ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಪರಿಣಾಮಗಳು

Update: 2020-08-20 17:36 GMT

2020ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಭೂ ಸುಧಾರಣೆಯ ಮಹದುದ್ದೇಶವನ್ನೇ ಬುಡಮೇಲು ಮಾಡಿದೆ. ವಿಶೇಷವೆಂದರೆ ಕಾಯ್ದೆಯ ಹೆಸರಿನಲ್ಲೇ ‘ಸುಧಾರಣೆ’ ಎಂಬ ಪದ ಇದೆ. ಆದ್ದರಿಂದ ಕಾಯ್ದೆ ಅಡಿಯಲ್ಲಿ ಆಗಬಹುದಾದ ಎಲ್ಲಾ ಬದಲಾವಣೆಗಳೂ ತಿದ್ದುಪಡಿಯ ರೂಪದಲ್ಲಿ ಸುಧಾರಣೆ ದಿಕ್ಕಿನಲ್ಲೇ ಇರಬೇಕು. ಸಂವಿಧಾನದ ಆಶಯ ಹಾಗೂ ಕಾಯ್ದೆಯ ಉದ್ದೇಶ ಉಲ್ಲಂಘನೆಯಾಗಬಾರದು. ಪ್ರಸ್ತುತ ತಿದ್ದುಪಡಿಯ ಪರಿಣಾಮಗಳನ್ನು ಅವಲೋಕಿಸಿದಾಗ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಯ ಪ್ರಾಮುಖ್ಯತೆಯೇ ಹೊರಟು ಹೋದಂತೆ ಭಾಸವಾಗುತ್ತಿದೆ. 


‘‘ಯಾವ ರಾಷ್ಟ್ರವೂ ಭೂ ಸುಧಾರಣಾ ನೀತಿಯಿಂದ ತಪ್ಪಿಸಿಕೊಳ್ಳಲಾಗದು. ಏನಿದ್ದರೂ ಯಾವ ಮಾರ್ಗದಲ್ಲಿ ಅದನ್ನು ಕಾರ್ಯರೂಪಕ್ಕೆ ತರಬಹುದು ಎನ್ನುವುದನ್ನಷ್ಟೇ ತೀರ್ಮಾನಿಸಬಹುದು. ಆ ಮಾರ್ಗಗಳೆಂದರೆ: ರಕ್ತಕ್ರಾಂತಿ ಇಲ್ಲವೇ ತೆರಿಗೆ ಪದ್ಧತಿ’’ ಎಂದು 1959ರಲ್ಲಿ ಅಮೆರಿಕದ ಪ್ರಖ್ಯಾತ ಕಾದಂಬರಿಕಾರ ಜೇಮ್ಸ್ ಎ.ಮಿಷನರ್ ತನ್ನ ‘ಹವಾಯಿ’ ಕಾದಂಬರಿ ಮೂಲಕ ಅಭಿಪ್ರಾಯ ಪಡುತ್ತಾನೆ. ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿ ಭೂ ಸುಧಾರಣಾ ಕಾಯ್ದೆ 1961ರಲ್ಲಿ ರೂಪುಗೊಂಡು 02.10.1965ರಿಂದ ಜಾರಿಗೊಳಿಸಲಾಯಿತು. ಈ ಕಾಯ್ದೆಯ ಮುಖ್ಯ ಉದ್ದೇಶ ಕೃಷಿ ಜಮೀನನ್ನು ಉಳಿಮೆ ಮಾಡಿದ ಗೇಣಿದಾರರಿಗೆ ಮಾಲಕತ್ವ ನಿಗದಿಮಾಡುವುದು, ಜಮೀನಿನ ಮಾಲಕತ್ವದ ಮಿತಿ ನಿಗದಿ ಮಾಡುವುದು ಹಾಗೂ ಕಾಯ್ದೆಗೆ ಒಳಪಡುವ ಇತರ ವಿಷಯಗಳಾಗಿದ್ದವು. 