ನಾಗಾಗಳು ಭಾರತದೊಡನೆ ಸಹ-ಅಸ್ತಿತ್ವದಲ್ಲಿರುತ್ತಾರೆ, ಆದರೆ ವಿಲೀನಗೊಳ್ಳುವುದಿಲ್ಲ:ಎನ್‌ಎಸ್‌ಸಿಎನ್(ಐಎಂ)

Update: 2020-08-14 14:24 GMT
 ತುಯಿಂಗಲೆಂಗ್ ಮುಯಿವಹ್

 ಗುವಾಹಟಿ,ಆ.14: ನಾಗಾಗಳು ಭಾರತದೊಡನೆ ಸಹ-ಅಸ್ತಿತ್ವದಲ್ಲಿರುತ್ತಾರೆ,ಆದರೆ ಭಾರತದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್-ಇಸಾಕ್ ಮುಯಿವಾ (ಎನ್‌ಎಸ್‌ಸಿಎನ್-ಐಎಂ) ಮುಖ್ಯಸ್ಥ ಥುಯಿಂಗಾಲೆಂಗ್ ಮುಯಿವಾ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ‘ನಾಗಾ ಸ್ವಾತಂತ್ರ ದಿನ ’ದ ಭಾಷಣವನ್ನು ಮಾಡುತ್ತಿದ್ದ ಅವರು,ನಮ್ಮ ರಾಷ್ಟ್ರೀಯ ತತ್ತ್ವಕ್ಕೆ ಅಂಟಿಕೊಳ್ಳುವುದರಲ್ಲಿ ಮತ್ತು ವೈರಿಗಳ ಆದೇಶಗಳಿಗೆ ನಕಾರ ಹೇಳುವುದರಲ್ಲಿಯೇ ನಮ್ಮ ರಾಜಕೀಯ ಮುಕ್ತಿಯಿದೆ ಎಂದು ಹೇಳಿದರು.

 ನಾಗಾಲ್ಯಾಂಡ್ ಮತ್ತು ನೆರೆಯ ರಾಜ್ಯಗಳಲ್ಲಿಯ ಪರಸ್ಪರ ಹೊಂದಿಕೊಂಡಿರುವ ನಾಗಾಗಳು ವಾಸವಾಗಿರುವ ಸ್ಥಳಗಳನ್ನೊಳಗೊಂಡ ಉದ್ದೇಶಿತ ನಾಗಾಲಿಮ್ ಪ್ರದೇಶಕ್ಕಾಗಿ ಪ್ರತ್ಯೇಕ ಧ್ವಜ ಮತ್ತು ಸಂವಿಧಾನಕ್ಕಾಗಿ ತನ್ನ ಗುಂಪಿನ ಬೇಡಿಕೆಯನ್ನು ಭಾರತ ಸರಕಾರವು ಒಪ್ಪಿಕೊಳ್ಳದಿದ್ದರೆ ನಾಗಾ ಶಾಂತಿ ಮಾತುಕತೆಗಳಿಗೆ ಗೌರವಾರ್ಹ ಪರಿಹಾರ ಸಾಧ್ಯವಿಲ್ಲ ಎಂದೂ ಮುಯಿವಾ ಹೇಳಿದರು. ಪ್ರತ್ಯೇಕ ನಾಗಾ ಧ್ವಜ ಮತ್ತು ಸಂವಿಧಾನಕ್ಕಾಗಿ ಎನ್‌ಎಸ್‌ಸಿಎನ್(ಐ-ಎಂ) ಪಟ್ಟು ಹಿಡಿದಿರುವುದು ಶಾಂತಿ ಮಾತುಕತೆಗೆ ಅಡ್ಡಿಯನ್ನುಂಟು ಮಾಡಿದೆ. 2015,ಆ.3ರಂದು ತಾನು ಕೇಂದ್ರದೊಂದಿಗೆ ಮಾಡಿಕೊಂಡಿರುವ ಚೌಕಟ್ಟು ಒಪ್ಪಂದದಂತೆ ಉಭಯ ಪಕ್ಷಗಳು ಪ್ರತ್ಯೇಕ ಧ್ವಜ ಮತ್ತು ಸಂವಿಧಾನಕ್ಕೆ ಬದ್ಧವಾಗಿದೆ ಎಂದು ಅದು ಪ್ರತಿಪಾದಿಸಿದೆ.

