ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಘೋಷಣೆಗೆ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧ

Update: 2020-08-18 18:20 GMT

ಚಿಕ್ಕಮಗಳೂರು, ಆ.18: ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆಯಿಂದಾಗಿ ಆ ಭಾಗದ ಹಲವಾರು ಹಳ್ಳಿಗಳ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ಅಲ್ಲಿನ ನಿವಾಸಿಗಳಲ್ಲಿ ಆತಂಕವಿದೆ. ಜನ-ಜಾನುವಾರು ಮುಂದಿನ ದಿನಗಳಲ್ಲಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಹಲವು ಅರಣ್ಯಸಂರಕ್ಷಣಾ ಯೋಜನೆಗಳ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೇಲೆ ಸದಾ ತೂಗು ಕತ್ತಿ ನೇತಾಡುತ್ತಿದೆ. ಯೋಜನೆ ಜಾರಿಯಿಂದಾಗಿ ಅಲ್ಲಿನ ಜನರ ಬದುಕು ಆತಂಕಕ್ಕೆ ತಳ್ಳಲ್ಪಡುವುದರಿಂದ ಸಂರಕ್ಷಿತ ಅರಣ್ಯ ಘೋಷಣೆಯನ್ನು ಕೈಬಿಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರುಗಳು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. 

ನಗರದ ತಾಲೂಕು ಕಚೇರಿಯಲ್ಲಿ ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿವಿಧ ಮುಖಂಡರುಗಳ ಸಭೆಯಲ್ಲಿ ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ ಯೋಜನೆ ಸಂಬಂಧ ಅಧಿಕಾರಿಗಳು ನೀಡಿದ ಯೋಜನೆಯ ಉದ್ದೇಶ, ವ್ಯಾಪ್ತಿಯ ಬಗೆಗಿನ ಮಾಹಿತಿ ಆಲಿಸಿದ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು, ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬೋಜೇಗೌಡ, ಸಂರಕ್ಷಿತ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿರುವ ಜನರ ಆತಂಕವನ್ನು ನಿವಾರಿಸುವುದು ಹಾಗೂ ಸ್ಥಳೀಯ ನಿವಾಸಿಗಳ ಒತ್ತಾಯಗಳನ್ನು ಈಡೇರಿಸಲು ಪ್ರಮುಖ ಆದ್ಯತೆ ನೀಡಬೇಕು. ಸಂರಕ್ಷಿತ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿರುವ ಜನರ ಹಿತ ಕಾಪಾಡುವುದು, ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಮಾಹಿತಿಗಳನ್ನು ಪಾರದರ್ಶಕವಾಗಿ ಜನರಿಗೆ ಒದಗಿಸುವ ಕಾರ್ಯ ಮಾಡಬೇಕು. ಯಾವ್ಯಾವ ಗ್ರಾಮಗಳ ಜನರು ನಮ್ಮ ಪ್ರದೇಶವನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದಾರೆ ಮುಂತಾದ ಜನರ ಬೇಡಿಕೆಗಳಿಗೆ ಮೊದಲು ಆದ್ಯತೆ ನೀಡಿ. ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಚಿಕ್ಕಮಗಳೂರು ಉಪಸಂರಕ್ಷಣಾಧಿಕಾರಿ ಜಗದೀಶ್, ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಭವಿಷ್ಯದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಹಾಗೂ ಇತರ ಸರಕಾರಿ ಉದ್ದೇಶಗಳಿಗೆ ಬೇಕಾಗುವ ಕಂದಾಯ ಭೂಮಿ ಇಲ್ಲವಾಗುತ್ತದೆ ಎಂಬ ಆಕ್ಷೇಪಣೆ ಬಂದಿದ್ದರಿಂದ ನಮೂನೆ 50, 53, 57 ಹಾಗೂ 94ಸಿಯಲ್ಲಿ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಹಾಗೂ ಅದರ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿಯೊಂದಿಗೆ ಕಂದಾಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಅರಣ್ಯ, ಕಂದಾಯ ಭೂಮಾಪನಾ ಇಲಾಖೆಯವರು ದಾಖಲೆಗಳನ್ನು ಜಂಟಿಯಾಗಿ ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದು, ಸರ್ವೆ  ಕಾರ್ಯ ಮುಗಿದಿದೆ. 2017, ನ.21ರಂದು ವೈಲ್ಡ್ ಕ್ಯಾಟ್-ಸಿ ಸಂಸ್ಥೆ ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆಗೆ ಒತ್ತಾಯಿಸಿತ್ತು. ಡಿ.12ರಂದು ಒಟ್ಟು 20 ಗ್ರಾಮಗಳ 14183.32 ಎಕರೆ ಪ್ರದೇಶವನ್ನು ಗುರುತಿಸಿ ಉಪಅರಣ್ಯ ಸಂರಕ್ಷಣಾಧಿಕಾರಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ ಎಂದರು.

