ಐಎಎಸ್ ಪರೀಕ್ಷೆಯಲ್ಲಿ ಮೂಲೆಗುಂಪಾದ ಪ್ರಾದೇಶಿಕ ಭಾಷೆಗಳು

Update: 2020-08-13 19:30 GMT

ಮತ್ತೊಮ್ಮೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್ ಪರೀಕ್ಷೆಯ ಫಲಿತಾಂಶ ಬಂದಿದೆ. ಈ ಬಾರಿ ಕರ್ನಾಟಕದಿಂದ ದಾಖಲೆಯ 40ಕ್ಕಿಂತ ಹೆಚ್ಚು ಮಂದಿ ಕೇಂದ್ರದ ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆಯ ಸುದ್ದಿಯಾದರೂ ಸಹ ಇವರಲ್ಲಿ ಎಷ್ಟು ಮಂದಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ ಎನ್ನುವುದು ಇಲ್ಲಿ ಮುಖ್ಯ. ಹಿಂದಿನ ಐಎಎಸ್‌ಅಧಿಕಾರಿ ಶಿವರಾಮು ಈ ಪರೀಕ್ಷೆಯನ್ನು ಮೊದಲ ಬಾರಿಗೆ ಕನ್ನಡದಲ್ಲಿ ಬರೆದು ಪಾಸ್ ಆಗಿದ್ದರು. ಇದರಿಂದ ಸ್ಫೂರ್ತಿಗೊಂಡ ಕೆಲವರು ಕನ್ನಡ ಮಾಧ್ಯಮದಲ್ಲಿ ಐಎಎಸ್ ಪರೀಕ್ಷೆಯನ್ನು ಬರೆಯುವ ಪ್ರಯತ್ನ ಮಾಡಿದರಾದರೂ ಯಶಸ್ಸಿನ ಮಟ್ಟ ತುಂಬಾ ಕಡಿಮೆಯೆಂದೇ ಹೇಳಬೇಕು. ಇಲ್ಲಿ ನಾವು ಗಮನಿಸಬಹುದಾದ ಅಂಶವೆಂದರೆ ದೇಶದ ಶೇ. 80 ಜನರಿಗೆ ಓದಲು ಬರೆಯಲು ಬಾರದ ಭಾಷೆಯೊಂದರಲ್ಲಿ ಪರೀಕ್ಷೆ ಬರೆದವರು ಇಂದು ಹೆಚ್ಚಿನ ಮಂದಿ ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿ ಅಖಿಲ ಭಾರತೀಯ ಸೇವೆಗಳಿಗೆ ಆಯ್ಕೆಯಾಗುತ್ತಿದ್ದಾರೆ!. ತಾಂತ್ರಿಕವಾಗಿ ಹೇಳಬೇಕೆಂದರೆ ಹಿಂದಿ, ಕನ್ನಡ ಮತ್ತು ಇನ್ಯಾವುದೇ ಭಾರತೀಯ ಭಾಷೆಗಳಲ್ಲಿ ಸಹ ಅಭ್ಯರ್ಥಿಗಳು ಐಎಎಸ್ ಪರೀಕ್ಷೆಯನ್ನು ಬರೆಯಬಹುದು. ಆದರೆ ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ನಾವು ಅಂತಹ ಅಭ್ಯರ್ಥಿಗಳ ಸಫಲತೆಯ ಪ್ರಮಾಣವನ್ನು ಗಮನಿಸಿದರೆ ಪ್ರಾದೇಶಿಕ ಭಾಷೆಗಳಲ್ಲಿ ಬರೆದು ಆಯ್ಕೆಯಾದವರು ಬಹಳ ಕಡಿಮೆ ಎನ್ನಬಹುದು.

