ಚಿಕ್ಕಮಗಳೂರು: ಜಿಲ್ಲಾಡಳಿತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ

Update: 2020-08-15 13:14 GMT

ಚಿಕ್ಕಮಗಳೂರು, ಆ.15: ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ರಾಜ್ಯ ಸರಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳ ಮುಖಂಡರು ಶನಿವಾರ ಜಿಲ್ಲಾಡಳಿತದ ಸ್ವಾತಂತ್ರ್ಯ ದಿನಾವರಣೆ ಬಹಿಷ್ಕರಿಸಿ ನಗರದ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಯಿತು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರ ನೇತೃತ್ವದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತದ 74ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಿಷ್ಕರಿಸಿ ಇಲ್ಲಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಮೌನಪ್ರತಿಭಟನೆಯಲ್ಲಿ ಜಾತ್ಯತೀತ ಜನತಾದಳ, ಕಾಂಗ್ರೆಸ್, ಸಿ.ಪಿ.ಐ, ಬಹುಜನ ಸಮಾಜ ಪಕ್ಷ, ದಲಿತ ಸಂಘರ್ಷ ಸಮಿತಿ ಸೇರಿದಂತೆ ರೈತಸಂಘ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ಭಾಗವಹಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇದನ್ನು ನಿರಂತರ ಹೋರಾಟದ ಮೂಲಕ ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸಲು ತೀರ್ಮಾನ ಕೈಗೊಂಡರು.

ಬೆಳಗ್ಗೆ ಹಮ್ಮಿಕೊಂಡಿದ್ದ ಮೌನಪ್ರತಿಭಟನೆ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಡಿ.ಎಸ್ ರಾಜ್ಯ ಉಪಾದ್ಯಕ್ಷ ಎಚ್.ಎಚ್.ದೇವರಾಜ್, ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿರುವ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕಳಪೆ ಕಾಮಗಾರಿಗಳು ತುಂಬಿ ತುಳುಕುತ್ತಿವೆ. ಅಭಿವೃದ್ದಿಯ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಅತಿವೃಷ್ಟಿ, ಒತ್ತುವರಿ ಸಮಸ್ಯೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಕಿಂಚಿತ್ತು ಪ್ರಯತ್ನ ನಡೆಸದೇ ಕೇವಲ ಭ್ರಷ್ಟಾಚಾರದ ಮೂಲಕ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬಿಎಸ್ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಇಡೀ ದೇಶ ಸ್ವಾತಂತ್ರ್ಯದ ಹಬ್ಬ ಆಚರಿಸುತ್ತಿರುವಾಗ ಈ ಸಚಿವರ ವರ್ತನೆಯಿಂದ ಪ್ರತಿಭಟನೆ ನಡೆಸುತ್ತಿರುವುದು ದುರ್ದೈವದ ಸಂಗತಿ. ಸಿ.ಟಿ.ರವಿ ವಿರುದ್ಧ ಜನಾಂದೋಲನ ನಡೆಯಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಭಾವನಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ಅನ್ಯಧರ್ಮೀಯರ ವಿರುದ್ಧ ದ್ವೇಷ ಹುಟ್ಟುಹಾಕುತ್ತಿರುವ ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಮುಖಂಡ ಜೀವರಾಜ್ ಅವರು ಶೃಂಗೇರಿಯ ಘಟನೆ ಮುಂದಿಟ್ಟುಕೊಂಡು ಸಮಾಜವಿರೋಧಿ ವ್ಯಕ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿದೆ. ಈ ಪ್ರತಿಭಟನೆ ಇಲ್ಲಿಗೆ ನಿಲ್ಲಬಾರದು. ಪ್ರತಿ ಮನೆ ಮನೆಗೂ ಸಿ.ಟಿ.ರವಿ ಮತ್ತು ಬಿಜೆಪಿ ಸರಕಾರದ ಹಗರಣಗಳು ತಲುಪಬೇಕು. ಕಾಂಗ್ರೆಸ್ ಪಕ್ಷವು ಈ ಸಂಬಂಧ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಅದರ ಜೊತೆಗೆ ಎಲ್ಲಾ ಪಕ್ಷಗಳು ಎಲ್ಲಾ ಜನಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಸೇರಿ ನಿರಂತರವಾಗಿ ಹೋರಾಟ ಆರಂಭಿಸಬೇಕೆಂದು ಸಲಹೆ ನೀಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರು ಮಾತನಾಡಿ, ಕಳೆದ 17 ವರ್ಷಗಳಿಂದ ಈ ಕ್ಷೇತ್ರದ ಶಾಸಕರಾಗಿರುವ ಸಿ.ಟಿ.ರವಿಯವರು ಬಡವರಿಗೆ ಮನೆ ಕೊಡಿಸಲು ಸಾಧ್ಯವಾಗಿಲ್ಲ. ಬಹುಪಾಲು ಸಣ್ಣ ಗುತ್ತಿಗೆದಾರರು ನಿರುದ್ಯೋಗಿಳಾಗಿದ್ದಾರೆ. ಎಲ್ಲಾ ಕಾಮಗಾರಿಗಳನ್ನು ಸಿ.ಟಿ.ರವಿಯವರ ಸಂಬಂಧಿಗಳೇ ನಿರ್ವಹಿಸುತ್ತಿದ್ದಾರೆ. ಈ ಗುತ್ತಿಗೆದಾರರು ಕಾಮಗಾರಿಗಳ ಹಣ ಲೂಟಿ ಮಾಡುತ್ತಿದ್ದಾರೆ. ನೀರಾವರಿ ಯೋಜನೆಗಳು ಕುಂಠಿವಾಗಿವೆ ಎಂದು ಆರೋಪಿಸಿದರು.

ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ, ಜನಪ್ರತಿನಿಧಿಯಾದವರು ಒಳ್ಳೆಯ ಆಡಳಿತಾಗಾರರಾಗಬೇಕು. ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಒಳ್ಳೆಯ ಗುತ್ತಿಗೆದಾರರಾಗಿದ್ದಾರೆ. ಜಾಲಿಗಿಡಗಳೇ ಬೆಳೆಯದ ಮಲೆನಾಡು ಭಾಗದ ಕೆರೆಗಳಲ್ಲಿ ಜಾಲಿಗಿಡಗಳನ್ನು ಕಡಿದು ಹಣ ಮಾಡಿರುವ ಉದಾಹರಣೆಗಿಂತ ಬೇರೆ ಇಲ್ಲ ಎಂದು ಟೀಕಿಸಿದರು.

ಸಿಪಿಐ ಮುಖಂಡ ರೇಣು ಕಾರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಒತ್ತುವರಿ, ಅತಿವೃಷ್ಟಿ ಸೇರಿದಂತೆ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಸ್ಯೆಗಳ ಜೊತೆ  ಗಮನಹರಿಸದ ಸಚಿವ ಸಿ.ಟಿ.ರವಿ ಅಯ್ಯನಕೆರೆಯಲ್ಲಿ ದೋಣಿವಿಹಾರ  ಆರಂಭಿಸುವಂತಹ ಮೋಜಿನ ಕಾರ್ಯಕ್ರಮ ನಡೆಸುವ ಮೂಲಕ ರೈತರು ಮತ್ತು ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಸಂಸ ಮುಖಂಡ ಅಣ್ಣ ಯ್ಯ, ಕನ್ನಡಪರ ಸಂಘಟ ನೆಗಳ ಒಕ್ಕೂಟದ ಮುಖಂಡ ತೇಗೂರು ಜಗದೀಶ್ ಮುಂತಾದವರು ಮಾತನಾಡಿದರು.

ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಜನರು ಸರಕಾರಹಾಗೂ ಸಚಿವರ ವೈಫಲ್ಯಗಳನ್ನು ಬಿಂಬಿಸುವ ಭಿತ್ತಿಪತ್ರಗಳನ್ನು ಹಿಡಿದು ಗಾಂಧಿ ಪ್ರತಿಮೆ ಮೌನ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸುಮಾರು 2 ಗಂಟೆಗಳ ಕಾಲ ಸಾಂಕೇತಿಕ ಮೌನ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಪ್ರವಾಹ ಪೀಡಿತ ನೆರೆಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ. ಮನೆಗಳನ್ನು ನಿರ್ಮಿಸಿ ಕೊಟ್ಟಿಲ್ಲ. ಅತಿವೃಷ್ಟಿ ಮುಂತಾದ ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ವಾದ ಪರಿಹಾರ ಕೊಡಿಸಲು ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಕೊರೋನ ವೈರಾಣು ಹರಡಿದ ನಂತರ ಇಡೀ ಜನಜೀವನ ಅತ್ಯಂತ ಸಂಕಷ್ಟ ದಲ್ಲಿದೆ. ದುಡಿಮೆ ಇಲ್ಲದೇ ಅನೇಕ ಜನರು ಬದುಕನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕೋವಿಡ್-19 ನಿರ್ವಹಣೆಯಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅನೇಕ ಸೋಂಕಿತರಿಗೆ ಸಮರ್ಪಕ ವಾಗಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಪ್ರಯೋಗಾಲಯ ಆರಂಭಿಸುವಂತೆ ಪ್ರಾರಂಭದಿಂದ ಒತ್ತಾಯಿಸುತ್ತಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದ ಉಸ್ತುವಾರಿ ಸಚಿವರು ಕೊನೆಗಳಿಗೆಯಲ್ಲಿ ಪ್ರಯೋಗಾಲಯ ಆರಂಭಿಸಿದ್ದಾರೆ. ಈ ಪ್ರಯೋಗಾಲಯವನ್ನು ಪ್ರಾರಂಭದಲ್ಲೇ ಆರಂಭಿಸಿದ್ದರೇ ಎಷ್ಟೋ ಜನರಿಗೆ ಅನುಕೂಲವಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ ಪ್ರಯುಕ್ತ ಕ್ಷೌರಿಕರು, ಮಡಿವಾಳರು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಸೇರಿದಂತೆ ಅನೇಕ ವೃತ್ತಿಪರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಸರಕಾರ ಘೋಷಣೆ ಮಾಡಿತ್ತು. ಆದರೆ ಯಾರಿಗೂ ಕೂಡಾ ಯಾವುದೇ ನೆರವು ಸಿಕ್ಕಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಅತಿವೃಷ್ಟಿ ಮುಂತಾದ ಅನೇಕ ಸಮಸ್ಯೆಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ತಂತ್ರ್ಯೋತ್ಸವ ಸಮಾರಂಭದಲ್ಲಿ ಸರಕಾರ ಮತ್ತು ಉಸ್ತುವಾರಿ ಸಚಿವರು ಸುಳ್ಳು ಘೋಷಣೆಗಳನ್ನು ಕೇಳಲು ಇಷ್ಟವಿಲ್ಲದೆ ಸಚಿವರ ಭ್ರಷ್ಟಾಚಾರ ಮತ್ತು ಸರಕಾರದ ವೈಫಲ್ಯದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ಇಲ್ಲಿಗೆ ಮುಗಿಯದು.
- ಎಸ್.ಎಲ್.ಬೋಜೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News