ಎಲ್‌ಒಸಿಯಿಂದ ಎಲ್‌ಎಸಿ ತನಕ ಸೂಕ್ತ ಉತ್ತರ: ಪಾಕ್, ಚೀನಾಕ್ಕೆ ಪ್ರಧಾನಿ ಸಂದೇಶ

Update: 2020-08-15 15:54 GMT

ಹೊಸದಿಲ್ಲಿ,ಆ.15: ನಿಯಂತ್ರಣ ರೇಖೆ (ಎಲ್‌ಒಸಿ)ಯಿಂದ ಹಿಡಿದು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯವರೆಗೆ ದೇಶದ ಸಾರ್ವಭೌಮತ್ವಕ್ಕೆ ಸವಾಲೊಡ್ಡಿದವರಿಗೆ ಭಾರತೀಯ ಯೋಧರು ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರು.

 ಕೆಂಪುಕೋಟೆಯ ಮೇಲಿನಿಂದ 74ನೇ ಸ್ವಾತಂತ್ರ್ಯದಿನದ ಭಾಷಣವನ್ನು ಮಾಡಿದ ಮೋದಿ, ‘ಎಲ್‌ಒಸಿಯಿಂದ ಎಲ್‌ಎಸಿವರೆಗೆ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎದುರಾದಾಗಲೆಲ್ಲ ನಮ್ಮ ಯೋಧರು ಅವರಿಗೆ ತಮ್ಮದೇ ಆದ ಭಾಷೆಯಲ್ಲಿ ಉತ್ತರಿಸಿದ್ದಾರೆ ’ ಎಂದು ಚೀನಾ ಮತ್ತು ಪಾಕಿಸ್ತಾನಗಳನ್ನು ಹೆಸರಿಸದೆ ಅವುಗಳಿಗೆ ಕಠಿಣ ಸಂದೇಶವನ್ನು ರವಾನಿಸಿದರು.

ಕಳೆದ ಜೂನ್ ತಿಂಗಳಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗಿನ ಘರ್ಷಣೆಯನ್ನು ಪ್ರಸ್ತಾಪಿಸಿದ ಅವರು,‘ಭಾರತದ ಸಮಗ್ರತೆಯು ನಮಗೆ ಸರ್ವೋಚ್ಚವಾಗಿದೆ. ನಮ್ಮ ಯೋಧರು ಏನು ಮಾಡಬಲ್ಲರು,ನಮ್ಮ ದೇಶವೇನು ಮಾಡಬಲ್ಲದು ಎನ್ನುವುದನ್ನು ಇಡೀ ವಿಶ್ವವು ಲಡಾಖ್‌ನಲ್ಲಿ ನೋಡಿದೆ. ಇಂದು ಕೆಂಪುಕೋಟೆಯಿಂದ ಆ ಎಲ್ಲ ಧೀರ ಯೋಧರನ್ನು ನಾನು ವಂದಿಸುತ್ತೇನೆ ’ಎಂದು ಹೇಳಿದರು.

ಭೀತಿವಾದವಿರಲಿ ಅಥವಾ ವಿಸ್ತರಣಾವಾದವಿರಲಿ, ಭಾರತವು ಎರಡರ ವಿರುದ್ಧವೂ ಹೋರಾಡುತ್ತಿದೆ ಎಂದರು.