2020ರ ತಿದ್ದುಪಡಿ ಭೂ ಸುಧಾರಣಾ ಕಾಯ್ದೆಗೆ ಮೊದಲನೆಯದಲ್ಲ. 1961ರ ಕಾಯ್ದೆಗೆ ಕರ್ನಾಟಕ ಕಾಯ್ದೆ 1/1974, ಕರ್ನಾಟಕ ಕಾಯ್ದೆ 31/1995 ಮತ್ತು ಕರ್ನಾಟಕ ಕಾಯ್ದೆ 8/1996 ತಿದ್ದುಪಡಿಗಳ ಮೂಲಕ ಮೂಲಕಾಯ್ದೆಯಲ್ಲಿದ್ದ ಕೆಲವು ನ್ಯೂನತೆಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ಕಾಯ್ದೆ 31/1995ರ ಮೂಲಕ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೀನು ಸಾಕಣೆಗೆ ಒಳಪಟ್ಟ ಜಮೀನುಗಳನ್ನು ಗೇಣಿ ಹಕ್ಕು ನೀಡುವುದರಿಂದ ಹೊರಗಿಡಲಾಯಿತು, ಭೂನ್ಯಾಯಮಂಡಳಿಗೆ ತನ್ನ ಆದೇಶದಲ್ಲಿ ತಪ್ಪಾಗಿದ್ದ ಭೂಮಿಯ ಅಳತೆಯನ್ನು ಸರಿಪಡಿಸುವ ಹಕ್ಕು ನೀಡಲಾಯಿತು ಮತ್ತು ವ್ಯವಸಾಯದ ಜಮೀನು ಗೇಣಿದಾರ ಹೊಂದುವ ಮಿತಿಯನ್ನು 40 ಯೂನಿಟ್‌ಗಳಿಗೆ ನಿಗದಿ ಪಡಿಸಲಾಯಿತು. ಜೊತೆಗೆ ವ್ಯವಸಾಯದ ಜಮೀನನ್ನು ಖರೀದಿಸುವವರ ವ್ಯವಸಾಯೇತರ ಆದಾಯದ ಮಿತಿಯನ್ನು ಕಲಂ 79ಎ ಅಡಿ ರೂ. 50 ಸಾವಿರದಿಂದ ರೂ. 2 ಲಕ್ಷಕ್ಕೆ ಏರಿಸಲಾಯಿತು.

ಈ ಬದಲಾವಣೆಗಳನ್ನು ಪೂರ್ವಾನ್ವಯವಾಗಿ ಮಾಡಲಿಲ್ಲ. ಬದಲಾಗಿ, ‘ತಿದ್ದುಪಡಿಗಳು ಜಾರಿಗೆ ಬಂದಂದಿನಿಂದ’ ಎಂದು ತಿದ್ದುಪಡಿ ಕಾಯ್ದೆ ಸ್ಪಷ್ಟಪಡಿಸಿತು. ಇದಾದನಂತರ 1961ರ ಭೂ ಸುಧಾರಣಾ ಕಾಯ್ದೆ ಬಹಳ ಪ್ರಧಾನವಾದ ಬದಲಾವಣೆಗಳನ್ನು ಕರ್ನಾಟಕ ಕಾಯ್ದೆ 1/1974ರ ತಿದ್ದುಪಡಿ ಮೂಲಕ 1.3.1974ರಿಂದ ಜಾರಿಗೊಳಿಸಲಾಯಿತು. 1974ರ ತಿದ್ದುಪಡಿ ಜಮೀನ್ದಾರಿ ಪದ್ಧತಿಯನ್ನೇ ಅಂತ್ಯಗೊಳಿಸಿತು. ಭೂಮಿ ಮಾಲಕತ್ವ, ಯಾರಿಗೆ ನೀಡಬೇಕು ಎಂಬ ಪ್ರಶ್ನೆ ಬಂದಾಗ, ಭೂಮಾಲಕ ಯಾರೇ ಇದ್ದರೂ, ಭೂಮಿಯನ್ನು ಉಳುವುದು ಮುಖ್ಯ ಎಂದು ‘‘ಉಳುವವನೇ ಭೂ ಒಡೆಯ’’ ಎಂದು 1/1974ರ ತಿದ್ದುಪಡಿ ಸಾರಿತು. ಈ ತಿದ್ದುಪಡಿ ಮೂಲಕವೇ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಅಡಿ ಕಲಂ 79ಎ, 79ಬಿ ಮತ್ತು 79ಸಿ ಯನ್ನು ಸೇರ್ಪಡೆ ಮಾಡಿರುವುದು. 1974ರ ತಿದ್ದುಪಡಿಯ ಪ್ರಮುಖ ಉದ್ದೇಶ ಜಮೀನ್ದಾರಿ ಪದ್ಧತಿ- ಜೀತಪದ್ಧತಿ ನಿರ್ಮೂಲನೆ ಮಾಡುವುದು, ಕೃಷಿ ಉತ್ಪಾದನೆ ಹೆಚ್ಚಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದಾಗಿತ್ತು. ಜೊತೆಗೆ ದೇಶ ರಕ್ಷಣಾ ಸೇವೆಯಲ್ಲಿರುವವರನ್ನು ಬಿಟ್ಟರೆ ಗೇಣಿಗೆ ನೀಡುವುದನ್ನು ರದ್ದು ಮಾಡಲಾಯಿತು. 1974ರ ತಿದ್ದುಪಡಿ ದೇಶದಲ್ಲಿಯೇ ಅತ್ಯಂತ ಕ್ರಾಂತಿಕಾರಕ ಹೆಜ್ಜೆ ಎಂದು ಪ್ರಶಂಸಿಸಲಾಯಿತು.

1974ರ ತಿದ್ದುಪಡಿಯ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಮುಂದೆ ತಿದ್ದುಪಡಿಗೆ ವಿರುದ್ಧವಾಗಿ ಗೇಣಿಗೆ ನೀಡಿದ ಜಮೀನನ್ನು ಮಾಲಕ ಹಿಂಪಡೆಯದಂತೆ ಮಾಡಿದ ತಿದ್ದುಪಡಿ ಮಾಲಕನ ಹಕ್ಕನ್ನು ಕಿತ್ತುಕೊಂಡಂತಾಗಿದೆ, ಆದ್ದರಿಂದ ಸಂವಿಧಾನ ವಿರೋಧಿ ಎಂದು ವಾದ ಮಂಡಿಸಲಾಯಿತು. ಆದರೂ ಸರ್ವೋಚ್ಚ ನ್ಯಾಯಾಲಯ ತಿದ್ದುಪಡಿ ಸಂವಿಧಾನದ ರಾಜನೀತಿಯ ನಿರ್ದೇಶಕ ತತ್ವಗಳ ಅಡಿ ಅನುಚ್ಛೇದ 39 (ಬಿ) ಮತ್ತು (ಸಿ) ಗೆ ಅನುಗುಣವಾಗಿದೆ ಮತ್ತು ಮೂಲ ಭೂ ಸುಧಾರಣಾ ಕಾಯ್ದೆ ಹಾಗೂ 1974ರ ತಿದ್ದುಪಡಿ ಎರಡನ್ನೂ 9ನೇ ಷೆಡ್ಯೂಲ್‌ನಲ್ಲಿ ಸೇರಿಸಲಾಗಿದೆ ಎಂದು ಭೂಮಾಲಕರ ಪರವಾಗಿ ತಿದ್ದುಪಡಿ 1/1974ನ್ನು ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು 23.04.1987ರಂದು ‘ಎಚ್.ಎಸ್. ಶ್ರೀನಿವಾಸ್ ರಾಘವಾಚಾರ್ ಮತ್ತು ಇತರರ ವಿರುದ್ಧ ಕರ್ನಾಟಕ ಸರಕಾರ’ ಎಂಬ ಪ್ರಕರಣದಲ್ಲಿ ವಜಾ ಮಾಡಿ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿಹಿಡಿಯಿತು.

1974ರ ತಿದ್ದುಪಡಿ ಸಂವಿಧಾನದ ಯಾವ ಮೂಲ ತತ್ವಗಳಿಗೂ ವಿರೋಧವಾಗಿಲ್ಲವೆಂದು ಸಾರಿತು. 1974ರ ತಿದ್ದುಪಡಿ ಪೂರ್ವದಲ್ಲಿ ಇದ್ದ ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಉಳುವವನಿಗೆ ಮಾಲಕತ್ವ ನೀಡುವ ಬದಲು ಭೂ ಮಾಲಕನೇ ಉಳುಮೆದಾರ ಎನ್ನುವ ವ್ಯವಸ್ಥೆ ಇತ್ತು. ಅದು ಭೂಮಾಲಕರಿಗೆ ವರವಾಗಿತ್ತು. ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದ ಕಲಂ 79ಎ, 79ಬಿ, ಮತ್ತು 79ಸಿಯನ್ನು ಈಗ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 2020ರ ಸುಗ್ರೀವಾಜ್ಞೆ ಅಡಿ ಸಂಪೂರ್ಣವಾಗಿ ಕೈ ಬಿಡಲಾಗಿದೆ. 13.07.2020ರಂದು ಈ ಸುಗ್ರೀವಾಜ್ಞೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿ ಜಾರಿಯಲ್ಲಿದೆ. ಕರ್ನಾಟಕ ಸರಕಾರ ಸಂವಿಧಾನದ ಅನುಚ್ಛೇದ 213(1) ಅಡಿಯಲ್ಲಿ ವಿಧಾಯಿ ಅಧಿಕಾರದ ಮೂಲಕ ಅಂಕಿತ ಪಡೆದು ಈ ಹೊಸ ತಿದ್ದುಪಡಿಯನ್ನು ಜಾರಿ ಮಾಡಿದೆ. ವಿಧಾನ ಮಂಡಲದ ವಿರಾಮ ಕಾಲದಲ್ಲಿ ಈ ಅಧ್ಯಾದೇಶವನ್ನು ಪೂರ್ವಾನ್ವಯವಾಗಿ ಅನ್ವಯಿಸುವಂತೆ ಆದೇಶಿಸಿ ಜಾರಿಗೊಳಿಸಲಾಗಿದೆ. ಇದು ವಿಶೇಷವಾದ ರಾಜ್ಯಪಾಲರ ಅಧಿಕಾರ. ಈ ಅಧಿಕಾರವನ್ನು ಚಲಾಯಿಸಲು ರಾಜ್ಯಪಾಲರಿಗೆ ತೃಪ್ತಿಯಾಗುವಂತಹ ವಸ್ತುನಿಷ್ಠ ಕಾರಣಗಳನ್ನು ನೀಡಬೇಕು. ವಿಧಾನಮಂಡಲದ ವಿರಾಮದ ಕಾಲದಲ್ಲಿ ಈ ತಿದ್ದುಪಡಿಯನ್ನು ತಂದಿರುವುದರಿಂದ, ವಿಧಾನ ಮಂಡಲದಲ್ಲಾಗಲಿ ಅಥವಾ ಸಾರ್ವಜನಿಕರ ಅಭಿಪ್ರಾಯಕ್ಕನುಗುಣವಾದ ಸುದೀರ್ಘ ಚರ್ಚೆಗಳೇ ನಡೆದಿಲ್ಲ.

