ಸ್ವತಂತ್ರ ಭಾರತ ನಿರ್ಮಾತೃಗಳಿಗೆ ಕಾಂಗ್ರೆಸ್ ನಮನ

Update: 2020-08-14 18:51 GMT

ಬೆಂಗಳೂರು, ಆ.14: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಸ್ವತಂತ್ರಗೊಳಿಸಲು ಹೋರಾಡಿದ ಮಹನೀಯರನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಕೆಪಿಸಿಸಿ ವತಿಯಿಂದ ಟ್ವೀಟರ್ ನಲ್ಲಿ ನಮನ ಸಲ್ಲಿಸಲಾಗಿದೆ.

ಟಿಪ್ಪು ಸುಲ್ತಾನ್: 15ನೇ ವಯಸ್ಸಿನಲ್ಲಿಯೇ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, 1782ರಲ್ಲಿ ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ಆಂಗ್ಲರ ಸೇನಾ ನಾಯಕ ಬ್ರಾತ್‍ವೈಟ್‍ನನ್ನು ಮಣಿಸಿದರು. ಶೃಂಗೇರಿ ಶಾರದಾ ಪೀಠವನ್ನು ಮರಾಠರು ಧ್ವಂಸ ಮಾಡಿ ಅದನ್ನು ಲೂಟಿ ಮಾಡಿದಾಗ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದು ಟಿಪ್ಪು ಸುಲ್ತಾನ್.

ಮೊದಲ ಬಾರಿಗೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸಿದ್ದು ಟಿಪ್ಪು ಸುಲ್ತಾನ್. ಯುದ್ಧದಲ್ಲಿ ಶತ್ರು ರಾಜ್ಯಗಳ ಮಹಿಳೆ ಮೇಲಿನ ದೌರ್ಜನ್ಯವನ್ನು ಖಂಡಿಸಿ, ದೌರ್ಜನ್ಯ ನಡೆಸಿದ ತನ್ನ ತಂದೆಯ ಸೇನಾ ದಳದ ಮುಖ್ಯಸ್ಥ ಮಖ್ಬೂಲ್ ಅಹ್ಮದ್‍ನನ್ನು ಶಿಕ್ಷೆಗೆ ಗುರಿಪಡಿಸಿದರು.

ಬ್ರಿಟೀಷರ ವಿರುದ್ಧ ಸಮರ ಸಾರಿ ಹಲವು ಬಾರಿ ಅವರನ್ನು ಸೆದೆಬಡಿದು ಅವರೊಂದಿಗೆ ಹೋರಾಡುತ್ತಲೇ ತನ್ನ 48ನೇ ವಯಸ್ಸಿನಲ್ಲಿ ವೀರಮರಣ ಹೊಂದಿದರು.

ಸಂಗೊಳ್ಳಿ ರಾಯಣ್ಣ: ಬ್ರಿಟಿಷರನ್ನು ಮೆಟ್ಟಿ ನಿಂತ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮರ ಬಲಗೈ ಬಂಟ. ಗೆರಿಲ್ಲಾ ಯುದ್ಧ ತಂತ್ರದ ಹರಿಕಾರ ರಾಯಣ್ಣ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಲಾರ್ಡ್ ಡಾಲ್‍ಹೌಸಿಯ ನೀತಿ ವಿರುದ್ಧ ಹೋರಾಡಿದ ಕ್ರಾಂತಿಕಾರಿ. 1831ರ ಜನವರಿ 26ರಂದು ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ರಾಯಣ್ಣನನ್ನು ಬ್ರಿಟಿಷರು ಅವರ 33ನೇ ವಯಸ್ಸಿನಲ್ಲಿ ನೇಣಿಗೇರಿಸಿದರು.

ಬಾಲಗಂಗಾಧರ ತಿಲಕ್: ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇವೆ’ ಎಂಬ ಘೋಷಣೆಯ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ, ಆಲ್ ಇಂಡಿಯಾ ಹೋಮ್ ರೂಲ್ ಲೀಗ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಾಲ ಗಂಗಾಧರ ತಿಲಕ್ ಅವರು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸ್ವಾತಂತ್ರ್ಯ ಹೋರಾಟದ ಮೊದಲ ನಾಯಕ. ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಸಂಘಟಿಸಲು ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಆರಂಭಿಸಿದರು. ಆ ಮೂಲಕ ಕೀರ್ತನೆ ಭಜನೆಗಳ ಮೂಲಕ ರಾಷ್ಟ್ರೀಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಭಗತ್ ಸಿಂಗ್: ಸ್ವಾತಂತ್ರ್ಯ ಹೋರಾಟಕ್ಕೆ 'ಇನ್ಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ನೀಡಿದ ಕ್ರಾಂತಿಕಾರಿ ಭಗತ್ ಸಿಂಗ್ ಅವರು ಶಸ್ತ್ರ ಕ್ರಾಂತಿಯ ಮೂಲಕ ಬ್ರಿಟೀಷರ ವಿರುದ್ದ ಚಳವಳಿ ಸಂಘಟಿಸಿ ಹೋರಾಟ ನಡೆಸಿದರು. ತಮ್ಮ 23ನೇ ವಯಸ್ಸಿಗೆ ಬ್ರಿಟೀಷ್ ಸರಕಾರ ಗಲ್ಲಿಗೇರಿಸುವ ಮೂಲಕ ಹುತಾತ್ಮರಾದರು.

ಸರ್ದಾರ್ ವಲ್ಲಭಭಾಯ್ ಪಟೇಲ್: 1917ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶ. ಮಹಾತ್ಮ ಗಾಂಧಿ ಅವರ ಸ್ವರಾಜ್ ಅಭಿಯಾನ ಬೆಂಬಲಿಸಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಬೊರ್ಸಾದ್‍ನಲ್ಲಿ ಭಾಷಣ. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮಹತ್ವದ ಪಾತ್ರ, ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಬ್ರಿಟೀಷರಿಂದ ಬಂಧನ.

ಜವಾಹರ್ ಲಾಲ್ ನೆಹರು: 1919ರಲ್ಲಿ ಅಲಹಾಬಾದ್‍ನಲ್ಲಿ ನಡೆದ ಹೋಮ್ ರೂಲ್ ಲೀಗ್ ಕಾರ್ಯದರ್ಶಿಯಾದರು. 1920ರ ಅಸಹಕಾರ ಚಳವಳಿ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡರು. 1921ರಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಸಂಘಟಿಸುವಲ್ಲಿ ನಿರ್ಣಾಯಕ ಪಾತ್ರ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ ಕೀರ್ತಿ ನೆಹರು ಅವರದು. 1929ರಲ್ಲಿ ಮೂಲಭೂತ ಹಕ್ಕು ಮತ್ತು ಆರ್ಥಿಕ ನೀತಿ ರೂಪಿಸಿದ ನೆಹರು ಪ್ರತಿಯೊಬ್ಬ ಭಾರತೀಯನು ಜಾತಿ, ಧರ್ಮ, ಭಾಷೆ, ಬಣ್ಣ ಎಂಬ ಬೇಧವಿಲ್ಲದೆ ಕಾನೂನಿನ ಮುಂದೆ ಸಮಾನರು ಎಂದು ತಿಳಿಸಿದರು. ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ಸಿನ ಕಾರಣಕರ್ತರಲ್ಲಿ ಒಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News