 ಕೇಸರಿ ಮಿಶ್ರಿತ ರುಮಾಲು ಮತ್ತು ಬಿಳಿ-ಕೇಸರಿ ಮಿಶ್ರಿತ ಶಾಲು ಧರಿಸಿ ಸತತ ಏಳನೇ ವರ್ಷ ಸ್ವಾತಂತ್ರೋತ್ಸವ ಭಾಷಣ ಮಾಡಿದ ಪ್ರಧಾನಿ ತನ್ನ 86 ನಿಮಿಷಗಳ ಭಾಷಣಲ್ಲಿ ‘ಆತ್ಮನಿರ್ಭರ ಭಾರತ’,‘ವೋಕಲ್ ಫಾರ್ ಲೋಕಲ್’ ಮತ್ತು ‘ಮೇಕ್ ಇನ್ ಇಂಡಿಯಾ ಟು ಮೇಕ್ ಫಾರ್ ವರ್ಲ್ಡ್’ ಇವುಗಳಿಗೆ ಹೆಚ್ಚಿನ ಒತ್ತು ನೀಡಿದರು. ಕೊರೋನ ವೈರಸ್ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಗೌರವಾರ್ಪಣೆ ಮಾಡಿದ ಅವರು ಮೂರು ಕೋವಿಡ್-19 ವ್ಯಾಕ್ಸಿನ್‌ಗಳು ವಿವಿಧ ಪರೀಕ್ಷಾ ಹಂತಗಳಲ್ಲಿದ್ದು,ಅವುಗಳ ಉತ್ಪಾದನೆ ಮತ್ತು ವಿತರಣೆಗಾಗಿ ಮಾರ್ಗಸೂಚಿಯು ಸಿದ್ಧವಾಗಿದೆ ಎಂದು ಘೋಷಿಸಿದರು.

ಈವರೆಗೆ ದೇಶದಲ್ಲಿ 48,000ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೋನ ವೈರಸ್‌ನಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಅವರು ಸಂತಾಪಗಳನ್ನು ಸಲ್ಲಿಸಿದರು.

ಈ ಮಾರಣಾಂತಿಕ ಪಿಡುಗಿನ ವಿರುದ್ಧ ದೇಶವು ವಿಜಯವನ್ನು ಸಾಧಿಸಲಿದೆ ಎಂಬ ಭರವಸೆಯನ್ನು ಅವರು ಈ ಸಂದರ್ಭದಲ್ಲಿ ದೇಶಕ್ಕೆ ನೀಡಿದರು.

“ನಮ್ಮ ವಿಜ್ಞಾನಿಗಳ ಪ್ರತಿಭೆಯು ಋಷಿಮುನಿಗಳ ಜ್ಞಾನಕ್ಕಿಂತ ಕಡಿಮೆಯಿಲ್ಲ ಮತ್ತು ಅವರು ಕೋವಿಡ್ ವಿರುದ್ಧ ಲಸಿಕೆಗಾಗಿ ಪ್ರಯೋಗಾಲಯಗಳಲ್ಲಿ ಕಠಿಣವಾಗಿ ಶ್ರಮಿಸುತ್ತಿದ್ದಾರೆ. ಮೂರು ಲಸಿಕೆಗಳು ವಿವಿಧ ಪರೀಕ್ಷಾ ಹಂತಗಳಲ್ಲಿದ್ದು, ವಿಜ್ಞಾನಿಗಳು ಹಸಿರು ನಿಶಾನೆ ತೋರಿಸಿದಾಗ ಅವುಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲಾಗುವುದು ಮತ್ತು ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದರು.

ಕಳೆದ ವರ್ಷ ಇದೇ ಕೆಂಪುಕೋಟೆಯಿಂದ ತಾನು ಜಲಜೀವನ ಅಭಿಯಾನವನ್ನು ಪ್ರಕಟಿಸಿದ್ದೆ. ಇಂದು ಈ ಅಭಿಯಾನದಡಿ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳು ಪ್ರತಿದಿನ ನೀರಿನ ಸಂಪರ್ಕ ಪಡೆಯುತ್ತಿವೆ ಎಂದು ಮೋದಿ ಹೇಳಿದರು.