 ಭಾರತದೊಂದಿಗೆ ಸಾರ್ವಭೌಮತ್ವ ಹಂಚಿಕೆ ಹಕ್ಕುಗಳನ್ನು ಮಂಡಿಸಲು ಮುಯಿವಾ ಈ ಚೌಕಟ್ಟು ಒಪ್ಪಂದವನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ಒಪ್ಪಂದವು ಸಾರ್ವಜನಿಕ ದಾಖಲೆಯಲ್ಲದಿದ್ದರೂ ಎನ್‌ಎಸ್‌ಸಿಎನ್(ಐ-ಎಂ) ಈ ವಾರದ ಪೂರ್ವಾರ್ಧದಲ್ಲಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿತ್ತು. ಬಿಡುಗಡೆಗೊಂಡ ಪಠ್ಯದಂತೆ ಒಪ್ಪಂದವು ಸಾರ್ವಭೌಮ ಅಧಿಕಾರಗಳ ಹಂಚಿಕೆ ಮತ್ತು ಉಭಯ ಪಕ್ಷಗಳ ಶಾಂತಿಯುತ ಸಹ ಅಸ್ತಿತ್ವದ ಬಗ್ಗೆ ಹೇಳಿದೆ.

  ನಾಗಾ ರಾಷ್ಟ್ರವಾದಿಗಳು ಕಳೆದ ಆರು ದಶಕಗಳಿಂದಲೂ ಪ್ರತ್ಯೇಕ ನಾಗಾಲ್ಯಾಂಡ್‌ಗಾಗಿ ಭಾರತ ಸರಕಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಈ ಅವಧಿಯಲ್ಲಿ ನಾಗಾ ಸಶಸ್ತ್ರ ಚಳವಳಿಯು ಏಳು ಬಣಗಳಾಗಿ ಹೋಳಾಗಿದ್ದು,ಆಗಾಗ್ಗೆ ಅವು ಪರಸ್ಪರ ಕಾಳಗದಲ್ಲಿ ತೊಡಗಿದ್ದೂ ಇದೆ. 1997ರಲ್ಲಿ ಶಾಂತಿ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದ್ದ ಎನ್‌ಎಸ್‌ಸಿಎನ್(ಐ-ಎಂ) ಕೇಂದ್ರ ಸರಕಾರದೊಡನೆ ಮಾತುಕತೆಗಳನ್ನು ಆರಂಭಿಸಿತ್ತು. ಆದರೆ ಈ ನಿಟ್ಟಿನಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯಾಗಿರಲಿಲ್ಲ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಎನ್‌ಎಸ್‌ಸಿಎನ್(ಐ-ಎಂ) ಜೊತೆ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿದಾಗ ಎರಡೂ ಪಕ್ಷಗಳು ಅದನ್ನು ಮಹತ್ವದ ಸಾಧನೆ ಎಂದು ಬಣ್ಣಿಸಿದ್ದವು.

ಆಗಿನಿಂದ ಏಳು ಇತರ ಗುಂಪುಗಳೂ ಇದನ್ನು ಅನುಸರಿಸಿದ್ದು ಮೋದಿ ಸರಕಾರವು ನಾಗಾಲ್ಯಾಂಡ್‌ನ ಹಾಲಿ ರಾಜ್ಯಪಾಲರಾಗಿರುವ ಆರ್.ಎನ್ ರವಿ ಅವರನ್ನು ಸಂಧಾನಕಾರರನ್ನಾಗಿ ನಿಯೋಜಿಸುವುದರೊಂದಿಗೆ ಶಾಂತಿ ಮಾತುಕತೆಗಳು ವೇಗ ಪಡೆದುಕೊಂಡಿವೆ ಎಂದು ಹೇಳಲಾಗಿತ್ತು. ಆದರೆ ಆರಂಭಿಕ ಪ್ರಗತಿಯ ಬಳಿಕ ಪ್ರತ್ಯೇಕ ನಾಗಾ ಧ್ವಜ ಮತ್ತು ಸಂವಿಧಾನಕ್ಕಾಗಿ ಎನ್‌ಎಸ್‌ಸಿಎನ್(ಐ-ಎಂ) ಪಟ್ಟು ಹಿಡಿಯುವುದರೊಡನೆ ಮಾತುಕತೆ ಅಲ್ಲಿಗೇ ಸ್ಥಗಿತಗೊಂಡಿತ್ತು.

ನಂತರ ತಾನು ಸದ್ಯಕ್ಕೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನಕ್ಕಾಗಿ ಪಟ್ಟು ಹಿಡಿಯುವುದಿಲ್ಲ ಎಂದು ಹೇಳಿದ್ದ ಎನ್‌ಎಸ್‌ಸಿಎನ್(ಐ-ಎನ್) ಪ್ರತ್ಯೇಕ ನಾಗಾ ಸಂವಿಧಾನವಿಲ್ಲದೆ ಮತ್ತು ಸರಕಾರೇತರ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾದ ಷರತ್ತುಬದ್ಧ ಧ್ವಜದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಅ.31ರಂದು ಒಪ್ಪಿಕೊಂಡಿತ್ತು. ಆದರೆ ಹಲವಾರು ಗೋಜಲುಗಳಿಂದಾಗಿ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಕೇಂದ್ರ ಮತ್ತು ಎನ್‌ಎಸ್‌ಸಿಎನ್(ಐ-ಎನ್) ಸಂಬಂಧ ಮತ್ತೊಮ್ಮೆ ಹಳಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News