ಒಂದೊಮ್ಮೆ ಆಯ್ಕೆಯಾದರೂ ಸಹ ಅವರ ರ್ಯಾಂಕ್ ತೀರಾ ಕಡಿಮೆ ಇರುತ್ತದೆ. ಅಂದರೆ ಅವರಿಗೆ ಬಹಳ ಉನ್ನತ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್ ಹುದ್ದೆಗಳು ಸಿಗುವುದಿಲ್ಲ. ಅಂಥವರು ಬಿ ಗುಂಪಿನ ಹುದ್ದೆಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಈ ಒಂದು ಕಾರಣದಿಂದ ಹೆಚ್ಚಿನ ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಬರೆದು ಉತ್ತೀರ್ಣರಾಗುತ್ತಾರೆ. ಏಕೆಂದರೆ ಆಂಗ್ಲ ಮಾಧ್ಯಮದಲ್ಲಿ ಸಫಲತೆ ಪ್ರಮಾಣ ಅತ್ಯಂತ ಹೆಚ್ಚು. ಇಂಗ್ಲಿಷ್ ಭಾಷೆ ಬಳಸದ ಭಾರತದ ಆಡಳಿತ ನಡೆಸಲು ಇಂಗ್ಲಿಷ್/ಹಿಂದಿ ಭಾಷೆಯ ಮೇಲೆ ನಿಯಂತ್ರಣ ಇರುವವರು ಮಾತ್ರ ಐಎಎಸ್ ಪರೀಕ್ಷೆಗಳಲ್ಲಿ ಪಾಸು ಆಗುತ್ತಿರುವುದು ನಿಜವಾಗಿಯೂ ಸೋಜಿಗವೇ ಸರಿ!. ನಮ್ಮ ದೇಶದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಪರಿಗಣಿಸಿಲ್ಲ. ಆದರೆ ಹಿಂದಿ ಆಡಳಿತ ಭಾಷೆಯಾಗಿ ಪರಿಗಣಿತವಾಗಿದೆ. ಯುಪಿಎಸ್‌ಸಿ ದಾಖಲಾತಿಗಳ ಪ್ರಕಾರ ನಾವು ಆಂಗ್ಲ ಮಾಧ್ಯಮ ಮತ್ತು ಇತರ ಪ್ರಾದೇಶಿಕ ಭಾಷೆಗಳ ಅಭ್ಯರ್ಥಿಗಳ ಸಫಲತೆಯ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ 1990ರಲ್ಲಿ ಇಂಗ್ಲಿಷ್ ಮಾಧ್ಯಮ ಆಯ್ಕೆ ಮಾಡಿಕೊಂಡ ಶೇ. 45.76 ವಿದ್ಯಾರ್ಥಿಗಳು, ಹಿಂದಿ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡ ಶೇ. 25.7 ವಿದ್ಯಾರ್ಥಿಗಳು ಮತ್ತು ಇತರ ಭಾಷಾ ಮಾಧ್ಯಮಗಳನ್ನು ಆಯ್ಕೆಮಾಡಿಕೊಂಡ ಸುಮಾರು ಶೇ. 30 ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿದ್ದರು.