ಭಾರತವನ್ನು ಸ್ವಾವಲಂಬಿಯಾಗಿಸುವುದರ ಅಥವಾ ಆತ್ಮನಿರ್ಭರ ಭಾರತದ ಬಗ್ಗೆ ಹೆಚ್ಚಿನ ಒತ್ತು ನೀಡಿದ ಮೋದಿ,ಅದು ಕೇವಲ ಒಂದು ಸರಳ ಶಬ್ದವಲ್ಲ,ಅದು ಎಲ್ಲ ಭಾರತೀಯರಿಗೂ ಮಂತ್ರವಾಗಬೇಕು ಎಂದರು.

ದೇಶವು ತನ್ನ ಗಡಿಪ್ರದೇಶಗಳಿಗೆ ರಸ್ತೆ ಸೌಲಭ್ಯಗಳು ಮತ್ತು ಸಂಪರ್ಕವನ್ನು ಹೆಚ್ಚಿಸುತ್ತಿದೆ ಎಂದ ಮೋದಿ, ದೇಶದ ಗಡಿಪ್ರದೇಶಗಳಾದ್ಯಂತ ಎನ್‌ಸಿಸಿಯನ್ನು ವಿಸ್ತರಿಸಲಾಗುವುದು ಎಂದು ಪ್ರಕಟಿಸಿದರು. ಇದು ನುರಿತ ಮಾನವಶಕ್ತಿಯೊಂದಿಗೆ ತೊಂದರೆಯಲ್ಲಿರುವ ಗಡಿ ಪ್ರದೇಶಗಳಿಗೆ ನೆರವಾಗುವುದು ಮಾತ್ರವಲ್ಲ,ಭಾರತೀಯ ಸಶಸ್ತ್ರ ಪಡೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಕಂಡುಕೊಳ್ಳಲು ಯುವಜನರಿಗೆ ನೆರವಾಗಲಿದೆ. ಭಾರತವು ಗಡಿಪ್ರದೇಶಗಳಿಗಾಗಿ ಸುಮಾರು ಒಂದು ಲಕ್ಷ ಕೆಡೆಟ್‌ಗಳನ್ನು ಸಿದ್ಧಗೊಳಿಸಲಿದೆ ಮತ್ತು ಈ ಪೈಕಿ ಮೂರನೇ ಒಂದು ಭಾಗದಷ್ಟು ಮಹಿಳೆಯರಾಗಿರುತ್ತಾರೆ ಎಂದರು.

ಕೃಷಿ ಮಾರುಕಟ್ಟೆಗಳಲ್ಲಿಯ ನೂತನ ಸುಧಾರಣೆಗಳನ್ನು,ವಿಶೇಷವಾಗಿ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಗಳಿಗೇ ಮಾರಾಟ ಮಾಡಬೇಕೆಂಬ ನಿಬಂಧನೆಯಿಂದ ಅವರನ್ನು ಮುಕ್ತಗೊಳಿಸಿದ ಸುಧಾರಣೆಗಳನ್ನು ಮೋದಿ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆಯೂ ಅವರು ಮಾತನಾಡಿದರು.

ಪ್ರಧಾನಿ ಭಾಷಣ ಕುರಿತು......

