ಆರ್‌ಟಿಇ: ಮೊದಲ ಸುತ್ತಿನಲ್ಲಿ 14 ಸಾವಿರ ಸೀಟುಗಳು ಖಾಲಿ

Update: 2020-08-17 16:35 GMT

ಬೆಂಗಳೂರು, ಆ.17: 2020-21 ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಮೊದಲ ಸುತ್ತಿನಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಶಾಲೆಗಳಿಗೆ ಪ್ರವೇಶ ಪಡೆದಿದ್ದು, ಇನ್ನೂ 14 ಸಾವಿರ ಸೀಟುಗಳು ಖಾಲಿಯಾಗಿ ಉಳಿದಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಜು.29 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿತ್ತು. ಆ ಪ್ರಕಾರ ಆಯ್ಕೆಯಾದ ಮಕ್ಕಳಿಗೆ ಆ.10 ರೊಳಗೆ ಪ್ರವೇಶ ಪಡೆಯಬೇಕೆಂದು ಸೂಚಿಸಿದ್ದರು. ಈ ನಿಟ್ಟಿನಲ್ಲಿ 3,001 ಮಕ್ಕಳು ಪ್ರವೇಶ ಪಡೆದಿದ್ದು, ಇನ್ನೂ 14,452 ಸೀಟುಗಳು ಬಾಕಿಯಿವೆ. ಈ ಉಳಿಕೆ ಸೀಟುಗಳನ್ನು ಎರಡನೇ ಸುತ್ತಿನ ಸೀಟು ಹಂಚಿಕೆಗೆ ಬಳಸಿಕೊಳ್ಳಲು ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಲಭ್ಯವಿದ್ದ 17,453 ಸೀಟುಗಳಿಗೆ 11,446 ಅರ್ಜಿಗಳು ಸಲ್ಲಿಕೆಯಾಗಿದ್ದವು. 6,174 ಅರ್ಜಿಗಳನ್ನು ಪರಿಗಣಿಸಿ 5,916 ಸೀಟುಗಳನ್ನು ಆರಿಸಿತ್ತು. ವಿವಿಧ ಕಾರಣಗಳಿಂದಾಗಿ 2,915 ಸೀಟುಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸಿಲ್ಲ. ಮೊದಲ ಸುತ್ತಿನಲ್ಲಿ ಸೀಟು ಸಿಕ್ಕಿರುವ ಶಾಲೆಗಳು ಇಷ್ಟವಾಗದಿರುವುದು, ಮನೆಯಿಂದ ದೂರದಲ್ಲಿರುವುದು ಸೇರಿ ಹಲವು ಕಾರಣಗಳಿಂದ ಪಾಲಕರು ತಮ್ಮ ಮಕ್ಕಳಿಗೆ ಶಾಲೆಗೆ ಪ್ರವೇಶ ಕಲ್ಪಿಸಿರುವುದರಿಂದ ಹಿಂದೆ ಸರಿದಿದ್ದಾರೆ.

ಕೆಲವು ವಾರ್ಡ್ ಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಾರದೆ ಶಾಲೆಗಳು ಪಕ್ಕದ ವಾರ್ಡ್ ಗಳಿಗೆ ಸ್ಥಳಾಂತರಗೊಂಡಿದ್ದು, ಪಾಲಕರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಘಟನೆಗಳು ನಡೆದಿವೆ. ಇಂಥ ಪ್ರಕರಣಗಳಲ್ಲಿ ಆಯ್ಕೆಯಾಗಿರುವ ಮಕ್ಕಳಿಗೆ ಎರಡನೇ ಸುತ್ತಿನಲ್ಲಿ ಲಾಟರಿ ಪ್ರಕ್ರಿಯೆಗೆ ಪರಿಗಣಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 1,214 ಸೀಟುಗಳು ಲಭ್ಯವಿದ್ದವು. ಮೊದಲ ಸುತ್ತಿನಲ್ಲಿ 763 ಸೀಟುಗಳು ಆಯ್ಕೆಯಾಗಿದ್ದು, 396 ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಯಾದಗಿರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News