ಬಫರ್ ಝೋನ್ ಪ್ರದೇಶದಲ್ಲಿ ಪರಿಸರ ಹಾನಿ ಚಟುವಟಿಕೆ ಕೈಗೊಳ್ಳುವಂತಿಲ್ಲ: ಸಚಿವ ಸಿ.ಟಿ.ರವಿ

Update: 2020-08-11 17:23 GMT

ಚಿಕ್ಕಮಗಳೂರು, ಆ.11: ಜಿಲ್ಲೆಯಲ್ಲಿನ ಬಫರ್ ಝೋನ್ ಪ್ರದೇಶಗಳಲ್ಲಿ ದೊಡ್ಡ ಕೈಗಾರಿಕೆ, ಮರದ ಸಾಮಿಲ್ ಇಂಡಸ್ಟ್ರಿ ಒಳಗೊಂಡಂತೆ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.  

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ತರೀಕೆರೆ ತಾಲೂಕುಗಳಲ್ಲಿನ ಕೆಲವು ಪ್ರದೇಶಗಳನ್ನು ಬಫರ್ ಝೋನ್‍ಗಳಾಗಿ ಸೇರ್ಪಡೆ ಸಂಬಂಧ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯು ಪಶ್ವಿಮ ಘಟ್ಟಗಳ ಸಾಲಿನಲ್ಲಿ ವಿವಿಧ ಜೀವ ವೈವಿಧ್ಯತೆ ಪ್ರಾಣಿ ಸಂಕುಲ ಹೊಂದಿದ ಪ್ರದೇಶವಾಗಿದ್ದು, ಹೆಚ್ಚು ಹುಲಿ ವಾಸಿಸುವ ಆವಾಸ ಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ಬಫರ್ ಝೋನ್‍ಗಳಾಗಿ ಗುರುತಿಸಲಾಗಿತ್ತು. ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಬಫರ್ ಝೋನ್ ಪ್ರದೇಶಗಳನ್ನು ಗುರುತಿಸಿಲ್ಲ. ಆದರೂ ಕೆಲ ತಾಲೂಕುಗಳುಗಳಲ್ಲಿ ಆಯ್ದ ಪ್ರದೇಶವನ್ನು ಬಫರ್ ಝೋನ್‍ಗಳನ್ನು ಗುರುತಿಸಲಾಗಿದ್ದು, 2011ರಲ್ಲಿ ಕೇಂದ್ರ ಸರಕಾರವು ಹುಲಿ ವಾಸವಿರುವ ಪ್ರದೇಶಗಳನ್ನು ಬಫರ್ ಝೋನ್‍ಗಳಾಗಿ ಆದೇಶ ಹೊರಡಿಸಿದೆ. ನಾಗರಹೊಳೆ, ಬಂಡೀಪುರ, ದಾಂಡೇಲಿಯ ಅರಣ್ಯ ಪ್ರದೇಶಗಳನ್ನು ಬಫರ್ ಝೋನ್ ಪ್ರದೇಶಗಳಾಗಿ ಗುರುತಿಸಿತ್ತು. ಅದರಂತೆ ಜಿಲ್ಲೆಯಲ್ಲಿ ಒಟ್ಟು 51 ಹಳ್ಳಿಗಳನ್ನು ಬಫರ್ ವಲಯಗಳಾಗಿ ಹಾಗೂ 57 ಜೀವ ವೈವಿದ್ಯತೆ ಹೊಂದಿರುವ ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.

