ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಬಿಜೆಪಿ ಕಚೇರಿಯ ಕಸ ಗುಡಿಸಿ: ರೋಷನ್ ಬೇಗ್ ರನ್ನು ಕುಟುಕಿದ ಝಮೀರ್ ಅಹ್ಮದ್

Update: 2020-08-17 15:44 GMT

ಬೆಂಗಳೂರು, ಆ.17: ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಆರ್.ರೋಷನ್ ಬೇಗ್ ಹಾಕಿರುವ ಪತ್ರದ ಬಗ್ಗೆ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ ಆರ್.ರೋಷನ್‍ ಬೇಗ್ ಅವರು, ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ.

ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್‍ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮ್ ಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್‍ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಡಿಜೆ ಹಳ್ಳಿ ಗಲಭೆ ಬಗ್ಗೆ ಇಲ್ಲಿಯ ವರೆಗೆ ಮೌನವಹಿಸಿದ್ದ ರೋಷನ್ ಬೇಗ್ ಅವರು, ಇದ್ದಕ್ಕಿದ ಹಾಗೆ ಎಸ್‍ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ ರೋಷನ್ ಬೇಗ್ ಅವರು, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ರೋಷನ್ ಬೇಗ್ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ರೋಷನ್ ಬೇಗ್ ಆರೋಪ: ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಎಸ್‍ಡಿಪಿಐ ನಂತಹ ಉಗ್ರ ಮೂಲಭೂತವಾದಿ ಸಂಘಟನೆಗಳನ್ನು ಪೋಷಿಸಿಕೊಂಡು ಬರುತ್ತಿದ್ದು, ಮೊದಲ ದಿನದಿಂದಲೂ ನಾನು ಇದಕ್ಕೆ ವಿರುದ್ಧವಾಗಿದ್ದೇನೆ. ಇವತ್ತು ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ನೇರವಾಗಿ ಎಸ್‍ಡಿಪಿಐ ಹಿಂಸೆಗೆ ಗುರಿಯಾಗಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಎಸ್‍ಡಿಪಿಐ ಅನ್ನು ಮಣಿಸಲು ಯತ್ನಿಸಿದ ತನ್ವೀರ್ ಸೇಠ್ ಪ್ರಾಣಕ್ಕೆ ಸಂಚಕಾರ ಬಂತು. ಈಗ ಅಖಂಡ ಶ್ರೀನಿವಾಸಮೂರ್ತಿ ಕುತ್ತಿಗೆಗೆ ಕೈ ಹಾಕಿದ್ದಾರೆ. ಧಾರ್ಮಿಕ ಭಾವನೆಗಳ ಆಧಾರದಲ್ಲಿ ಸ್ಲಂಗಳಲ್ಲಿ ವಾಸಿಸುವಂತಹ ನಿರುದ್ಯೋಗಿ, ಅವಿದ್ಯಾವಂತ ಮುಸ್ಲಿಮ್ ಯುವಕರನ್ನು ಈ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕಿದೆ ಎಂದು ರೋಷನ್ ಬೇಗ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News