ಪ್ರಸ್ತುತ ಸುಗ್ರೀವಾಜ್ಞೆ 1961ರ ಭೂ ಸುಧಾರಣಾ ಕಾಯ್ದೆಗೆ ಈ ಕೆಳಕಂಡ ಕೆಲವು ಬಹಳ ಮಹತ್ತರವಾದ ಬದಲಾವಣೆಗಳನ್ನು ತಂದಿದೆ: (1) 5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆ ಭೂಮಿಯನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. (2) ನೀರಾವರಿಯೇತರ ಜಮೀನಾಗಿದ್ದು, ಒಂದು ಕುಟುಂಬದಲ್ಲಿ 5 ಸದಸ್ಯರಿಗಿಂತ ಹೆಚ್ಚು ಇದ್ದರೆ ಹಿಂದೆ 20 ಯೂನಿಟ್ (108 ಎಕರೆ) ಹೊಂದಬಹುದಿತ್ತು. ಈಗ ಅದನ್ನು ಕಲಂ 63ರ ಅಡಿ 216 ಎಕರೆಗೆ ಹೆಚ್ಚಿಸಲಾಗಿದೆ. (3) ರೈತರಲ್ಲದವರಿಗೆ ಕೃಷಿ ಭೂಮಿಯನ್ನು ವರ್ಗಾವಣೆ ಮಾಡಲಾಗದು ಎಂಬ ಕಲಂ 80ರ ಅಡಿ ಇದ್ದ ನಿರ್ಬಂಧವನ್ನು (ಎ ದರ್ಜೆಯ ನೀರಾವರಿಗೆ ಒಳಪಡಿಸಿರುವ ಹಾಗೂ ಅಚ್ಚುಕಟ್ಟು ಪ್ರದೇಶವನ್ನು ಹೊರತುಪಡಿಸಿ) ತೆಗೆದು ಹಾಕಲಾಗಿದೆ. (4) ಕೃಷಿ ಕುಟುಂಬಕ್ಕೆ ಸೇರಿದವರು, ಹೆಚ್ಚಿನ ಆದಾಯ ಇರುವವರು ಕೃಷಿ ಜಮೀನನ್ನು ಖರೀದಿಸಿದ ಪ್ರಸಂಗದಲ್ಲಿ ಅದನ್ನು ಸರಕಾರದ ಸುಪರ್ದಿಗೆ ಪಡೆಯಲು ಕಲಂ 79ಎ ಮತ್ತು 79ಬಿ ಅಡಿ ಪ್ರಕರಣ ದಾಖಲಿಸಲು, ಕಾಯ್ದೆ ಉಲ್ಲಂಘಿಸಿದ್ದು ದೃಡಪಟ್ಟರೆ ಕಲಂ 79ಸಿ ಅಡಿ ಮುಟ್ಟುಗೋಲು ಹಾಕಿಕೊಳ್ಳಲು ಇದ್ದ ಅವಕಾಶವನ್ನು ಸುಗ್ರೀವಾಜ್ಞೆಯಲ್ಲಿ ಕೈಬಿಡಲಾಗಿದೆ. ಈಗಾಗಲೇ ಅಂತಿಮವಾಗಿ ತೀರ್ಮಾನವಾಗಿರುವ ಪ್ರಕರಣಗಳನ್ನು ಬಿಟ್ಟರೆ, ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನೂ ಈ ಹೊಸ ತಿದ್ದುಪಡಿಯ ಪ್ರಕಾರ ಕಾಯ್ದೆ ಉಲ್ಲಂಘನೆಯಾಗಿದ್ದರೂ ಮುಕ್ತಾಯಗೊಳಿಸಲು ದಾರಿ ಮಾಡಿ ಕೊಟ್ಟಿದೆ. ಈ ಸಂಬಂಧ 40,000ಕ್ಕೂ ಹೆಚ್ಚು ವಿಚಾರಣೆಯಾಗದ ಪ್ರಕರಣಗಳಿವೆ ಎಂದು ಹೇಳಲಾಗುತ್ತಿದೆ. (5) ಭೂ ಮಾಲಕತ್ವವನ್ನು ಪಡೆಯಲು ಕಠಿಣ ಷರತ್ತುಗಳನ್ನು ಹಾಕಿದ್ದ ಕಲಂ 79ಎ, 79ಬಿ ಮತ್ತು 79ಸಿಯನ್ನು ಸಂಪೂರ್ಣವಾಗಿ ಹೊಸ ಕಾಯ್ದೆಯ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ. ಇದರ ಪರಿಣಾಮ ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಬೇಲಿಯೊಂದನ್ನು ಕಿತ್ತು ಹಾಕಿದಂತಾಗಿದೆ.