ಬಫರ್ ವಲಯಗಳಲ್ಲಿ ರಸ್ತೆ ನಿರ್ಮಾಣ ಒಳಗೊಂಡಂತೆ ಕೃಷಿ ಹಾಗೂ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಆದರೆ ಪರಿಸಕ್ಕೆ ಹಾನಿಯಾಗುವಂತಹ ಅಪಾಯಕಾರಿ ಕೈಗಾರಿಕೆಗಳು ಸ್ಥಾಪನೆ, ಅಥವಾ ಮರದ ಸಾಮಿಲ್ ಇಂಡಸ್ಟ್ರಿ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದ ಅವರು ಈ ಹಿಂದೆ ನಿರ್ಮಾಣಗೊಂಡ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಆದರೆ ಹೊಸದಾಗಿ ಸ್ಥಾಪನೆ ಮಾಡುವಂತಿಲ್ಲ ಎಂದ ಅವರು, ಬಫರ್ ಝೋನ್ ವಲಯಗಳಲ್ಲಿ ವಾಸಿಸುತ್ತಿರುವ ಜನರಿಗೆ ಅಲ್ಲಿನ ನಿರ್ಬಂಧಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ  ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ಒದಗಿಸಬೇಕು. ಈ ಬಗ್ಗೆ ಜನತೆಯಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಕೆಲವೊಂದು ನಗರ ಪ್ರದೇಶದ ವ್ಯಾಪಿಯನ್ನು ಬಫರ್ ಝೋನ್‍ಗಳಾಗಿ ಗುರುತಿಸಲಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನು ಸಡಿಲಿಕೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಭಾಗದಲ್ಲಿನ ಜನರು ಬಹುತೇಕ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದಾರೆ. ಗೋವಾ ಪೌಂಡೇಷನ್-2006 ಕೇಸು ಆಧಾರಿಸಿ ಕೋರ್ಟ್ ತೀರ್ಪು ನೀಡಿ ಅಧಿಕಾರಿಗಳಿಗೆ ಭದ್ರಾ ಅಭಯಾರಣ್ಯದಲ್ಲಿ ವನ್ಯಜೀವಿಗಳ ವಾಸಸ್ಥಾನಕ್ಕೆ ಅನುಕೂಲವಾಗುವಂತೆ ಬಫರ್ ಝೋನ್ ಜಾಗ ಗುರುತಿಸುವಂತೆ ತಿಳಿಸಿದ್ದು ಇದರಿಂದ ಜನತೆಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಜನಪ್ರತಿನಿಧಿಗಳು ಹಾಗೂ ಜನರ ವಿಶ್ವಾಸದೊಂದಿಗೆ ಪ್ರದೇಶಗಳನ್ನು ಗುರ್ತಿಸಿ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕುದುರೆಮುಖವನ್ನು ರಾಷ್ಟ್ರೀಯ ಉದ್ಯಾನವನ್ನಾಗಿಸಿದ ಮೇಲೆ ಅಲ್ಲಿನ ಜನತೆಗೆ ಸಾಕಷ್ಟು ತೊಂದರೆಗಳಾಗಿದ್ದು ಪ್ರಸ್ತುತದಲ್ಲಿ ಜಿಯೋ ನೆಟ್‍ವರ್ಕ ಅಳವಡಿಸಲು ತಡೆಯೊಡ್ಡಲಾಗಿದೆ ಇದರಿಂದಾಗಿ ಆನ್‍ಲೈನ್ ತರಗತಿಗೆ ಸಾಕಷ್ಟು ತೊಂದರೆಯಾಗಿದ್ದು ಇದನ್ನು ಬಗೆಹರಿಸುವಂತೆ ತಿಳಿಸಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮಲೆನಾಡು ಭಾಗದ ಅರಣ್ಯ ಪ್ರದೇಶಗಳಲ್ಲಿ ಬೆಳೆ ಸಂರಕ್ಷಣೆ, ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಬಂದೂಕುಗಳಿಗೆ ಪರವನಾಗಿ ಪಡೆದಿದ್ದು ಬಫರ್ ಝೋನ್ ಆದ ಬಳಿಕ ಪರವಾನಗಿ ರದ್ದಾಗಲಿದ್ದು ಇದರಿಂದಾಗಿ ಕಾಡು ಪ್ರಾಣಿಗಳಿಂದ ಆತಂಕದ ಭೀತಿ ಎದುರಿಸಲಿದೆ. ಇದಕ್ಕೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಂ.ಕೆ. ಪ್ರಾಣೇಶ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್. ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್, ವೈಲ್ಡ್ ಲೈಫ್ ಅರಣ್ಯ ಸಂರಕ್ಷಣಾಧಿಕಾರಿ ಠಾಕೂರ್ ಸಿಂಗ್ ರಾಣಾವತ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News