ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ಮೈಸೂರು ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್

Update: 2020-08-22 14:11 GMT
ಪ್ರಶಾಂತ್ ಕುಮಾರ್ ಮಿಶ್ರ

ಮೈಸೂರು,ಆ.22: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಕರಣ ಸಂಬಂಧ ಮೃತ ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ತಂದೆ ಟಿ.ಎಸ್.ರಾಮಕೃಷ್ಣ ಅವರು ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಮಾಡಿ ದೂರು ನೀಡಲಾಗಿತ್ತು. ಇದೀಗ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ವಿರುದ್ಧ ಐಪಿಸಿ 1860, 306 ರಡಿ ಎಫ್ಐಆರ್ ದಾಖಲಾಗಿದೆ.

ದೂರಿನ ಸಾರಾಂಶ: ನನ್ನ ಮಗ ಡಾ.ನಾಗೇಂದ್ರ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯಾಗಿ ಹೆಚ್ಚುವರಿ ಪ್ರಬಾರ ವಹಿಸಿದ್ದರ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದಕ್ಕೆ ಅವಶ್ಯಕ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ಇದೆ ಎಂದು ಜಿಲ್ಲಾಧಿಕಾರಿ, ಡಿಎಚ್‍ಓ, ಜಿ.ಪಂ. ಸಿಇಒ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸಿದ್ದರೂ ಯಾವ ಸೌಲಭ್ಯವನ್ನೂ ಪೂರೈಸಿರಲಿಲ್ಲ. ಕೊನೆಗೆ ತನ್ನನ್ನು ಹೆಚ್ಚುವರಿ ಪ್ರಭಾರದ ಕರ್ತವ್ಯದಿಂದ ವಿಮುಕ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಸಿಇಒ ಇನ್ನೂ ಹೆಚ್ಚುವರಿಯಾಗಿ ಕೆಲಸದ ಟಾರ್ಗೆಟ್ ನೀಡಿ ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದರು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದರು. ಸಿಇಒ ಒತ್ತಡದಿಂದ ಕಾರ್ಯನಿರ್ವಹಿಸಲಾಗದೆ ಮನನೊಂದು ನನ್ನ ಮಗನ ಆತ್ಮಹತ್ಯೆ ಮಾಡಿದ್ದು, ಇದಕ್ಕೆ ಪ್ರೇರಣೆ ನೀಡಿದ್ದ ಜಿ.ಪಂ. ಸಿಇಒ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಾಗೇಂದ್ರ ಅವರ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News