ಮುಂದೆ 2008ರ ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಗಮನಿಸಿದರೆ ಇಂಗ್ಲಿಷ್ ಮಾಧ್ಯಮ ಆಯ್ಕೆಮಾಡಿಕೊಂಡ ಶೇ. 50 ವಿದ್ಯಾರ್ಥಿಗಳು, ಹಿಂದಿ ಮಾಧ್ಯಮದ ಶೇ. 45 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆದವರ ವಿದ್ಯಾರ್ಥಿಯ ಸಫಲತೆಯ ಪ್ರಮಾಣ ಅಂದು ಕೇವಲ ಶೇ. 5 ಮಾತ್ರ. ಮುಂದೆ ಇದೇ ರೀತಿ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆದಿದ್ದ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಸಫಲತೆಯ ಪ್ರಮಾಣವನ್ನು ಹೆಚ್ಚಿಸಿಕೊಂಡರು ಎನ್ನಬಹುದು. 2012-15 ಸಾಲಿನ ಮಧ್ಯೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿತು ಎಂದರೆ ಆಂಗ್ಲಮಾಧ್ಯಮದಲ್ಲಿ ಆಯ್ಕೆಮಾಡಿಕೊಂಡ ಶೇ. 83ರಷ್ಟು ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದರು. ಆದರೆ ಹಿಂದಿ ಮಾಧ್ಯಮವನ್ನು ಆಯ್ಕೆಮಾಡಿಕೊಂಡು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ ಶೇ. 16ಕ್ಕೆ ಇಳಿಯಿತು. ಈ ಸಾಲಿನಲ್ಲಿ ಪ್ರಾದೇಶಿಕ ಭಾಷೆಗಳನ್ನು ಆಯ್ಕೆಮಾಡಿಕೊಂಡು ಉತ್ತೀರ್ಣರಾದವರ ಪ್ರಮಾಣ ಶೇ. 2 ಮಾತ್ರ ಇತ್ತು!. ಅದರಲ್ಲೂ ದ್ರಾವಿಡಿಯನ್ ಭಾಷೆಗಳಾದ ತೆಲುಗು 0.2, ತಮಿಳು 0.1 ಮತ್ತು ಕನ್ನಡ ಮಾಧ್ಯಮದ ಕೇವಲ 0.04 ಅಭ್ಯರ್ಥಿಗಳು ಎಂದರೆ ನಾವೆಲ್ಲ ನಂಬಲೇಬೇಕು. ಒಟ್ಟಿನಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಆಂಗ್ಲ ಅಥವಾ ಹಿಂದಿ ಮಾಧ್ಯಮ ಬಿಟ್ಟು ಇನ್ಯಾವ ಮಾಧ್ಯಮದಲ್ಲಿ ಐಎಎಸ್ ಪರೀಕ್ಷೆಯನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ಗುಮಾನಿ ಹರಡಿದೆ.