 ವಿವಿಧ ಕಾರಣಗಳಿಂದಾಗಿ ದೇಶ ಮತ್ತು ವಿಶ್ವಕ್ಕೆ ಸವಾಲಾಗಿರುವ 2020ನೇ ವರ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತಿರುಳಾಗಿತ್ತು. ಈ ಹಿಂದಿನ ತನ್ನ ಸ್ವಾತಂತ್ರೋತ್ಸವ ಭಾಷಣಗಳಲ್ಲಿ ಸರಕಾರ,ಪ್ರಜೆಗಳು,ರೈತರು,ಕನಸು ಮತ್ತು ಸ್ವಾತಂತ್ರ್ಯದಂತಹ ಶಬ್ದಗಳಿಗೆ ಹೆಚ್ಚಿನ ಒತ್ತು ನೀಡಿದ್ದ ಮೋದಿಯವರ ಈ ವರ್ಷದ ಭಾಷಣದಲ್ಲಿ ಆತ್ಮನಿರ್ಭರ ಮತ್ತು ಕೊರೋನ ಹೆಚ್ಚಿನ ಪ್ರಾಬಲ್ಯ ಹೊಂದಿದ್ದವು.ಅವರ 86 ನಿಮಿಷಗಳ ಭಾಷಣದಲ್ಲಿ ‘ಆತ್ಮನಿರ್ಭರ’ 32 ಬಾರಿ ಮತ್ತು ‘ಕೊರೋನ’ 25 ಬಾರಿ ಉಲ್ಲೇಖಗೊಂಡಿದ್ದವು. ‘ರೈತರು‘ ಶಬ್ಧ 22 ಬಾರಿ ಮತ್ತು ‘ಗ್ರಾಮೀಣ’ ಶಬ್ಧ 15 ಬಾರಿ ಮೋದಿಯವರ ಬಾಯಿಯಿಂದ ಹೊರಬಿದ್ದಿದ್ದವು. ಮಹಿಳೆ (21 ಬಾರಿ),ಸ್ವಾತಂತ್ರ್ಯ (24),ಬಡವರು (15) ಮತ್ತು ಅಭಿವೃದ್ಧಿ (18)ಯಂತಹ ಶಬ್ಧಗಳೂ ಮೋದಿಯವರ ಭಾಷಣದಲ್ಲಿ ಹೆಚ್ಚಿನ ಆದ್ಯತೆ ಪಡೆದುಕೊಂಡಿದ್ದವು.

ಪರಿಸರ ರಕ್ಷಣೆಗಾಗಿ ಯೋಜನೆಗಳು ಪ್ರಕಟ

ಪ್ರಾಜೆಕ್ಟ್ ಟೈಗರ್ ಮಾದರಿಯಲ್ಲಿ ಗಂಗಾನದಿಯಲ್ಲಿನ ಡಾಲ್ಫಿನ್‌ಗಳು ಮತ್ತು ಏಷ್ಯಾ ಸಿಂಹಗಳ ರಕ್ಷಣೆಯಿಂದ ಹಿಡಿದು ಲಡಾಖ್‌ನ್ನು ಕಾರ್ಬನ್‌ ಮುಕ್ತಗೊಳಿಸುವುದು ಮತ್ತು 100 ಆಯ್ದ ನಗರಗಳಲ್ಲಿ ಮಾಲಿನ್ಯವನ್ನು ತಗ್ಗಿಸುವವರೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಸರಣಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಕಟಿಸಿದರು.

 ಸಿಕ್ಕಿಂ ಸಾವಯವ ರಾಜ್ಯವಾಗಿ ಗುರುತಿಸಿಕೊಂಡಿರುವಂತೆ ಲಡಾಖ್‌ನ್ನು ಕಾರ್ಬನ್‌ ಮುಕ್ತ ಪ್ರದೇಶವನ್ನಾಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಅಧಿಕಾರಿಗಳ ಹೇಳಿಕೆಯಂತೆ ದೇಶದ ಒಟ್ಟು ಕಾರ್ಬನ್ ಹೊರಸೂಸುವಿಕೆಯಲ್ಲಿ ಲಡಾಖ್‌ನ ಪಾಲು ಶೇ.0.1ರಷ್ಟಿದೆ.

ದೇಶದ ಜೀವವೈವಿಧ್ಯತೆಗೆ ಉತ್ತೇಜನ ನೀಡುವ ಕುರಿತು ಮಾತನಾಡಿದ ಮೋದಿ,2010ರಲ್ಲಿ ರಾಷ್ಟ್ರೀಯ ಜಲಚರವೆಂದು ಘೋಷಿಸಲ್ಪಟ್ಟಿರುವ ಗಂಗಾನದಿಯ ಡಾಲ್ಫಿನ್‌ಗಳ ಸಂರಕ್ಷಣೆಗಾಗಿ 10 ವರ್ಷಗಳ ಯೋಜನೆಯೊಂದನ್ನು ಪ್ರಕಟಿಸಿದರು.