2020ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಭೂ ಸುಧಾರಣೆಯ ಮಹದುದ್ದೇಶವನ್ನೇ ಬುಡಮೇಲು ಮಾಡಿದೆ. ವಿಶೇಷವೆಂದರೆ ಕಾಯ್ದೆಯ ಹೆಸರಿನಲ್ಲೇ ‘ಸುಧಾರಣೆ’ ಎಂಬ ಪದ ಇದೆ. ಆದ್ದರಿಂದ ಕಾಯ್ದೆ ಅಡಿಯಲ್ಲಿ ಆಗಬಹುದಾದ ಎಲ್ಲಾ ಬದಲಾವಣೆಗಳೂ ತಿದ್ದುಪಡಿಯ ರೂಪದಲ್ಲಿ ಸುಧಾರಣೆ ದಿಕ್ಕಿನಲ್ಲೇ ಇರಬೇಕು. ಸಂವಿಧಾನದ ಆಶಯ ಹಾಗೂ ಕಾಯ್ದೆಯ ಉದ್ದೇಶ ಉಲ್ಲಂಘನೆಯಾಗಬಾರದು. ಪ್ರಸ್ತುತ ತಿದ್ದುಪಡಿಯ ಪರಿಣಾಮಗಳನ್ನು ಅವಲೋಕಿಸಿದಾಗ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಯ ಪ್ರಾಮುಖ್ಯತೆಯೇ ಹೊರಟು ಹೋದಂತೆ ಭಾಸವಾಗುತ್ತಿದೆ. ಹೊಸ ತಿದ್ದುಪಡಿಯ ಪರಿಣಾಮಗಳು ತುಂಬಾ ಆಘಾತಕಾರಿ. ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡುವ ಉದ್ದೇಶವೇ ಭೂ ಸುಧಾರಣಾ ಕಾಯ್ದೆಗೆ ದಾರಿಮಾಡಿಕೊಡಲು. ಈ ಉದ್ದೇಶ ನಮ್ಮ ದೇಶದಲ್ಲಿ ಸ್ವ್ವಾತಂತ್ರಪೂರ್ವದಿಂದಲೂ ಅಶಕ್ತ ಭೂರಹಿತರಿಗೆ ನೀಡಿದ ಅಚಲವಾದ ಭರವಸೆ. ಈ ತಿದ್ದುಪಡಿ ಜಮೀನ್ದಾರಿ ಪದ್ಧತಿಗೆ ಮತ್ತೆ ಉತ್ತೇಜನ ಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲ ಕೃಷಿ ಭೂಮಿ ಕಡಿಮೆಯಾಗಿ ಕೃಷಿ ಉತ್ಪನ್ನಕ್ಕೇ ಮಾರಕವಾಗಲಿದೆ. ಜೊತೆಗೆ ಗ್ರಾಮಾಂತರ ಪ್ರದೇಶದ ಆರ್ಥಿಕ ಸ್ಥಿತಿಗೆ ತುಂಬಲಾಗದ ಪೆಟ್ಟು ಬೀಳಲಿದೆ. ಹಣವಂತರು ಕೃಷಿಭೂಮಿಯನ್ನು ಖರೀದಿಸಿ ಕೃಷಿಯೇತರ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳು ಜಾಸ್ತಿ ಇದೆ. ಆಗ ಜಮೀನಿನಲ್ಲಿ ಇದ್ದ ಗಿಡಮರಗಳು ಸ್ವಾಭಾವಿಕವಾಗಿ ನಾಶವಾಗುತ್ತವೆ. ಅದು ಹವಾಮಾನ ದುಷ್ಪರಿಣಾಮಕ್ಕೆ ಎಡೆಮಾಡಿಕೊಡುತ್ತದೆ. ಕೃಷಿ ಭೂಮಿಗಳು ಮತ್ತೆ ಹಣವಂತರ ಕೈ ಸೇರಲಿವೆ. ಬಡ ರೈತರು ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿ, ಸಾಮಾಜಿಕ ಹಾಗೂ ಆರ್ಥಿಕ ಅತಂತ್ರ ಜೀವನಕ್ಕೆ ಬಲಿಯಾಗುವುದಂತೂ ನಿಜ.