ಸಂಪೂರ್ಣ ಯುಪಿಎಸ್‌ಸಿ ಪರೀಕ್ಷೆಯ ಸ್ವರೂಪ. ಪ್ರಶ್ನೆಪತ್ರಿಕೆಗಳ ಸಿದ್ಧಪಡಿಸುವಿಕೆ, ಸಂದರ್ಶನ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಇಂಗ್ಲಿಷ್ ಮತ್ತು ಇತರ ತಾಂತ್ರಿಕ ವಿಷಯಗಳಿಗೆ ಮಾತ್ರ ಹೆಚ್ಚಿನ ಗಮನ ನೀಡಿರುವುದು ಕಂಡುಬರುತ್ತದೆ. ಹಾಗಾಗಿ ಐಎಎಸ್ ಪರೀಕ್ಷೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಇನ್ನಿತರ ತಾಂತ್ರಿಕ ಕೋರ್ಸಿನ ಹಿನ್ನೆಲೆಯ ಹೆಚ್ಚಿನ ವಿದ್ಯಾರ್ಥಿಗಳು ಸುಲಭವಾಗಿ ಆಯ್ಕೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಯುಪಿಎಸ್‌ಸಿ ಪರೀಕ್ಷೆಗೆ ಬೇಕಾದ ಮಾಹಿತಿಗಳು ಮತ್ತು ತರಬೇತಿ ಆಂಗ್ಲಭಾಷೆಯಲ್ಲಿ ಹೆಚ್ಚಾಗಿ ದೊರೆಯುತ್ತವೆ. ಹಾಗಾಗಿ ತಾಂತ್ರಿಕ ಹಿನ್ನೆಲೆ ಇರುವ ಅಭ್ಯರ್ಥಿಗಳು ಕನ್ನಡ ಮಾಧ್ಯಮಕ್ಕಿಂತ ಆಂಗ್ಲ ಮಾಧ್ಯಮವನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಬೇಕಾದ ಯಥೇಚ್ಛವಾದ ಪಠ್ಯಪುಸ್ತಕಗಳು ಸಹ ಆಂಗ್ಲಭಾಷೆಯಲ್ಲಿ ದೊರೆಯುತ್ತವೆ. ಇದು ಕನ್ನಡದಲ್ಲಿ ಕಷ್ಟ. ಹಾಗಾಗಿ ಮಾನವೀಯ ಕಲೆ, ವಾಣಿಜ್ಯ, ಸಾಹಿತ್ಯ ಇನ್ನಿತರ ಕ್ಷೇತ್ರದ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಲು ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ 1980-1990 ರಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುತ್ತಿದ್ದದ್ದು ಬಹಳ ಕಡಿಮೆ. ಹಾಗಾಗಿ ಆ ಸಮಯದಲ್ಲಿ ಸಮಾಜವಿಜ್ಞಾನ ಹಾಗೂ ಮಾನವೀಯ ವಿಷಯಗಳ ಹಿನ್ನೆಲೆ ಇರುವವರು ಹೆಚ್ಚು ಮಂದಿ ಆಯ್ಕೆಯಾಗುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕ ಹಿನ್ನೆಲೆ ಇರುವ ವಿದ್ಯಾರ್ಥಿಗಳ ಸಫಲತೆಯ ಪ್ರಮಾಣ ಶೇ. 75 ಮತ್ತು ಸಮಾಜವಿಜ್ಞಾನದ ಹಿನ್ನೆಲೆ ಇರುವ ವಿದ್ಯಾರ್ಥಿಗಳ ಸಮಸ್ಯೆ ಪ್ರಮಾಣ ಶೇ. 25ರಷ್ಟು ಕುಸಿದಿದೆ. ಹೆಚ್ಚಿನ ಕೌಟುಂಬಿಕ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಮುಗಿಸಿರುವುದರಿಂದ ಅವರಿಗೆ ಪರೀಕ್ಷೆ ಎದುರಿಸಲು ತುಂಬಾ ಕಷ್ಟಕರವಾಗುವುದಿಲ್ಲ. ಅಲ್ಲದೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳ ಪೋಷಕರು 1.ಸರಕಾರಿ ನೌಕರರು 2. ಉದ್ಯಮದ ಹಿನ್ನೆಲೆ ಇರುವವರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಅದಕ್ಕಿಂತ ಮುಖ್ಯವಾಗಿ ಕೇವಲ ಶೇ. 10ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಯಲ್ಲಿ ಪಾಸ್ ಆಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಭಾಷೆಗೆ ಸಾಕಷ್ಟು ಗಮನ ಇಲ್ಲದಿರುವುದು ಇದಕ್ಕೆ ಮುಖ್ಯಕಾರಣ. 1985ರ ಈಚೆಗೆ ಅಭ್ಯರ್ಥಿಗಳ ಹಿನ್ನಲೆ ಗಮನಿಸುವುದಾದರೆ ನಗರಪ್ರದೇಶದಿಂದ ಶೇ.70 ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಕೇವಲ ಶೇ.30 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಪಾಸು ಮಾಡುತ್ತಿದ್ದಾರೆ.

