ಶಂಕರಾಚಾರ್ಯರ ಪ್ರತಿಮೆ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಹಾಕಿದ ಪ್ರಕರಣ: ಆರೋಪಿ ಮಿಲಿಂದ್ ಬಂಧನ

Update: 2020-08-14 12:27 GMT
ಮಿಲಿಂದ್

ಚಿಕ್ಕಮಗಳೂರು, ಆ.14: ಕಳೆದ ಬುಧವಾರ ಶೃಂಗೇರಿ ಪಟ್ಟಣದಲ್ಲಿ ಶಂಕರಾಚಾರ್ಯ ಪುತ್ಥಳಿಯ ಮಂಟಪದ ಮೇಲೆ ಸಮುದಾಯವೊಂದರ ಬ್ಯಾನರ್ ಹಾಕಿ ಬಿಗುವಿನ ವಾತಾವರಣಕ್ಕೆ ಕಾರಣನಾದ ಮಿಲಿಂದ್ ಪೂಜಾರಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆತ ಯಾವುದೇ ಸಂಘಟನೆ ಅಥವಾ ಪಕ್ಷದ ಕಾರ್ಯಕರ್ತನಲ್ಲ. ಕೂಲಿ ಕಾರ್ಮಿಕನಾಗಿರುವ ಆತ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಘಟನೆ ಪೂರ್ವ ನಿಯೋಜಿತ ಕೃತ್ಯವೂ ಅಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಕಾಯ್ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

ಶುಕ್ರವಾರ ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬುಧವಾರ ರಾತ್ರಿ ಜಿಲ್ಲೆಯ ಶೃಂಗೇರಿ ಪಟ್ಟಣದ ವೀರಪ್ಪಗೌಡ ರಸ್ತೆಯಲ್ಲಿರುವ ಶಂಕರಾಚಾರ್ಯ ಅವರು ಪುತ್ಥಳಿಯ ಗೋಪುರ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಒಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಬಿಜೆಪಿ, ಬಜರಂಗದಳ ಸಂಘಟನೆಗಳ ಮುಖಂಡರು, ಇದು ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರ ಕೃತ್ಯವಾಗಿದ್ದು, ಬೆಂಗಳೂರು ಡಿಜೆ ಹಳ್ಳಿ ಘಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೋಮುಸೌಹಾರ್ದ ಹದಗೆಡಿಸಲು ಸಂಚು ಮಾಡಿದ್ದಾರೆಂದು ಆರೋಪಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಗುರುವಾರ ಈ ಸಂಬಂಧ ಠಾಣೆಯ ಎದುರು ಧರಣಿಯನ್ನೂ ಮಾಡಿದ್ದು, ಈ ಘಟನೆಯಿಂದಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು ಎಂದರು.

ಈ ಘಟನೆ ಸಂಬಂಧ ತನಿಖೆ ನಡೆಸಲು ಚಿಕ್ಕಮಗಳೂರು, ಕೊಪ್ಪ ಡಿವೈಎಸ್ಪಿ ಹಾಗೂ ಶೃಂಗೇರಿ ಠಾಣಾಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಗುರುವಾರ ಶಂಕಿತ ನಾಲ್ವರನ್ನು ವಿಚಾರಣೆ ನಡೆಸಲಾಯಿತು. ನಂತರ ಬ್ಯಾನರ್ ಆಧಾರದ ಮೇಲೆ ತನಿಖೆ ಕೈಗೊಂಡಾಗ ಆ ಬ್ಯಾನರ್ ಪಟ್ಟಣದಲ್ಲಿರುವ ಜಾಮಿಯಾ ಮಸೀದಿಗೆ ಸೇರಿದ್ದೆಂಬುದು ತಿಳಿದು ಬಂತು. ಇದೇ ವೇಳೆ ಮಸೀದಿ ಮುಖಂಡರು ತಮ್ಮ ಮಸೀದಿಯಿಂದ ಕಳೆದ ವರ್ಷ ಈದ್ ಮಿಲಾದ್ ಸಂದರ್ಭ ಹಾಕಲಾಗಿದ್ದ ಬ್ಯಾನರ್ ಒಂದು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬುಧವಾರ ರಾತ್ರಿ ಮಸೀದಿ ಆವರಣಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬ ಬ್ಯಾನರ್ ಅನ್ನು ಕೊಂಡೊಯ್ದಿದ್ದ ದೃಶ್ಯ ಕಂಡು ಬಂದಿದೆ ಎಂದರು. 

