'ಕೃಷಿ ಬೆಳೆ ಸಮೀಕ್ಷೆ' ಅವಧಿ ವಿಸ್ತರಣೆಗೆ ಸಂಪುಟ ನಿರ್ಧಾರ: ಸಚಿವ ಮಾಧುಸ್ವಾಮಿ

Update: 2020-08-20 17:15 GMT

ಬೆಂಗಳೂರು, ಆ. 20: ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸರಕಾರ `ಕೃಷಿ ಬೆಳೆ ಸಮೀಕ್ಷೆ' ನಡೆಸಲು ಮುಂದಾಗಿದ್ದು, ಈಗಾಗಲೇ ನಿಗದಿಯಾಗಿರುವಂತೆ ಬೆಳೆ ಸಮೀಕ್ಷೆಗೆ ಇನ್ನೂ ಒಂದು ತಿಂಗಳು ಅವಧಿ ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 24ರ ಒಳಗಾಗಿ ಬೆಳೆ ಸಮೀಕ್ಷೆ ನಡೆಯಬೇಕಿತ್ತು. ಆದರೆ, ಬೇರೆ-ಬೇರೆ ಕಾರಣಗಳಿಂದಾಗಿ ವಿಳಂಬವಾಗಿತ್ತು. ಇದೀಗ ರೈತರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೂ ಸೆ.24ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಬೆಳೆ ಸಮೀಕ್ಷೆಯಿಂದ ರೈತರಿಗೆ ಬೆಳೆ ಪರಿಹಾರ ಕೊಡುವ ಸದುದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ರೈತರು ತಾವು ಬೆಳೆದ ಬೆಳೆಯ ಮುಂದೆ ನಿಂತು ಫೋಟೊ ಕಳಿಸುವ ಕಾರ್ಯಕ್ರಮ ಇದಾಗಿದೆ. ರೈತರು ಈ ಹಿಂದೆ ಒಂದೇ ಬೆಳೆಗಳನ್ನು ಮೊಬೈಲ್‍ಗೆ ಅಪ್ಲೋಡ್ ಮಾಡುತ್ತಿದ್ದರು. ಇವರಿಂದ ಸಾಕಷ್ಟು ಗೊಂದಲ ಉಂಟಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿಯೇ ಸೆ.24ರ ವರೆಗೆ ಬೆಳೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡಿದ್ದೇವೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಪ್ರತಿ ಬೆಳೆ ಸಮೀಕ್ಷೆಯನ್ನು ರೈತರೇ ನಡೆಸಬೇಕು. ಬೆಳೆಗಳ ಫೋಟೊ ತೆಗೆಸಿ ಸರಕಾರಕ್ಕೆ ಮೊಬೈಲ್ ಆಪ್ ಮೂಲಕ ವರದಿ ನೀಡಬೇಕು. ಬೆಳೆ ಹಾನಿಯಾದರೆ ಸರಕಾರದಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಬೆಂಬಲ ಬೆಲೆ ಯೋಜನೆಯಡಿ ರೈತರ ಕೃಷಿ ಉತ್ಪನ್ನಗಳ ಖರೀದಿ ಸೇರಿದಂತೆ ಇನ್ನಿತರ ವಿಚಾರಗಳಿಗೂ ಇದರಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಪ್ರಮುಖ ನಿರ್ಣಯಗಳು: ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಯ ಶಾಲೆ ವಿದ್ಯಾರ್ಥಿಗಳಿಗೆ ಊಟೋಪಚಾರ, ಸೌಲಭ್ಯಗಳ ಕಿಟ್, ಶೂ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು 65.48 ಕೋಟಿ ರೂ.ಅನುದಾನ ಒದಿಗಸಲು ತೀರ್ಮಾನಿಸಲಾಗಿದೆ.

ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್ ತಿಂಗಳ ವರೆಗೆ ಮುಂದೂಡಲಾಗಿದ್ದು, ಇತ್ತೀಚೆಗೆ ಜಾರಿ ಮಾಡಿದ್ದ ಅಧ್ಯಾದೇಶಕ್ಕೆ ಸಂಪುಟ ಅನುಮೋದನೆ ಕೊಟ್ಟಿದೆ.