2011ರ ನಂತರ ಯುಪಿಎಸ್‌ಸಿ ತನ್ನ ಪರೀಕ್ಷೆಯಲ್ಲಿ ಹೊಸ ವಿಧಾನವನ್ನು ಜಾರಿಗೆ ತಂದಿತು. ಮುಖ್ಯವಾಗಿ ಆಪ್ಟಿಟ್ಯೂಡ್ ಟೆಸ್ಟನ್ನು ಪರಿಚಯಿಸಲಾಯಿತು. ಆದರೆ ಈ ಹೊಸ ವಿಧಾನ ವಿದ್ಯಾರ್ಥಿಗಳ ಇಂಗ್ಲಿಷ್ ಮತ್ತು ಗಣಿತ ಜ್ಞಾನವನ್ನು ಪರೀಕ್ಷೆ ಮಾಡುವುದಕ್ಕಾಗಿ ಮಾತ್ರ ಇತ್ತು. ಇದರಿಂದ ಕನ್ನಡ ಮಾಧ್ಯಮದ ಯಾವ ವಿದ್ಯಾರ್ಥಿಗಳೂ ಇದನ್ನು ಪಾಸು ಮಾಡಲು ಸಾಧ್ಯವಾಗಲಿಲ್ಲ. ಆಪ್ಟಿಟ್ಯೂಡ್ ಪರೀಕ್ಷೆಯ ವಿರುದ್ಧ ಮತ್ತು ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಂಟುಮಾಡುತ್ತಿರುವ ಅನ್ಯಾಯದ ವಿರುದ್ಧವಾಗಿ ದೇಶಾದ್ಯಂತ ಹೋರಾಟಗಳು ಹೆಚ್ಚಾದಂತೆ ಯುಪಿಎಸ್‌ಸಿ ಆಪ್ಟಿಟ್ಯೂಡ್ ಪರೀಕ್ಷೆಯನ್ನು ವಾಪಸ್ ಪಡೆಯಿತು. ಮುಂದೆ 2013ರಲ್ಲಿ ಯುಪಿಎಸ್‌ಸಿ ಹೊಸ ನಿಯಮವನ್ನು ಜಾರಿಗೆ ತಂದಿತು. ಇದರ ಪ್ರಕಾರ ಅಭ್ಯರ್ಥಿಯು ಪ್ರಾದೇಶಿಕ ಮಾಧ್ಯಮದ ಮೂಲಕ ಪದವಿ ಶಿಕ್ಷಣವನ್ನು ಮಾಡಿದ್ದರೆ, ಆ ಭಾಷೆಯಲ್ಲಿ ಮುಖ್ಯ ಪರೀಕ್ಷೆಯನ್ನು ಬರೆಯಲು ಮಾತ್ರ ಅರ್ಹನಾಗಿರುತ್ತಾನೆ ಮತ್ತು ಪರೀಕ್ಷೆಯನ್ನು ನಿರ್ದಿಷ್ಟ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಕನಿಷ್ಠ 25 ಅಭ್ಯರ್ಥಿಗಳು ಇರಬೇಕು ಎಂದಿತ್ತು. ಹೊಸ ನಾಗರಿಕ ಸೇವೆಗಳ ಪರೀಕ್ಷಾ ನಿಯಮಾವಳಿಗಳ ಪ್ರಕಾರ, ನಿರ್ದಿಷ್ಟ ಪ್ರಾದೇಶಿಕ ಭಾಷೆಯಲ್ಲಿ ಅಭ್ಯರ್ಥಿಯು ಪದವಿ ಹೊಂದಿರಬೇಕು ಅಥವಾ ಪದವಿಯಲ್ಲಿ ಆ ಭಾಷೆಯನ್ನು ಕಡ್ಡಾಯ ಅಭ್ಯಾಸ ಮಾಡಿರಬೇಕು. ನಿಜಕ್ಕೂ ಈ ನಿಯಮಗಳಲ್ಲಿ ತರ್ಕವಿಲ್ಲ. ಈ ಹೊಸ ನಿಯಮ ಮುಂದೆ ಹಿಂದಿ ಅಲ್ಲದ ಭಾಷಾ ಗುಂಪಿನ ತೀವ್ರಧ್ವನಿಯಾಗಿ ಮಾರ್ಪಟ್ಟಿತ್ತು. ಪ್ರಾದೇಶಿಕ ಭಾಷೆಗಳ ಆಕಾಂಕ್ಷಿಗಳನ್ನು ತಾರತಮ್ಯ ಮಾಡುವುದರ ಮೂಲಕ ಅಪೇಕ್ಷಿತ ಪರೀಕ್ಷೆಯನ್ನು ಆಂಗ್ಲ ಮಾಧ್ಯಮ/ಹಿಂದಿ ಅಭ್ಯರ್ಥಿಗಳಿಗೆ ಅನುಕೂಲಕರವೆಂದು ಕರೆಯಲಾಯಿತು. ಹೊಸ ಮಾದರಿಯ ಪರೀಕ್ಷೆಯ ಬಗ್ಗೆ ಅಷ್ಟೇ ತೀಕ್ಷ್ಣವಾದ ಟೀಕೆ ವ್ಯಕ್ತವಾಯಿತು. ಇದು ಗ್ರಾಮೀಣ ಮತ್ತು ನಗರ ಅಭ್ಯರ್ಥಿಗಳಲ್ಲಿ ಅನಾರೋಗ್ಯಕರ ಮತ್ತು ಅಸಮಾನ ಸ್ಪರ್ಧೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ ಎಂದು ಅಭ್ಯರ್ಥಿ ಗಳು ಆರೋಪಿಸಿದರು. ಆದರೆ ಸದ್ಯ ಈ ನಿಯಾಮಾವಳಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