ಇಂದಿಗೂ ನಮ್ಮ ದೇಶದಲ್ಲಿ ಶೇ. 20ಕ್ಕಿಂತ ಹೆಚ್ಚು ಜನರು ಭೂಮಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಗೇಣಿ ಮೂಲಕ ಕೃಷಿ ಜಮೀನಿನ ಮಾಲಕತ್ವ ಪಡೆದವರ ಸಂಖ್ಯೆ 15 ಲಕ್ಷಕ್ಕೂ ಮೀರಿದೆ. ಲಕ್ಷಾಂತರ ಕೃಷಿಕಾರ್ಮಿಕರು ಕೂಡ ಭೂ ಸುಧಾರಣಾ ಶಾಸನದಡಿಯಲ್ಲಿ ಭೂ ಒಡೆತನ ಪಡೆದರು. ಬಡತನಕ್ಕೆ ಒಳಗಾದ ಕೃಷಿಕ ಹಣದ ಆಸೆಗೆ ಬಲಿಯಾಗುವುದುಂಟು. ಅದಕ್ಕಾಗಿಯೇ 1978ರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಜಮೀನು ವರ್ಗಾವಣೆ ನಿರ್ಬಂಧ) ಕಾಯ್ದೆ ಅಡಿ ಜಮೀನು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕಾಗುತ್ತದೆ. ಹೊಸ ಕಾಯ್ದೆ ಪ್ರಯುಕ್ತ ಬಹುತೇಕ ಸಣ್ಣ ಭೂಮಾಲಕರು ಮತ್ತೆ ಶಾಶ್ವತ ಕೃಷಿ ಕೂಲಿಕಾರರಾಗುತ್ತಾರೆ. ಭೂಮಿ ಸಾಮಾಜಿಕ ಬದುಕಿಗೆ ಭದ್ರತೆ ನೀಡುತ್ತದೆ, ನಿರುದ್ಯೋಗ ಹೆಚ್ಚಾಗಲಿದೆ. ಅದರಿಂದ ದುಡಿಯುವ ವರ್ಗಕ್ಕೆ ಹೆಚ್ಚು ಹೆಚ್ಚು ತೆರಿಗೆ ಬೀಳುತ್ತದೆ. ಜಮೀನ್ದಾರಿ ಪದ್ಧತಿ ಪುನರ್ಜನ್ಮ ಪಡೆಯುತ್ತದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಉದ್ದೇಶ ಭಾರತ ಸಂವಿಧಾನದ ರಾಜನೀತಿ ತತ್ವಗಳ ಅನುಚ್ಛೇದ 39(ಬಿ) ಮತ್ತು (ಸಿ) ಅಡಿಯಲ್ಲಿರುವ ತತ್ವಕ್ಕನುಗುಣವಾಗಿ ಜಾರಿಮಾಡಲಾಗಿದೆ. ಈ ತತ್ವದ ಉದ್ದೇಶ ಭೂ ಸುಧಾರಣಾ ಕಾಯ್ದೆ ಯವಾಗಲೂ ಕೃಷಿ ಅಭಿವೃದ್ಧ್ದಿಗೆ ಪೂರಕವಾಗಿರಬೇಕು. ದೇಶದಲ್ಲಿ ಕೃಷಿ ಉತ್ಪಾದನೆ ಗರಿಷ್ಠ ಮಟ್ಟಕ್ಕೆ ಏರಬೇಕು.

ಆ ತತ್ವಗಳ ಉಲ್ಲಂಘನೆ ಆಗಿಲ್ಲವೆಂಬ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯ 1974ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಊರ್ಜಿತವೆಂದು ಎತ್ತಿ ಹಿಡಿಯಿತು. 1974ರ ತಿದ್ದುಪಡಿ ತಂದ ಬಹುಮುಖ್ಯವಾದ ಅಂಶವೆಂದರೆ ಭೂ ಮಾಲಕರು ತನ್ನ ಸ್ವಂತ ವ್ಯವಸಾಯಕ್ಕೋಸ್ಕರವಾಗಲೀ ಅಥವಾ ವ್ಯವಸಾಯೇತರ ಉದ್ದೇಶಕ್ಕಾಗಿ ಬಳಸುವ ಉದ್ದೇಶಕ್ಕೆ ಗೇಣಿದಾರನಿಂದ ಜಮೀನನ್ನು ಹಿಂಪಡೆಯುವ ಹಕ್ಕನ್ನು ರದ್ದು ಮಾಡಿದ್ದಾಗಿತ್ತು. ಊರ್ಜಿತವೆಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿದ ಆ ಕಾಯ್ದೆಗೆ 45 ವರ್ಷಗಳ ನಂತರ ಈಗ ತಿದ್ದುಪಡಿ ತರಲಾಗಿದೆ. ಸಂವಿಧಾನದ ಗುರಿ ಸಮ ಸಮಾಜ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸಾಮಾಜಿಕ, ಆರ್ಥಿಕ ನ್ಯಾಯ ಸರ್ವರಿಗೂ ಸಿಗಬೇಕೆಂದು ಸಾರಲಾಗಿದೆ. ಭೂ ಸುಧಾರಣೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗೆ ಒಂದು ಸನ್ಮಾರ್ಗ. ನಮ್ಮ ಸಂವಿಧಾನ ಜಾರಿಗೆ ಬರುವ ಮೊದಲೇ 1888ರ ಮೈಸೂರು ರೆವಿನ್ಯೂ ಕೋಡಿನ ಕಲಂ 79ರ ಅಡಿ ‘‘ಬೇಸಾಯಗಾರನಾದ ರೈತನಿಗೆ ಸಂಪೂರ್ಣ ರಕ್ಷಣೆಯಿದೆ’’ ಎಂದು ಹೇಳಲಾಗಿದೆ.

