ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ: ಎಚ್.ಕೆ.ಪಾಟೀಲ್ ಅಸಮಾಧಾನ

Update: 2020-08-15 18:31 GMT

ಬೆಂಗಳೂರು, ಆ. 15: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ' ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ. ಆದರೆ, ಗಲಭೆಯಲ್ಲಿ ಕಾಂಗ್ರೆಸ್ ಶಾಸಕರ ಮನೆ ಸುಟ್ಟು ಹೋಗಿದೆ. ಶೆಟ್ಟರ್ ಅವರು ನಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಶಾಸಕರು ಎಂದು ಭಾವಿಸಿದಂತಿದೆ ಎಂದು ಟೀಕಿಸಿದರು.

ಆಡಳಿತದಲ್ಲಿರುವವರು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಕೃತ್ಯದ ಹಿಂದೆ ಯಾರಿದ್ದಾರೆ? ಮತ್ತು ಯಾರ ಪಾತ್ರವಿದೆ ಎಂಬುದು ಬಹಿರಂಗವಾಗಲಿದೆ. ಆ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಮನಸೋ ಇಚ್ಛೆ ಆರೋಪ ಮಾಡುವುದು ಸರಿಯಲ್ಲ. ಎಂದೂ ಕಾಂಗ್ರೆಸ್ ಪಕ್ಷ ಅಂತರ ಕೃತ್ಯಕ್ಕೆ ಕೈಹಾಕುವುದಿಲ್ಲ ಎಂದು ಎಚ್.ಕೆ.ಪಾಟೀಲ್ ಸ್ಪಷ್ಟನೆ ನೀಡಿದರು.

ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಮುಂಗಾರು ಮಳೆ ಆರಂಭವಾಗಿದ್ದು ರೈತರಿಗೆ ಯೂರಿಯಾ ಗೊಬ್ಬರ ನೀಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿವೆ. ಹೀಗಾಗಿ ತಮ್ಮಲ್ಲಿರುವ ವೈಮನಸ್ಸುಗಳ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News