2020 ಜೂನ್ 15ರಂದು ಹಾಗೂ ಅದರ ಹಿಂದಿನ ದಿನಗಳಲ್ಲಿ ನಡೆದ ಸಭೆಗಳಲ್ಲಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ ಜಂಟಿ ಮೋಜಣಿ ಕೈಗೊಳ್ಳಲು ಕಂದಾಯ ಇಲಾಖೆ, ಭೂಮಾಪನಾ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಗ್ರಾಮವಾರು ಸರ್ವೆ ನಂಬರ್ ಗಳನ್ನು ಸೇರಿ ಸಲು ಹಾಗೂ ಒತ್ತುವರಿ ಪ್ರದೇಶಗಳನ್ನು ಪರಿಶೀಲಿಸಿ ಕೈಬಿಡಲು ಮತ್ತು ಅವುಗಳ ಮಂಜೂರಾತಿ ವಿವರಗಳನ್ನು ಕಂದಾಯ ಇಲಾಖೆಯು ಒದಗಿಸಲು ಸಭೆ ಸೇರಿ ನಿರ್ಣಯಿಸಲಾಗಿತ್ತು. ಯಾವುದೇ ಕೃಷಿಗೆ ಉಪ ಯುಕ್ತವಾದ ಭೂಮಿಯನ್ನು ಯೋಜನೆ ಸೇರ್ಪಡೆಗೊಳಿಸಿಲ್ಲ. ಸಾರ್ವಜನಿಕರಿಂದ ಈ ಯೋಜನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಭೆಯಲ್ಲಿ ಡಿಎಫ್‍ಒ ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಯೋಜನಾ ವ್ಯಾಪ್ತಿಯ ಪ್ರದೇಶದ ಜನರ ಪರವಾಗಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರಾದ ಜೆಡಿಎಸ್ ಮುಖಂಡ ಎಚ್.ಎಚ್.ದೇವರಾಜ್, ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ಕೆ.ಟಿ.ರಾಧಾಕೃಷ್ಣ, ಬಿಜೆಪಿ ಜಾಗರ ಹೋಬಳಿ ಅಧ್ಯಕ್ಷ ರವಿ, ರೇಣುಕಾರಾಧ್ಯ ಮುಂತಾದವರು, ಈ ಯೋಜನೆ ಜಾರಿಗೊಳಿಸುವುದು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜಿಲ್ಲೆಗೆ ಯಾವುದೇ ಉಪಯೋಗವಿಲ್ಲದ ಹಲವಾರು ಯೋಜನೆಗಳಿಗೆ ಬದಲಿಯಾಗಿ ಜಿಲ್ಲೆಯ ಭೂಮಿಯನ್ನು ಈಗಾಗಲೇ ಅರಣ್ಯ ಇಲಾಖೆಗೆ ಮೀಸಲಿಡಲಾಗಿದೆ. ಸುಮಾರು 59ಕ್ಕಿಂತ ಹೆಚ್ಚು ಗ್ರಾಮಗಳು ಈ ಯೋಜನೆಯಿಂದ ತೊಂದರೆಗೆ ಒಳಪಡುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನೂರಾರು ಎಕರೆ ಜಾಗ ಒತ್ತುವರಿ ಮಾಡಿ ತೋಟ ಮಾಡಿರುವವರಿಗೆ ಹಣವಂತರಿಗೆ ಯಾವುದೇ ಕಾನೂನುಗಳು ಅಡ್ಡಿಯಾಗುವುದಿಲ್ಲ. 2-3 ಎಕರೆ ತೋಟ ಹೊಂದಿರುವ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಹಕ್ಕು ಪತ್ರ ಪಡೆಯುವುದು ಕೂಡಾ ಕಷ್ಟಸಾಧ್ಯವಾಗುತ್ತಿದೆ ಎಂದರು.

ಒಂದೇ ಒಂದು ಇಂಚು ಭೂಮಿಯನ್ನು ಈ ಯೋಜನೆಗಾಗಿ ಬಿಟ್ಟುಕೊಡಲು ನಾವು ತಯಾರಿಲ್ಲ. ಹಿಡುವಳಿ ಜಾಗದಲ್ಲೇ ನಿರ್ಭೀತವಾಗಿ ರೈತರು ಕೃಷಿ ಚಟುವಟಿಕೆಗಳು ಮಾಡಲು ಸಾಧ್ಯವಾಗದ ಪರಿಸ್ಥಿತಿಯ ನಡುವೆ ಮತ್ತೊಂದು ಸಂರಕ್ಷಿತ ಮೀಸಲು ಯೋಜನೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಷಯವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು ಮತ್ತು ಸರಕಾರದ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಯೋಜನಾ ವ್ಯಾಪ್ತಿಯ ಜನರು ಮತ್ತು ಮುಖಂಡರುಗಳು ಒತ್ತಾಯಿಸಿದರು.