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದ್ದ ಗಲಾಟೆ ಸಂಬಂಧದ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 64 ಮೊಕದ್ದಮೆಗಳನ್ನು ಹಿಂಪಡೆಯಲು ಸಂಪುಟ ಸಮ್ಮತಿಸಿದೆ. ರೈತರ ಪ್ರಕರಣ, ವೈಯಕ್ತಿಕ ಪ್ರಕರಣ ಸೇರಿದಂತೆ ಒಟ್ಟು 64 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ರಾಜ್ಯದ 2,683 ಕೊಳಚೆ ಪ್ರದೇಶಗಳ ಪೈಕಿ 2,615 ಘೋಷಿತ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳಿಗೆ 600 ಚದರಡಿಯಿಂದ 1,200 ಚದರಡಿಯ ವರೆಗಿನ ವಿಸ್ತೀರ್ಣದಲ್ಲಿರುವ ಕೊಳಚೆಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸಂಪುಟ ಸಮ್ಮತಿಸಿದೆ.

ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಂಪೆನಿಯ ಶೇರು ಬಂಡವಾಳವನ್ನು 1 ಸಾವಿರ ಕೋಟಿ ರೂ. ಗಳಿಂದ 1,250 ಕೋಟಿ ರೂ.ಗೆ ಹೆಚ್ಚಳ, ಅತೃವೃಷ್ಟಿಯಿಂದಾಗಿ ಹಾನಿಗೊಳಗಾದ ಕೊಡುಗಿನಲ್ಲಿ ಪುನರ್ ವಸತಿ ಕಲ್ಪಿಸಿರುವ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು 15.25 ಕೋಟಿ ರೂ. ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಭದ್ರಾವತಿ, ಶಿವಮೊಗ್ಗ ರೈಲ್ವೆ ನಿಲ್ದಾಣಗಳ ನಡುವೆ ಸೇತುವೆ ನಿರ್ಮಾಣ ಮಾಡಲು 13.45 ಕೋಟಿ ರೂ., ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಿನಿಸೌಧ ನಿರ್ಮಾಣಕ್ಕೆ 16.5 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಬಳಕೆಯಾಗದ `ಬಿ' ಕರಾಬು ಜಮೀನನ್ನು 4:1 ಅನುಪಾತದಲ್ಲಿ ಗುತ್ತಿಗೆ ಪಡೆದವರಿಗೆ ಮಾರಾಟ ಮಾಡುವ ಮಹತ್ವದ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ ಎಂದು ಅವರು ತಿಳಿಸಿದರು.

ವಿದೇಯಕಗಳು ಹಿಂದಕ್ಕೆ: ಕರ್ನಾಟಕ ಕಲ್ಲುಪುಡಿ ಮಾಡುವ ಘಟಕ(ಕ್ರಷರ್‍ಗಳ)ಗಳ ನಿಯಂತ್ರಣ ತಿದ್ದುಪಡಿ, ಕೈಗಾರಿಕೆ(ಸೌಲಭ್ಯ) ತಿದ್ದುಪಡಿ, ಭೂ ಮಂಜೂರಾತಿ ತಿದ್ದುಪಡಿ, ಭೂ ಕಬಳಿಕೆ ನಿಷೇಧ ತಿದ್ದುಪಡಿ, ಬಿಡಿಎ (ನಿವೇಶನ ಹಂಚಿಕೆ) ತಿದ್ದುಪಡಿ ಹಾಗೂ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಸೇರಿದಂತೆ ಆರು ವಿಧೇಯಕಗಳನ್ನು ಹಿಂಪಡೆಯಲು ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಈ ಮೇಲ್ಕಂಡ ಕಾಯ್ದೆಗಳ ತಿದ್ದುಪಡಿ ಸಂಬಂಧ `ಅಧ್ಯಾದೇಶ' ಹೊರಡಿಸಿದ್ದು, ಮೇಲ್ಕಂಡ ವಿಧೇಯಕಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲು ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News