ಈ ತತ್ವವೇ ಭೂ ಸುಧಾರಣಾ ಕಾಯ್ದೆ ಅಡಿ ಗೇಣಿದಾರನಿಗೆ ಜಮೀನಿನ ಮಾಲಕತ್ವ ನೀಡುವ ನಿರ್ಧಾರಕ್ಕೆ ಸಹಕಾರಿಯಾಗಿದೆ ಹಾಗೂ ಭೂ ಸುಧಾರಣಾ ಕಾಯ್ದೆ ಯಾವತ್ತೂ ಅನಿವಾರ್ಯ ಎಂದು ಹೇಳಬಹುದು. ಒಟ್ಟಿನಲ್ಲಿ ಪ್ರಸ್ತುತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಉಳುವವನೇ ‘ಭೂ ಒಡೆಯ’ ಎನ್ನುವ ನೀತಿಗೆ ಬದಲಾಗಿ ಹಣ ಇರುವವನೇ ಭೂ ಒಡೆಯ ಎಂಬಂತಾಗಿದೆ. 1974ರ ತಿದ್ದುಪಡಿಗೆ ಮೊದಲು ಇದ್ದ ಭೂ ಸುಧಾರಣಾ ಕಾಯ್ದೆಯನ್ನು ರೈತರಿಗೆ ಅನುಕೂಲವಾಗುವ ಬದಲು ಕಾಳಸಂತೆಕೋರರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಗೇಣಿದಾರರ ಭೂಮಿ ಹಕ್ಕಿಗಾಗಿ ಕ್ರಾಂತಿಕಾರಿ ಹೋರಾಟ ರೂಪಿಸಿದ ಶಾಂತವೇರಿ ಗೋಪಾಲಗೌಡರು ಹೇಳುತ್ತಿದ್ದರು. ಅಂತಹ ಸಂದರ್ಭಗಳು ಮರುಕಳಿಸಬಾರದು. ಕೃಷಿ ಭೂಮಿ ರೈತನ ಜೀವಾಳ. 2020ರ ಕಾಯ್ದೆ 6 ವಾರಗಳ ಒಳಗಾಗಿ ವಿಧಾನಮಂಡಲದ ಮುಂದೆ ಚರ್ಚೆಗೆ ಸಂವಿಧಾನದ ಅನುಚ್ಛೇದ 213 (2)(ಎ) ಪ್ರಕಾರ ಬರಬೇಕಾಗಿದೆ. ಅನುಚ್ಛೇದ 213 (2) (ಬಿ) ಅಡಿಯಲ್ಲಿ ರಾಜ್ಯಪಾಲರು ಕಾಯ್ದೆಯನ್ನು ಹಿಂಪಡೆಯಲೂಬಹುದು. 2020ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಯಥಾವತ್ತಾಗಿ ಉಳಿದಲ್ಲಿ ನ್ಯಾಯಾಲಯ ಅನೂರ್ಜಿತಗೊಳಿಸುವ ಸಾಧ್ಯತೆಗಳೇ ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News