂಲಕ ಇತರ ಮೂರು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ರೈಲು ಅಪಘಾತದ ಕಾರಣದಿಂದ ಪತಿಗೆ ಪಾರ್ಶ್ವವಾಯು ಆದ ಬಳಿಕ ಮಹಿಳೆಯ ಆದಾಯವೇ ಕುಟುಂಬಕ್ಕೆ ಜೀವನಾಧಾರ.

ಏಳು ಗಂಟೆ ನಿರಂತರವಾಗಿ ಮ್ಯಾನ್‌ಹೋಲ್ ಬಳಿ ನಿಂತ ಮಹಿಳೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೀವಕ್ಕೆ ಅಪಾಯ ಆಗುವ ರೀತಿಯಲ್ಲಿ ನಿಂತಿದ್ದಕ್ಕಾಗಿ ಪೌರ ಅಧಿಕಾರಿಗಳು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಹಿಳೆಯ ಸೇವೆಯನ್ನು ಹಲವು ಮಂದಿ ಶ್ಲಾಘಿಸಿದ್ದಾರೆ. ಆದರೆ ಇದು ನನ್ನ ಕರ್ತವ್ಯವಾಗಿತ್ತು. ಇಲ್ಲದಿದ್ದರೆ ಅಪಘಾತವಾಗುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News