​ದೇಶದಲ್ಲಿ ಕೊರೋನ ಸೋಂಕಿಗೆ ಒಂದೇ ದಿನ 1008 ಮಂದಿ ಬಲಿ

Update: 2020-08-14 03:46 GMT

ಹೊಸದಿಲ್ಲಿ: ದೇಶದಲ್ಲಿ ಒಂದೇ ದಿನ ಗರಿಷ್ಠ ಹೊಸ ಕೋವಿಡ್-19 ಸೋಂಕು ಪ್ರಕರಣಗಳ ಸೇರ್ಪಡೆಯಾಗಿದ್ದು, ಗುರುವಾರ ಸಾವಿರಕ್ಕೂ ಅಧಿಕ (1008) ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ದೇಶದಲ್ಲಿ ಗುರುವಾರ 66,037 ಹೊಸ ಕೊರೋನ ವೈರಸ್ ಪ್ರಕರಣಗಳು ಸೇರ್ಪಡೆಯಾಗಿವೆ.

ಈ ಹಿಂದೆ ಆ. 8ರಂದು ಒಂದೇ ದಿನ 65,410 ಪ್ರಕರಣಗಳು ವರದಿಯಾದದ್ದು ದಾಖಲೆಯಾಗಿತ್ತು. ಈ ಮೂಲಕ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 24 ಲಕ್ಷ ದಾಟಿದೆ. ಆ. 9ರಂದು 1007 ಮಂದಿ ಮೃತಪಟ್ಟಿದ್ದ ದಾಖಲೆಯೂ ಅಳಿಸಿ ಹೋಗಿದೆ.

ಈ ಮಧ್ಯೆ ಗರಿಷ್ಠ ಸಕ್ರಿಯ ಪ್ರಕರಣಗಳನ್ನು ಹೊಂದಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನಕ್ಕೇರಿದೆ. ಅಮೆರಿಕದಲ್ಲಿ ಮಾತ್ರ ಭಾರತಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ ಎಂದು ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇದುವರೆಗೆ ಎರಡನೇ ಸ್ಥಾನದಲ್ಲಿದ್ದ ಬ್ರೆಝಿಲ್‌ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.

ಜುಲೈ ತಿಂಗಳ ಉತ್ತರಾರ್ಧಕ್ಕೆ ಹೋಲಿಸಿದರೆ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳದ ವೇಗ ಕಡಿಮೆಯಾಗಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ದೇಶದಲ್ಲಿ 6,53,622 ಸಕ್ರಿಯ ಪ್ರಕರಣಗಳಿವೆ. ಬ್ರೆಝಿಲ್‌ನಲ್ಲಿ ಈಗ 5,54,356 ಸಕ್ರಿಯ ಪ್ರಕರಣಗಳಿವೆ. ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳು ಅಮೆರಿಕದಲ್ಲಿದ್ದು, ಒಟ್ಟು 32,76,125 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ ವೇಳೆಗೆ ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 6.64 ಲಕ್ಷಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಗುರುವಾರ ದಾಖಲೆ ಸಂಖ್ಯೆಯ (413) ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 19,063ಕ್ಕೇರಿದೆ. ಇದಕ್ಕೂ ಮುನ್ನ ಆ. 9ರಂದು 390 ಮಂದಿ ಮೃತಪಟ್ಟದ್ದು ಒಂದು ದಿನದ ಗರಿಷ್ಠ ದಾಖಲೆಯಾಗಿತ್ತು.

ಅತ್ಯಂತ ಬಾಧಿತವಾಗಿರುವ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ದಾಖಲೆ ಸಂಖ್ಯೆಯ ಪ್ರಕರಣಗಳನ್ನು ಗುರುವಾರ ಕಂಡಿದ್ದು, ಇತರ ಹಲವು ರಾಜ್ಯಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಅಸ್ಸಾಂನಲ್ಲಿ 4593 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಬಂಗಾಳ (2997), ಒಡಿಶಾ (1981), ರಾಜಸ್ಥಾನ (1264) ಕೇರಳ (1564), ಮಧ್ಯಪ್ರದೇಶ (1014) ಮತ್ತು ಗೋವಾ (570) ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News