ಸಿ.ಟಿ. ರವಿ, ಗ್ರಾಪಂ, ತಾ.ಪಂಚಾಯತ್‍ಗಳಿಂದ ಶಿಫಾರಸು ಪತ್ರ
2017, ಎ.27ರಂದು ಮುಳ್ಳಯ್ಯನಗಿರಿ ಮೀಸಲು ಪ್ರದೇಶವೆಂದು ಘೋಷಿಸಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸರ ನಾಶದಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಬಹುದೆಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಶಿಫಾರಸು ಪತ್ರ ಬರೆದಿದ್ದೆಂದು ಸಭೆಯಲ್ಲಿ ಮಾಹಿತಿ ನೀಡಿದ ಚಿಕ್ಕಮಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಈ ಸಂಬಂಧ ಕರಡು ಅಧಿಸೂಚನೆಯ ಪ್ರತಿಯಯನ್ನು ತಯಾರಿಸಿ 20 ಗ್ರಾಮಗಳ 98 ಸರ್ವೆ ನಂಬರ್ ಗಳಿಂದ 13351 ಎಕರೆ ಪ್ರದೇಶವನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶವನ್ನಾಗಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಥಳೀಯ ಗ್ರಾಮ ಪಂಚಾಯತ್‍ಗಳಿಂದ ಶಿಫಾರಸು ಪತ್ರಗಳನ್ನು ಪಡೆಯಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ 11ನೇ ರಾಜ್ಯಮಟ್ಟದ ವನ್ಯಜೀವಿ ಮಂಡಳಿ ಸಭೆಯ ನಡವಳಿಯಲ್ಲಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶವೆಂದು ಘೋಷಿಸಲು ತಾತ್ವಿಕ ಒಪ್ಪಿಗೆ ನೀಡಿ ಪ್ರಸ್ತಾವನೆ ಸಲ್ಲಿಸಲು 2019ರ ಜ.9ರಂದು ಸೂಚಿಸಲಾಗಿತ್ತು. ಚಿಕ್ಕಮಗಳೂರು ತಾಲೂಕು ಪಂಚಾಯತ್ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯತ್‍ಗಳ ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಆಶ್ರಯ ನಿವೇಶನಕ್ಕೆ ಜಮೀನನ್ನು ಮೀಸಲಿಟ್ಟು ಮುಳ್ಳಯ್ಯನಗಿರಿ ಮೀಸಲು ಅರಣ್ಯವೆಂದು ಘೋಷಿಸಲು ಒಪ್ಪಿಗೆ ಸೂಚಿಸಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

''ಡೋಂಗಿ ಪರಿಸರವಾದಿಗಳ ಕುತಂತ್ರ; ಜೈಲಿಗೆ ಹೋಗಲೂ ಸಿದ್ಧ"
ಕೆಲವು ಅಧಿಕಾರಿಗಳ ನಡೆ ಹಾಗೂ ಸ್ವಯಂ ಸೇವಾ ಸಂಸ್ಥೆ ಹೆಸರಿನಲ್ಲಿ ಕೆಲವು ಪರಿಸರವಾದಿಗಳು ನಡೆಸುವ ಹುನ್ನಾರಕ್ಕೆ ಈ ರೀತಿ ಸಮಸ್ಯೆಗಳು ಆಗುತ್ತಿವೆ. ನಾವು ಜೈಲಿಗೆ ಹೋಗಲು ಸಿದ್ಧ ಆದರೆ ಯೋಜನೆ ಜಾರಿಗೆ ತರಲು ಬಿಡುವುದಿಲ್ಲ. ಡೋಂಗಿ ಪರಿಸರವಾದದ ಹೆಸರಿನಲ್ಲಿ ನಡೆಸಿರುವ ಕುತಂತ್ರಗಳಿಂದ ಈ ರೀತಿಯಾಗುತ್ತಿದೆ. ಈ ಯೋಜನಾ ವ್ಯಾಪ್ತಿಗೆ ಗುರುತಿಸಿರುವ ಅಷ್ಟೂ ಭೂಮಿ ಕೃಷಿಗೆ ಉಪಯುಕ್ತವಾದ ಜಾಗವಾಗಿದೆ. ಸಾವಿರಾರು ಜನರು ಬದುಕಿಗಾಗಿ ವಿವಿಧ ಯೋಜನೆಯಡಿ ಒಂದಿಷ್ಟು ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿಸಲ್ಲಿಸಿ ಕಾಯುತ್ತಿದ್ದಾರೆ. 20x30 ನಿವೇಶನವನ್ನು ಮನೆ ನಿರ್ಮಿಸಲು ಕೊಡಿ ಎಂದು ಅರ್ಜಿ ಹಾಕಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಯೋಜನೆಯನ್ನು ನಾವೆಲ್ಲರೂ ವಿರೋಧಿಸುತ್ತೇವೆ.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News