 ಈ ಒಂದು ಸಮಸ್ಯೆಯ ಇನ್ನೊಂದು ಮುಖವನ್ನು ನಾವು ಗಮನಿಸುವುದಾದರೆ ಅಖಿಲ ಭಾರತ ಸೇವೆಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ದೇಶದ ಎಲ್ಲಿಯಾದರೂ ಸಹ ಸೇವೆ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಅವರಿಗೆ ಹಿಂದಿ ಮತ್ತು ಆಂಗ್ಲ ಭಾಷಾಜ್ಞಾನ ಅಷ್ಟೇ ಅಗತ್ಯ. ಯುಪಿಎಸ್‌ಸಿ ಪರೀಕ್ಷೆ ಜಗತ್ತಿನಲ್ಲಿ ತನ್ನ ಪಾವಿತ್ರತೆಗೆ ಹೆಸರುವಾಸಿಯಾಗಿದೆ. ಅಂದಮಾತ್ರಕ್ಕೆ ಪ್ರಾದೇಶಿಕ ಮಾಧ್ಯಮಗಳನ್ನು ಆಯ್ಕೆಮಾಡುವ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ಸಮಸ್ಯೆಗಳು ಆಗಬಾರದು. ಮುಖ್ಯವಾಗಿ ತಜ್ಞರು ಐಎಎಸ್ ಪರೀಕ್ಷೆಗೆ ಬೇಕಾಗುವ ಎಲ್ಲಾ ಪಠ್ಯಪುಸ್ತಕಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ರಚಿಸಬೇಕಾಗುತ್ತದೆ. ಇದು ಬಹಳ ಮುಖ್ಯ. ಅದೇ ರೀತಿ ಯುಪಿಎಸ್‌ಸಿ ಸಹ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ ಮತ್ತು ಮೌಲ್ಯಮಾಪನ ಹಾಗೂ ಸಂದರ್ಶನ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳು ತ್ವರಿತವಾಗಿರಬೇಕಾಗುತ್ತದೆ. ಭಾರತ ಒಂದು ಬಹುತ್ವದ ಆಧಾರದ ಮೇಲೆ ನಿಂತಿರುವ ದೇಶವಾಗಿದ್ದು ಇಲ್ಲಿ ವಿವಿಧ ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ, ಗ್ರಾಮೀಣ, ಬುಡಕಟ್ಟು ಮುಂತಾದ ಅಂಶಗಳು ಶಿಕ್ಷಣ ಮಾಧ್ಯಮದ ಮೇಲೆ ಬಹಳ ಪ್ರಮುಖ ಪಾತ್ರ ವಹಿಸುತ್ತವೆ.

Writer - ಡಾ. ಡಿ. ಸಿ. ನಂಜುಂಡ

contributor

Editor - ಡಾ. ಡಿ. ಸಿ. ನಂಜುಂಡ

contributor

Similar News