ಬೆಂಗಳೂರು ಹಿಂಸಾಚಾರ: ಪೂರ್ವಾಗ್ರಹ ಪೀಡಿತ ಬಂಧನ ನಿಲ್ಲಿಸಿ

Update: 2020-08-18 06:10 GMT

ಬೆಂಗಳೂರಿನ ಕಾವಲ್ ಬೈರಸಂದ್ರ ಗಲಭೆ ಪ್ರಕರಣದ ಬಳಿಕ ತನಿಖೆಯ ಹೆಸರಿನಲ್ಲಿ ಪೊಲೀಸರು ನಡೆಸುತ್ತಿರುವ ಅಮಾಯಕರ ಬಂಧನಗಳು ಅನಿರೀಕ್ಷಿತವೇನೂ ಅಲ್ಲ. ಈ ಹಿಂದೆ, ಪಾದರಾಯನ ಪುರದಲ್ಲಿ ಕೊರೋನ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ವರ್ತನೆಗಳಿಂದ ಆಕ್ರೋಶಗೊಂಡು ಸಂಘರ್ಷಕ್ಕಿಳಿದ ಜನರನ್ನು ಬಂಧಿಸುವ ನೆಪದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನೇ ಪೊಲೀಸರು ್ನ ಗುರಿ ಮಾಡಿದ್ದರು. ಒಂದು ಧರ್ಮದ ಹೆಸರನ್ನು ಹೊಂದುವುದೇ ಆರೋಪಿಯನ್ನು ಗುರುತಿಸುವುದಕ್ಕಿರುವ ಮಾರ್ಗ ಎಂದು ಕೆಲವು ಪೊಲೀಸರು ಬಲವಾಗಿ ನಂಬಿದ್ದಾರೆ ಮತ್ತು ಅದೇ ಮಾರ್ಗವನ್ನು ಇದೀಗ ಬೆಂಗಳೂರಿನ ಕಾವಲ್ ಬೈರಸಂದ್ರ ಗಲಭೆ ಪ್ರಕರಣದಲ್ಲೂ ಅನುಸರಿಸುತ್ತಿದ್ದಾರೆ. ಪರಿಣಾಮವಾಗಿ ಗಲಭೆ ನಡೆದ ರಾತ್ರಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಯಾರೆಲ್ಲ ಆ ಪರಿಸರದಲ್ಲಿ ಓಡಾಡಿದ್ದಾರೆಯೋ ಅವರನ್ನೆಲ್ಲ ಆರೋಪಿಗಳೆಂದು ಪೊಲೀಸರು ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ. ನಿಜವಾದ ದಾರಿಯಲ್ಲಿ ತನಿಖೆ ನಡೆಸಿ, ಗಲಭೆಯಲ್ಲಿ ಪಾತ್ರವಹಿಸಿದ ದುಷ್ಕರ್ಮಿಗಳನ್ನು ಗುರುತಿಸಿ ಅವರಿಗೆ ಶಿಕ್ಷೆಯಾಗುವಂತೆ ನೋಡಿ, ಮುಂದೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದ ಪೊಲೀಸರು, ತನಿಖೆಯ ಹೆಸರಿನಲ್ಲಿ ‘ಸೇಡಿನ ಮನಸ್ಥಿತಿ’ಯನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರವಿವಾರ 50ಕ್ಕೂ ಅಧಿಕ ತಾಯಂದಿರು ಬೆಂಗಳೂರಿನಲ್ಲಿ ಈ ಕುರಿತಂತೆ ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಅತ್ಯಂತ ಹೇಯವಾದುದು ಮತ್ತು ಅದರಲ್ಲಿ ಭಾಗವಹಿಸಿದ ದುಷ್ಕರ್ಮಿಗಳು ಯಾರೇ ಇರಲಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ನಾಡಿನ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಫೇಸ್‌ಬುಕ್‌ನಲ್ಲಿ ಪ್ರವಾದಿಯನ್ನು ನಿಂದಿಸಿದ ನೀಚನ ಕುರಿತಂತೆ ಪೊಲೀಸರು ಮೊದಲೇ ಕ್ರಮ ತೆಗೆದುಕೊಂಡಿದ್ದರೆ ಬಹುಶಃ ಈ ಹಿಂಸಾಚಾರ ನಡೆಯುತ್ತಿರಲಿಲ್ಲ ಎಂಬ ಮಾತುಗಳಿವೆ. ಅಥವಾ, ಪ್ರತಿಭಟನಾಕಾರರ ಮನವಿಗೆ ತಕ್ಷಣ ಸ್ಪಂದಿಸಿದ್ದರೂ ಜನರ ಆಕ್ರೋಶ ಹಿಂಸಾಚಾರವಾಗಿ ಸ್ಫೋಟವಾಗುತ್ತಿರಲಿಲ್ಲ ಎಂದೂ ಹೇಳಲಾಗುತ್ತ್ತಿದೆ. ಆದರೆ ಈ ಎಲ್ಲ ಕಾರಣಗಳನ್ನು ಮುಂದಿಟ್ಟು ನಡೆದ ಹಿಂಸಾಚಾರವನ್ನು ಸಮರ್ಥಿಸಲಾಗುವುದಿಲ್ಲ. ಯಾರದೋ ತಪ್ಪಿಗೆ ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಿ ನಾಶ ಮಾಡುವುದು, ಪೊಲೀಸರಿಗೆ ಕಲ್ಲು ತೂರಾಟ ಮಾಡುವುದು ಸಮಾಜಘಾತುಕ ಕೆಲಸವಾಗಿದೆ. ನವೀನ್ ಎಂಬ ಸಂಘಪರಿವಾರದ ದುಷ್ಕರ್ಮಿ ಫೇಸ್‌ಬುಕ್‌ನಲ್ಲಿ ಮಹಾತ್ಮರೊಬ್ಬರನ್ನು ಕೆಟ್ಟ ಭಾಷೆ ಬಳಸಿ ಅವಮಾನಿಸಿದರೆ, ಅದನ್ನು ಖಂಡಿಸುವ ಭರದಲ್ಲಿ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುವ ಮೂಲಕ ಪ್ರತಿಭಟನಾಕಾರರೂ ಮಹಾತ್ಮರ ಸಂದೇಶಗಳಿಗೆ ಅವಮಾನಗೈದಿದ್ದಾರೆ. ಆ ಮೂಲಕ ಅವರೂ ನವೀನನ ಜಾಗದಲ್ಲೇ ಬಂದು ಕುಳಿತರು. ನವೀನನಿಗೆ ಹೇಗೆ ಶಿಕ್ಷೆಯಾಗಬೇಕೋ ಹಾಗೆಯೇ ಬೆಂಕಿ ಹಚ್ಚುವಲ್ಲಿ ಪಾತ್ರವಹಿಸಿದ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕು. ಆದರೆ ಇದೇ ಸಂದರ್ಭದಲ್ಲಿ, ಒಬ್ಬನೇ ಒಬ್ಬ ಅಮಾಯಕನಿಗೆ ಈ ಪ್ರಕರಣದಲ್ಲಿ ಶಿಕ್ಷೆಯಾಗದಂತೆ ನೋಡಿಕೊಳ್ಳುವುದೂ ಪೊಲೀಸರ ಹೊಣೆಗಾರಿಕೆಯಾಗಿದೆ.

 ಪ್ರವಾದಿ ನಿಂದನೆಯನ್ನು ವಿರೋಧಿಸಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಒಂದು ಗುಂಪು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲು ಹೋಗಿದೆ. ಈ ಸಂದರ್ಭದಲ್ಲಿ ಆ ಗುಂಪು ಪ್ರತಿಭಟನೆಯನ್ನೂ ನಡೆಸಿದೆ. ಪೊಲೀಸರು ತಕ್ಷಣ ಅವರ ಮನವಿಯನ್ನು ಸ್ವೀಕರಿಸಿ ಸಮಾಧಾನಿಸಿ ಕಳುಹಿಸಿದ್ದರೆ ಪ್ರಕರಣ ಬೆಳೆಯುತ್ತಿರಲಿಲ್ಲ. ಬಹುಶಃ ಪೊಲೀಸರ ಬೇಜವಾಬ್ದಾರಿ ಪರೋಕ್ಷವಾಗಿ ಅಲ್ಲಿ ನೆರೆದ ಯುವಕರನ್ನು ಪ್ರಚೋದಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಗಲಭೆ, ಹಿಂಸಾಚಾರ ಪೊಲೀಸರಿಗೂ ಅಗತ್ಯವಿತ್ತೇನೋ ಎನ್ನುವಷ್ಟು ಹೊಣೆಗೇಡಿತನವನ್ನು ಪೊಲೀಸ್ ಇಲಾಖೆ ಪ್ರದರ್ಶಿಸಿದೆ. ಇದೀಗ ತನಿಖೆಯಲ್ಲೂ ಆ ಬೇಜವಾಬ್ದಾರಿಯನ್ನು ಪೊಲೀಸ್ ಇಲಾಖೆ ಮುಂದುವರಿಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಪ್ರತಿಭಟನೆ ನಡೆಸಿದವರು, ಗಲಭೆ ನಡೆಸಿದ ದುಷ್ಕರ್ಮಿಗಳು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾದಾಕ್ಷಣ ಅವರು ಒಂದು ಧರ್ಮದ ಅಧಿಕೃತ ಪ್ರತಿನಿಧಿಗಳು ಅಲ್ಲ. ಅಂದಿನ ಎಲ್ಲ ನಾಶ ನಷ್ಟಕ್ಕೂ ಅದರಲ್ಲಿ ಭಾಗಿಯಾದವರು ಹೊಣೆಗಾರರೇ ಹೊರತು, ಉಳಿದವರಲ್ಲ. ಬೆಂಗಳೂರು ದುಡಿಮೆಯ ನಗರ. ಬೆಳಗ್ಗೆ ತರಕಾರಿ, ದಿನಸಿ ಮಾರ್ಕೆಟ್‌ಗಳು ತೆರೆದಿರಬೇಕಾದರೆ ರಾತ್ರಿ ಒಂದಿಷ್ಟು ಕಾರ್ಮಿಕರು ತಮ್ಮ ನಿದ್ದೆಯನ್ನು ಒತ್ತೆಯಿಡಬೇಕಾಗುತ್ತದೆ. ತಮ್ಮ ತಮ್ಮ ದಿನದ ಕಾಯಕಕ್ಕೆಂದು ರಸ್ತೆಗಿಳಿದವರನ್ನೂ, ಅವರು ಒಂದು ನಿರ್ದಿಷ್ಟ ಧರ್ಮದ ಹೆಸರನ್ನು ಹೊಂದಿದ್ದರೆ ಯಾವ ವಿಚಾರಣೆಯೂ ಇಲ್ಲದೆ ಬಂಧಿಸುವುದು ಪೂರ್ವಾಗ್ರಹ ಪೀಡಿತವಾಗುತ್ತದೆ.

ಮಹಿಳೆಯೊಬ್ಬರು ಆರೋಪಿಸುವಂತೆ, ಅವರ ಒಬ್ಬ ಮಗ ತರಕಾರಿ ಅಂಗಡಿಯನ್ನು ಹೊಂದಿದ್ದಾನೆ. ಮರುದಿನ ಮಾರಾಟ ಮಾಡುವುದಕ್ಕಾಗಿ ರಾತ್ರಿ ಕೊತ್ತಂಬರಿ ಸೊಪ್ಪು ತರುವುದಕ್ಕೆ ಹೋಗಿದ್ದಾನೆ. ಸಾಧಾರಣವಾಗಿ, ಮಾರ್ಕೆಟ್‌ಗಳಿಗೆ ಬೇಕಾದ ತರಕಾರಿ ಇತ್ಯಾದಿಗಳನ್ನು ಸಿದ್ಧ ಮಾಡುವ ಕೆಲಸ ಮಧ್ಯರಾತ್ರಿಯಿಂದಲೇ ನಡೆಯುತ್ತದೆ. ಅವರ ಆ ಶ್ರಮದ ಫಲವಾಗಿಯೇ ಮರುದಿನ ಬೆಳ್ಳಂಬೆಳಗ್ಗೆ ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ನಾವು ಕೊಳ್ಳುವುದಕ್ಕೆ ಸಾಧ್ಯವಾಗುವುದು. ರಾತ್ರಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನೂ ಪೊಲೀಸರು ಗಲಭೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಬಂಧಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಂತಹ ಬಂಧನಗಳ ಮೂಲಕ ಗಲಭೆಗೆ ಸಂಬಂಧಿಸಿ ಪೊಲೀಸರು ಒಂದು ಸಮುದಾಯವನ್ನೇ ಬಲಿಪಶು ಮಾಡಲು ಯತ್ನಿಸುತ್ತಿದ್ದಾರೆ. ಒಂದನ್ನು ನೆನಪಿಟ್ಟುಕೊಳ್ಳಬೇಕು. ಯಾವುದೇ ಗಲಭೆ ನಡೆದಾಗ ಗಲಭೆಯಲ್ಲಿ ಭಾಗವಹಿಸಿದವರನ್ನು ಕೈ ಬಿಟ್ಟು ಅಮಾಯಕರನ್ನು ಹುಡುಕಿ ಬಂಧಿಸಿದರೆ ಅದರಿಂದ ಸಮಾಜಕ್ಕೆ ಇನ್ನಷ್ಟು ಹಾನಿಯಾಗುತ್ತದೆ. ಒಂದು, ದುಷ್ಕರ್ಮಿಗಳು ಶಿಕ್ಷೆಯಿಂದ ಸುಲಭವಾಗಿ ಪಾರಾಗುತ್ತಾರೆ. ಅದು ಭವಿಷ್ಯದಲ್ಲಿ ಇನ್ನೊಂದು ಗಲಭೆ ನಡೆಸುವುದಕ್ಕೆ ಅವರಿಗೆ ಪರವಾನಿಗೆ ಕೊಟ್ಟಂತೆಯೇ ಸರಿ.

ಗಲಭೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಅಮಾಯಕರನ್ನು ಬಂಧಿಸಿದರೆ, ವ್ಯವಸ್ಥೆಯ ಕುರಿತಂತೆ ಅಮಾಯಕರಲ್ಲಿ ಅನಗತ್ಯವಾಗಿ ಅಸಹನೆ ಬೆಳೆಯುತ್ತದೆ. ಅವನ ಕುಟುಂಬ, ಬದುಕಿನ ಮೇಲೂ ಬೀರುವ ದುಷ್ಪರಿಣಾಮ, ಆತನನ್ನು ಒಬ್ಬ ದುಷ್ಕರ್ಮಿಯಾಗಿ ಬಳಿಕ ಪರಿವರ್ತನೆ ಮಾಡಬಹುದು. ಇಂತಹವರನ್ನು ರಾಜಕೀಯ ದುಷ್ಟ ಶಕ್ತಿಗಳು ತಮ್ಮ ದುರುದ್ದೇಶಗಳಿಗೆ ಬಳಸುವ ಸಾಧ್ಯತೆಗಳಿವೆ. ಬೇಜವಾಬ್ದಾರಿ ತನಿಖೆ, ಬಂಧನಗಳು ಸಮಾಜವನ್ನು ಇನ್ನಷ್ಟು ಕೆಡಿಸಿ ಹಾಕುತ್ತದೆಯೇ ಹೊರತು, ಶಾಂತಿ, ನೆಮ್ಮದಿಯನ್ನು ಸ್ಥಾಪಿಸುವುದಿಲ್ಲ. ಆದುದರಿಂದ ಪೊಲೀಸರು ತಕ್ಷಣ ಅಮಾಯಕರೆಂದು ಗುರುತಿಸಲ್ಪಟ್ಟ ತರುಣರನ್ನು ಬಿಡುಗಡೆ ಮಾಡಬೇಕು. ಹಾಗೆಯೇ, ಗಲಭೆಯಲ್ಲಿ ನೇರವಾಗಿ ಪಾತ್ರವಹಿಸಿದ ದುಷ್ಕರ್ಮಿಗಳನ್ನು, ಇದಕ್ಕೆ ಸಂಚು ಹೂಡಿದ ರಾಜಕೀಯ ಶಕ್ತಿಗಳನ್ನು ಗುರುತಿಸಿ ಅವರನ್ನು ಶಿಕ್ಷಿಸುವ ಕೆಲಸ ಮಾಡಬೇಕು. ಇದೇ ಸಂದರ್ಭದಲ್ಲಿ, ಸಾರ್ವಜನಿಕ ಸೊತ್ತುಗಳಿಗೆ ಉಂಟಾಗಿರುವ ಹಾನಿಯ ಮೊತ್ತವನ್ನು ಗಲಭೆಕೋರರಿಂದ ವಸೂಲಿ ಮಾಡುವ ನಿರ್ಧಾರ ಸ್ವಾಗತಾರ್ಹ. ಜೊತೆಗೆ, ಪ್ರವಾದಿ ನಿಂದನೆಯ ಮೂಲಕ ಗಲಭೆಗೆ ಪ್ರಚೋದಿಸಿದ ದುಷ್ಕರ್ಮಿಗಳಿಂದ, ತಕ್ಷಣ ಸ್ಪಂದಿಸದೆ ಬೇಜವಾಬ್ದಾರಿ ಪ್ರದರ್ಶಿಸಿ ಗಲಭೆಗೆ ಆಸ್ಪದಕೊಟ್ಟ ಪೊಲೀಸರಿಂದಲೂ ಶೇಕಡವಾರು ಮೊತ್ತವನ್ನು ವಸೂಲಿ ಮಾಡಿದರೆ, ಭವಿಷ್ಯದಲ್ಲಿ ನಾಡಿನಲ್ಲಿ ಯಾವ ಗಲಭೆಗಳೂ ನಡೆಯಲಾರದೇನೋ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News