ಸರಕಾರವು ಏಷ್ಯಾ ಸಿಂಹಗಳ ರಕ್ಷಣೆಗಾಗಿ ಶೀಘ್ರ ಯೋಜನೆಯೊಂದನ್ನು ಆರಂಭಿಸಲಿದೆ ಎಂದ ಅವರು,ಇತ್ತೀಚಿನ ವರ್ಷಗಳಲ್ಲಿ ಹುಲಿ ಮತ್ತು ಸಿಂಹಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ದೇಶದ ಪ್ರಯತ್ನಗಳನ್ನು ಶ್ಲಾಘಿಸಿದರು.

ಮುಂದಿನ 1,000 ದಿನಗಳಲ್ಲಿ ಎಲ್ಲ ಗ್ರಾಮಗಳು ಆಪ್ಟಿಕಲ್ ಫೈಬರ್‌ನಿಂದ ಸಂಪರ್ಕಿತ

ದೇಶದಲ್ಲಿಯ ಆರು ಲಕ್ಷಕ್ಕೂ ಅಧಿಕ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಸಂರ್ಕಿಸುವ ಯೋಜನೆಯು ಮುಂದಿನ 1,000 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಶನಿವಾರ ಪ್ರಕಟಿಸಿದರು.

ಜೊತೆಗೆ ಈ ಅವಧಿಯಲ್ಲಿ ಸಾಗರದಡಿಯ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಲಕ್ಷದ್ವೀಪಕ್ಕೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತನ್ನ ಸ್ವಾತಂತ್ರ್ಯದಿನ ಭಾಷಣದಲ್ಲಿ ತಿಳಿಸಿದ ಅವರು, ತನ್ನ ಸರಕಾರವು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ 2014ರ ವೇಳೆಗೆ ದೇಶದ ಕೇವಲ ಐದು ಡಝನ್ ಪಂಚಾಯತ್‌ಗಳು ಆಪ್ಟಿಕಲ್ ಫೈಬರ್ ಜೊತೆ ಸಂಪರ್ಕಿತಗೊಂಡಿದ್ದವು. ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್‌ನೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಸೈಬರ್ ಭದ್ರತೆ ಕುರಿತು ನೂತನ ನೀತಿಯೊಂದನ್ನು ಶೀಘ್ರವೇ ಅನಾವರಣಗೊಳಿಸಲಾಗುವುದು ಎಂದೂ ಮೋದಿ ಪ್ರಕಟಿಸಿದರು.

ಭಾರತದೊಂದಿಗೆ ಗಡಿಗಳನ್ನು ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ, ನೆರೆರಾಷ್ಟ್ರಗಳೊಂದಿಗೆ ಸಂಬಂಧಗಳು ಭದ್ರತೆ ಮತ್ತು ವಿಶ್ವಾಸವನ್ನು ಅವಲಂಬಿಸಿವೆ. ಗಡಿಯೊಂದಿಗೆ ನಮ್ಮ ಹೃದಯಗಳನ್ನು ಹಂಚಿಕೊಳ್ಳುವವರೂ ನಮ್ಮ ನೆರೆಯವರಾಗುತ್ತಾರೆ. ಸಂಬಂಧವು ಗೌರವಿಸಲ್ಪಟ್ಟಾಗ ಅದು ಇನ್ನೂ ಆಪ್ತವಾಗುತ್ತದೆ. ಭಾರತವು ಇಂದು ಹೆಚ್ಚಿನ ನೆರೆರಾಷ್ಟ್ರಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದೆ. ನಾವು ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ ಮತ್ತು ಪರಸ್ಪರರ ಬಗ್ಗೆ ಬಹಳಷ್ಟು ಗೌರವ ಹೊಂದಿದ್ದೇವೆ

* ಪ್ರಧಾನಿ ಮೋದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News