ದೇಶದಲ್ಲಿ ಕಳೆದ ವಾರ ಅತ್ಯಧಿಕ ಕೊರೋನ ಪ್ರಕರಣ, ಸಾವು

Update: 2020-08-17 03:45 GMT

ಹೊಸದಿಲ್ಲಿ, ಆ.17: ಕೊರೋನ ವೈರಸ್ ಸೋಂಕು ಭಾರತಕ್ಕೆ ಕಾಲಿಟ್ಟ ಬಳಿಕ ದಾಖಲೆ ಪ್ರಮಾಣದ ಪ್ರಕರಣಗಳು ಕಳೆದ ಒಂದು ವಾರದಲ್ಲಿ ಪತ್ತೆಯಾಗಿವೆ. ಜತೆಗೆ ಕಳೆದ ವಾರ ಅತ್ಯಧಿಕ ಕೊರೋನ ಸಾವು ಸಂಭವಿಸಿದೆ. ಆದರೆ ಪ್ರಕರಣ ಹೆಚ್ಚಳ ಪ್ರಮಾಣ ಮಾತ್ರ ನಿಧಾನವಾಗಿರುವುದು ಸಮಾಧಾನಕರ ಅಂಶ.

ಆಗಸ್ಟ್ 10ರಿಂದ 16ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 4.3 ಲಕ್ಷದಷ್ಟು ಅಂದರೆ ಶೇಕಡ 5.9ರಷ್ಟು ಹೆಚ್ಚಿದೆ. ಇದು ಆಗಸ್ಟ್ 3-9ರ ಅವಧಿಯಲ್ಲಿ ಹೆಚ್ಚಳವಾದ ಪ್ರಮಾಣ (10.9%)ಕ್ಕೆ ಹೋಲಿಸಿದರೆ ಕಡಿಮೆ. ಆ ವಾರ ದೇಶದಲ್ಲಿ 4.1 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದವು. ಅದಕ್ಕೂ ಹಿಂದಿನ ವಾರ ಅಂದರೆ ಜುಲೈ 27ರಿಂದ ಆಗಸ್ಟ್ 2ರವರೆಗಿನ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 16ರದರದಲ್ಲಿ ಹೆಚ್ಚಳವಾಗಿತ್ತು.

ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಈ ವಾರ 6,555 ಮಂದಿ ಸಾವನ್ನಪ್ಪಿದ್ದರೆ ಕಳೆದ ವಾರ 6,279 ಮಂದಿ ಮೃತಪಟ್ಟಿದ್ದರು. ಅಂದರೆ ಸಾವಿನ ಸಂಖ್ಯೆಯಲ್ಲಿ ಶೇಕಡ 4.4ರಷ್ಟು ಹೆಚ್ಚಳವಾಗಿದೆ. ಹಿಂದಿನ ವಾರ ಶೇಕಡ 17.5 ಹಾಗೂ ಅದಕ್ಕಿಂತ ಹಿಂದಿನ ವಾರ ಶೇಕಡ 16ರ ದರದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು.

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವ ವೇಗ ತಗ್ಗುತ್ತಿದೆ ಎಂಬ ನಿರ್ಧಾರಕ್ಕೆ ತಕ್ಷಣವೇ ಬರುವಂತಿಲ್ಲವಾದರೂ, ಮುಂದಿನ ವಾರಗಳ ಪ್ರವೃತ್ತಿಯ ಆಧಾರದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯಬಹುದಾಗಿದೆ.

ರವಿವಾರ ದೇಶದಲ್ಲಿ 57,799 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನ ದಾಖಲಾದ 67 ಸಾವಿರ ಪ್ರಕರಣಗಳಿಗೆ ಹೋಲಿಸಿದರೆ ಇದು ಕಡಿಮೆ. ಆದರೆ ಸ್ವಾತಂತ್ರ್ಯ ದಿನದ ರಜೆ ಕಾರಣದಿಂದ ಶನಿವಾರ ನಡೆದ ತಪಾಸಣೆ ಕಡಿಮೆ. ಶನಿವಾರ ಕೇವಲ 1.22 ಲಕ್ಷ ಪರೀಕ್ಷೆ ನಡೆದಿದ್ದು, ಶುಕ್ರವಾರ 8.6 ಲಕ್ಷ ಮಂದಿಯ ತಪಾಸಣೆ ನಡೆಸಲಾಗಿತ್ತು ಎಂದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಸಾವಿನ ಸಂಖ್ಯೆಯಲ್ಲೂ ಅಲ್ಪ ಇಳಿಕೆ ಕಂಡುಬಂದಿದ್ದರೂ ಸತತ ಐದನೇ ದಿನ 900ಕ್ಕಿಂತ ಅಧಿಕ ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ರವಿವಾರ 943 ಮಂದಿ ಮೃತಪಟ್ಟಿದ್ದು, ಇದುವರೆಗೆ 19.1 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 100ರಷ್ಟು ಇಳಿದು 6,83,279 ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News