ಸಿಸಿ ಟಿವಿಯಲ್ಲಿ ಕಂಡು ಬಂದ ವ್ಯಕ್ತಿಯ ಗುರುತು ಪತ್ತೆ ಮಾಡಿದ ತನಿಖಾಧಿಕಾರಿಗಳ ತಂಡ, ಆತ ಕೊಪ್ಪ ತಾಲೂಕಿನ ಬಾಳೆಗದ್ದೆ ಗ್ರಾಮದ ಮನೋಹರ್ ಪೂಜಾರಿ ಎಂಬವರ ಪುತ್ರ ಮಿಲಿಂದ್ ಪೂಜಾರಿ(28) ಎಂಬುದನ್ನು ಪತ್ತೆ ಮಾಡಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆಂದು ಎಸ್ಪಿ ತಿಳಿಸಿದರು.

ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಿಲಿಂದ್ ಪೂಜಾರಿ ಬುಧವಾರ ರಾತ್ರಿ ಪಟ್ಟಣದ ಬಾರೊಂದರಲ್ಲಿ ಮದ್ಯ ಸೇವಿಸಿ ನಂತರ ಸಮೀಪದ ಮಸೀದಿ ಆವರಣಕ್ಕೆ ಬಂದಿದ್ದಾನೆ. ಮಸೀದಿ ಆವರಣದಲ್ಲಿದ್ದ ಚಾಪೆಯೊಂದನ್ನು ಹಾಸಿಕೊಂಡು ಅಲ್ಲೇ ಮಲಗಿದ್ದಾನೆ. ನಂತರ ಮಸೀದಿಯಲ್ಲಿ ಮಲಗುವುದು ಬೇಡ ಎನಿಸಿದ್ದರಿಂದ ಆತ ಮಸೀದಿಯಿಂದ ಬೇರೆ ಕಡೆ ಹೋಗಲು ನಿರ್ಧರಿಸಿದ್ದ. ಈ ವೇಳೆ ಮಳೆ ಬರುತ್ತಿದ್ದರಿಂದ ಕಳೆದ ವರ್ಷ ಈದ್ ಮಿಲಾದ್ ಹಬ್ಬದ ವೇಳೆ ಮಸೀದಿಯಲ್ಲಿ ಹಾಕಲಾಗಿದ್ದ ಬ್ಯಾನರ್ ಒಂದನ್ನು ಕದ್ದು ಹೊರ ಬಂದಿದ್ದಾನೆ. ಬಳಿಕ ವೀರಪ್ಪಗೌಡ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮಸೀದಿಯಿಂದ ತಂದಿದ್ದ ಬ್ಯಾನರ್ ಅನ್ನು ದೇವರಿದ್ದಲ್ಲೇ ಹಾಕೋಣ ಎಂದು ಭಾವಿಸಿ ಅದೇ ರಸ್ತೆಯಲ್ಲಿ ಮಸೀದಿಯಿಂದ 100 ಮೀಟರ್ ದೂರದಲ್ಲಿದ್ದ ಶಂಕರಾಚಾರ್ಯ ಪುತ್ಥಳಿಯ ಗೋಪುರದ ಮೇಲೆ ಹಾಕಿದ್ದಾನೆ. ನಂತರ ಪಟ್ಟಣದ ಲಾರಿ ಯಾರ್ಡ್‍ಗೆ ಹೋಗಿ ಮಲಗಿಕೊಂಡಿದ್ದಾನೆ. ಬೆಳಗ್ಗೆ ಪಟ್ಟದ ಸರಕಾರಿ ಆಸ್ಪತ್ರೆಗೆ ಹೋಗಿ ತಲೆ ನೋವು ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆಂದು ಎಸ್ಪಿ ಮಚೀಂದ್ರ ಹೇಳಿದರು.

ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದು, ಆರೋಪಿ ಈ ಎಲ್ಲ ಘಟನೆಗಳನ್ನೂ ಒಪ್ಪಿಕೊಂಡಿದ್ದು, ಇದರ ಪರಿಣಾಮ ಏನಾಗುತ್ತದೆಂಬುದರ ಅರಿವೂ ಆತನಿಗಿರಲಿಲ್ಲ ಎಂದ ಎಸ್ಪಿ, ಆತ ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಈ ಘಟನೆಯ ಹಿಂದೆ ಯಾವುದೇ ಪಕ್ಷ, ಸಂಘಟನೆಯ ಕೈವಾಡವೂ ಇಲ್ಲ. ಪೂರ್ವನಿಯೋಜಿತ ಕೃತ್ಯವೂ ಅಲ್ಲ ಎಂದು ಎಸ್ಪಿ ಸ್ಪಷ್ಟ ಪಡಿಸಿದರು.

ಆರೋಪಿ ಮಿಲಿಂದ್ ಈ ಹಿಂದೆ 2012 ಮತ್ತು 2017ರಲ್ಲಿ ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಇದರ ಹೊರತಾಗಿ ಬೇರೆ ಯಾವುದೇ ಪ್ರಕರಣ ಆತನ ಮೇಲಿಲ್ಲ. ಪೊಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಕುಡಿತದ ದಾಸ್ಯಕ್ಕೆ ಒಳಗಾಗಿದ್ದ. ಬುಧವಾರ ಕಡಿದ ಮತ್ತಿನಲ್ಲೇ ಈ ಕೃತ್ಯ ಎಸಗಿದ್ದು, ಬಾರ್ ಹಾಗೂ ಮಸೀದಿಯ ಸಿಸಿ ಕ್ಯಾಮರಾಗಳಲ್ಲಿ ಈತನ ಚಲನವಲನಗಳು ಪತ್ತೆಯಾಗಿವೆ. ಪುತ್ಥಳಿ ಸಮೀಪ ಆತ ಬಿಟ್ಟಿದ್ದ ಚಪ್ಪಲಿಯೂ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿದ್ದಾಗಲೇ ಆತನನ್ನು ಬಂಧಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು, ಕೊಪ್ಪ ವೃತ್ತದ ಡಿವೈಎಸ್ಪಿ, ಶೃಂಗೇರಿ ಠಾಣಾಧಿಕಾರಿ ಉಪಸ್ಥಿತರಿದ್ದರು.

ಶಂಕರಾಚಾರ್ಯ ಪುತ್ಥಳಿ ಮೇಲೆ ಒಂದು ಧರ್ಮಕ್ಕೆ ಸೇರಿದ ಧ್ವಜ ಬ್ಯಾನರ್ ಹಾಕಿ ಕೋಮು ಸಾಹಾರ್ದ ಹಾಳು ಗೆಡವಲು ಎಸ್‍ಡಿಪಿಐ ಪಕ್ಷ ಹಾಗೂ ಪಿಎಫ್‍ಐ ಸಂಘಟನೆಯವರು ಸಂಚು ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದರು. ಶೃಂಗೇರಿ ಮಠದ ವತಿಯಿಂದಲೂ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ಮೇರೆಗೆ ತನಿಖೆ ನಡೆಸಿದಾಗ, ಪುತ್ಥಳಿಯ ಮಂಟಪದ ಮೇಲೆ ಈದ್ ಮಿಲಾದ್ ಸಂದರ್ಭ ಬಳಸಿದ್ದ ಬ್ಯಾನರ್ ಹಾಕಲಾಗಿತ್ತೇ ಹೊರತು ಯಾವುದೇ ಧರ್ಮ, ಪಕ್ಷ, ಸಂಘಟನೆಯ ಧ್ವಜ ಹಾಕಿರದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ದೂರಿದಂತೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ಪಾತ್ರವೂ ಈ ಘಟನೆಯಲ್ಲಿಲ್ಲ. ಇದು ಕುಡಿದ ಮತ್ತಿನಲ್ಲಿ ಸ್ಥಳೀಯ ಕೂಲಿ ಕಾರ್ಮಿಕನಿಂದ ನಡೆದ ಅಚಾತುರ್ಯವಾಗಿದೆ. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಗಳ ಹಿನ್ನೆಲೆಯಲ್ಲಿ ಈ ಘಟನೆಯಿಂದಾಗಿ ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 
- ಹಕಾಯ್ ಅಕ್ಷಯ್ ಮಚೀಂದ್ರ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News